ADVERTISEMENT

ಗೃಹಲಕ್ಷ್ಮೀ ಗ್ಯಾರಂಟಿ: ಇಬ್ಬರು ಪತ್ನಿಯರಿದ್ದರೆ ಯಾರು ಯಜಮಾನಿ?: ಪ್ರತಾಪ ಸಿಂಹ ಲೇವಡಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 15:56 IST
Last Updated 3 ಜೂನ್ 2023, 15:56 IST
ಸಂಸದ ಪ್ರತಾಪ ಸಿಂಹ
ಸಂಸದ ಪ್ರತಾಪ ಸಿಂಹ   

ಮೈಸೂರು: ‘ಸುಭಿಕ್ಷಾ ರಾಜ್ಯ ಕರ್ನಾಟಕವನ್ನು ಕಾಂಗ್ರೆಸ್ ಭಿಕ್ಷಾ ರಾಜ್ಯವನ್ನಾಗಿ ಮಾಡುತ್ತಿದೆ’ ಎಂದು ಸಂಸದ ಪ್ರತಾಪ ಸಿಂಹ ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಚುನಾವಣೆಗೂ ಮೊದಲು ಹಳ್ಳಿ– ಹಳ್ಳಿಗಳಲ್ಲಿ ಗ್ಯಾರಂಟಿಗಳ ಬಗ್ಗೆ ಡಂಗೂರ ಸಾರಿದ್ದರು. ಆದರೆ, ಈಗ ಹಲವು ಷರತ್ತುಗಳನ್ನು ಹಾಕುತ್ತಿದ್ದಾರೆ. 200 ಯುನಿಟ್ ವಿದ್ಯುತ್ ಉಚಿತ ಎಂದವರು ಈಗ ಸರಾಸರಿ ಲೆಕ್ಕಹಾಕಿ ನೀಡುತ್ತೇವೆ ಎನ್ನುತ್ತಿರುವುದು ಮೋಸ’ ಎಂದು ದೂರಿದರು.

‘ಜನಧನ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಈಗಾಗಲೇ ಜೋಡಿಸಿದ್ದರೂ ‘ಗೃಹಲಕ್ಷ್ಮಿ’ ಜಾರಿ ಮಾಡುತ್ತಿಲ್ಲ. ಯೋಜನೆ ಜಾರಿಯನ್ನು ಮುಂದೂಡಲು ನೆಪ ಹೇಳುತ್ತಿದ್ದಾರೆ. ಮನೆಯ ಯಜಮಾನಿ ಯಾರು ಎಂದು ಕುಟುಂಬದವರೇ ನಿರ್ಧಾರ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅತ್ತೆ, ಸೊಸೆ ಕೂತು ತೀರ್ಮಾನ ಮಾಡಲು ಸಾಧ್ಯವೇ? ಮುಸ್ಲಿಂ ಕುಟುಂಬದಲ್ಲಿ ಇಬ್ಬರು ಪತ್ನಿಯರಿದ್ದರೆ ಅವರಲ್ಲಿ ಯಾರು ಯಜಮಾನಿ ಆಗುತ್ತಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ಲೋಕಸಭಾ ಚುನಾವಣೆವರೆಗೆ ಜನರನ್ನು ಗ್ಯಾರಂಟಿ ಜಾರಿ ಹೆಸರಿನಲ್ಲಿ ಮಂಗ್ಯಾ ಮಾಡುತ್ತಾರೆ. ಕಾಂಗ್ರೆಸ್ ನೀತಿಗಳಿಂದ ರಾಜ್ಯ ದಿವಾಳಿ ಆಗುತ್ತಿದೆ. ಆಸ್ತಿ ನೋಂದಣಿ, ಮದ್ಯದ ತೆರಿಗೆ ಸೇರಿ ಎಲ್ಲಾ ರೀತಿಯ ತೆರಿಗೆ ಹೆಚ್ಚಿಸುತ್ತಾರೆ. ಕರ್ನಾಟಕಕ್ಕೆ ಶ್ರೀಲಂಕಾ ಸ್ಥಿತಿ ಬರುವ ಕಾಲ ದೂರವಿಲ್ಲ. ಕೇಜ್ರಿವಾಲ್ 2013ರಲ್ಲಿ ಕಳಪೆ ಫ್ರೀ ಯೋಜನೆ ತಂದಿದ್ದರು. ಈಗ ಅದನ್ನೇ ಕಾಂಗ್ರೆಸ್ ಸರ್ಕಾರ ಮಾಡಿದೆ. ಇದು ಕರ್ನಾಟಕ ಮಾದರಿಯಲ್ಲ. ಇದನ್ನು ಹಲವು ಪಕ್ಷಗಳು ಜಾರಿ ಮಾಡಿ ಜನರನ್ನು ಮಂಗ್ಯಾ ಮಾಡಿವೆ. ಕಾಂಗ್ರೆಸ್‌ನ ಪ್ರಣಾಳಿಕೆ ಈಡೇರಿಸಲು ಕೇಂದ್ರ ಬಜೆಟ್ ಹಣ ತಂದರೂ ಆಗಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.