ADVERTISEMENT

‘ಪ್ರತಿಬಿಂಬ’ ಕೃತಿ ಬಿಡುಗಡೆ ಮಾಡಿದ ಚನ್ನಬಸವ ಸ್ವಾಮೀಜಿ

‘ಪ್ರತಿಬಿಂಬ’ ಕೃತಿ ಬಿಡುಗಡೆ ಮಾಡಿದ ಚನ್ನಬಸವ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 5:20 IST
Last Updated 5 ಅಕ್ಟೋಬರ್ 2025, 5:20 IST
ಮೈಸೂರಿನ ಹೊಸಮಠ ನಟರಾಜ ಸಭಾಭವನದಲ್ಲಿ ಶನಿವಾರ ನಗರ್ಲೆ ಶಿವಕುಮಾರ ವಿರಚಿತ ‘ಪ್ರತಿಬಿಂಬ’ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು
ಮೈಸೂರಿನ ಹೊಸಮಠ ನಟರಾಜ ಸಭಾಭವನದಲ್ಲಿ ಶನಿವಾರ ನಗರ್ಲೆ ಶಿವಕುಮಾರ ವಿರಚಿತ ‘ಪ್ರತಿಬಿಂಬ’ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು   

ಮೈಸೂರು: ‘ಧರ್ಮ ರಕ್ಷಿಸಬೇಕಾದವರು ಅನ್ಯ ಮಾರ್ಗ ಹಿಡಿದಿದ್ದಾರೆ. ನುಡಿದಂತೆ ನಡೆಯುವುದು ಕಷ್ಟಸಾಧ್ಯವಾಗಿದೆ. ಇವುಗಳ ನಡುವೆ ಆಶಾಭಾವನೆ ಇಟ್ಟುಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ’ ಎಂದು ನವಿಲೂರಿನ ಕಡಲಕಟ್ಟೆ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.

ಚಂದ್ರು ಸೇವಾ ಬಳಗವು ಇಲ್ಲಿನ ಖಿಲ್ಲೆ ಮೊಹಲ್ಲಾದ ಹೊಸಮಠ ನಟರಾಜ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಚಂದ್ರು ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ನಗರ್ಲೆ ಶಿವಕುಮಾರ ಅವರ ‘ಪ್ರತಿಬಿಂಬ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮನುಷ್ಯ ಈಚೆಗೆ ದೈಹಿಕ ಶ್ರಮಕ್ಕಿಂತಲೂ ಮಾನಸಿಕ ಒತ್ತಡಗಳಿಗೆ ಬಲಿಯಾಗುತ್ತಿದ್ದಾನೆ. ನ್ಯಾಯ, ನೀತಿ, ಧರ್ಮ ಯಾರಿಗೂ ಬೇಡವಾಗಿದೆ. ಅದನ್ನು ಪಾಲಿಸುವವರ ಸಂಖ್ಯೆ ವಿರಳವಾಗುತ್ತಿರುವುದು ವಿಷಾದನೀಯ. ಜೀವನ ಮೌಲ್ಯದ ಬಗ್ಗೆ ತಿಳಿಹೇಳುವ ಹಾಗೂ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು’ ಎಂದರು.

ADVERTISEMENT

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ವಿ.ಬಸವರಾಜ್‌ ಹಿನಕಲ್‌ ಮಾತನಾಡಿ, ‘ವೀರಶೈವ ಲಿಂಗಾಯತ ಧರ್ಮವನ್ನು ವಿಶ್ವಧರ್ಮವಾಗಿಸುವುದು ಸಮುದಾಯದವರ ಆದ್ಯ ಕರ್ತವ್ಯವಾಗಿದೆ. ಈ ಧರ್ಮವು ಸುದೀರ್ಘ ಹಾಗೂ ಉಜ್ವಲ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಮಾನವ ಪ್ರೇಮ, ಸಹಕಾರ, ಶಾಂತಿ, ಸವಾನತೆ, ಭಾವೈಕ್ಯದ ಉದಾತ್ತ ಮೌಲ್ಯಗಳನ್ನು ಸಾರುವ ಧರ್ಮವೇ ಲಿಂಗವಂತರ ಧರ್ಮವಾಗಿದೆ’ ಎಂದು ಹೇಳಿದರು.

ನಟರಾಜ ಪ್ರತಿಷ್ಠಾನ ವಿಶೇಷಾಧಿಕಾರಿ ಎಸ್. ಶಿವರಾಜಪ್ಪ ಮಾತನಾಡಿ, ‘ನಗರ್ಲೆ ಶಿವಕುಮಾರ್‌ ಕಲೆ, ಸಾಹಿತ್ಯ, ಸಂಸ್ಕೃತಿಯ ಆರಾಧಕರು. ‘ಪ್ರತಿಬಿಂಬ’ ಕೃತಿಯಲ್ಲಿ ಮೂರು ಭಾಗಗಳಿದ್ದು, ಮೊದಲ ಭಾಗದಲ್ಲಿ 24 ಲೇಖನಗಳಿವೆ. 2ನೇ ಭಾಗದಲ್ಲಿ 7 ಮೌಲಿಕ ಕೃತಿಗಳ ಪರಿಚಯವಿದೆ. 3ನೇ ಭಾಗದಲ್ಲಿ 17 ಕವನಗಳಿವೆ’ ಎಂದು ಪರಿಚಯಿಸಿದರು. 

ದೇವಲಾಪುರದ ಗುರುಮಲ್ಲೇಶ್ವರದ ದಾಸೋಹ ಮಠದ ಜಡೆ ಸ್ವಾಮೀಜಿ, ಬಸಳ್ಳಿಹುಂಡಿ ಗುರು ಮಲ್ಲೇಶ್ವರ ದಾಸೋಹ ಮಠದ ಬಸವರಾಜ ಸ್ವಾಮಿ, ಸೈಬರ್ ಅಪರಾಧ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಎಸ್.ಪಿ. ಸುನೀಲ್, ಹೊಸಮಠದ ಚಿದಾನಂದ ಸ್ವಾಮೀಜಿ, ಸಾಹಿತಿ ನಗರ್ಲೆ ಶಿವಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.