ADVERTISEMENT

ನಾಡಿನ ಸುಭಿಕ್ಷೆಗೆ ಪ್ರಾರ್ಥನೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 14:19 IST
Last Updated 5 ಅಕ್ಟೋಬರ್ 2022, 14:19 IST

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅರಮನೆ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಬುಧವಾರ ಪೂಜೆ ನೆರವೇರಿಸಿದರು.

ಅರಮನೆಯ ಉತ್ತರದ ಬಲರಾಮ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ನಡೆದ ಈ ಪೂಜಾ ಕಾರ್ಯಕ್ರಮವು ವಿಜಯದಶಮಿ ಮೆರವಣಿಗೆಗೆ ಮುನ್ನುಡಿ ಬರೆಯಿತು.

ಸಂಪುಟ ಸಹೋದ್ಯೋಗಿಗಳೊಂದಿಗೆ ರಾಜ್ಯ ಸಾರಿಗೆ ಸಂಸ್ಥೆಯ ಐರಾವತ ಬಸ್‌ನಲ್ಲಿ ಬಂದ ಅವರು, ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಮಧ್ಯಾಹ್ನ 2.360ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಪೂಜೆ ನಿಗದಿಯಾಗಿತ್ತು. ಮುಖ್ಯಮಂತ್ರಿ ನೆರವೇರಿಸಿದಾಗ 2.34 ಆಗಿತ್ತು.

ADVERTISEMENT

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟದ ಕಾರಣದಿಂದಾಗಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ, ಈ ಬಾರಿ ಸಂಕಷ್ಟ ನಿವಾರಣೆ ಆಗಿರುವುದರಿಂದ ಅದ್ಧೂರಿಯಾಗಿ ನಡೆಸಲಾಗಿದೆ. ಎಲ್ಲ ಕಾರ್ಯಕ್ರಮಗಳೂ ಯಶಸ್ವಿಯಾಗಿ ನಡೆದಿವೆ’ ಎಂದರು.

‘ಈ ವರ್ಷ ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ, ಬೆಳೆಯಾಗಿ, ರಾಜ್ಯ ಸುಭಿಕ್ಷವಾಗಿರಲಿ. ನಾಡಿನ ಜನರೆಲ್ಲರಿಗೂ ಒಳಿತಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್, ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದ ಪ್ರತಾಪ ಸಿಂಹ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇದ್ದರು.

ಬಳಿಕ ಮುಖ್ಯಮಂತ್ರಿ ಹಾಗೂ ಗಣ್ಯರು ಅಲ್ಲಿಂದ ತೆರೆದ ವಾಹನದಲ್ಲಿ, ನೆರೆದಿದ್ದ ಸಾವಿರಾರು ಸಂಖ್ಯೆಯ ಜನರತ್ತ ಕೈಬೀಸುತ್ತಾ ಅರಮನೆ ಆವರಣಕ್ಕೆ ಬಂದರು. ಬಳಿಕ ಕಲಾತಂಡಗಳ ಪ್ರದರ್ಶನ ಮತ್ತು ಸ್ತಬ್ಧಚಿತ್ರಗಳನ್ನು ವೀಕ್ಷಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.