ADVERTISEMENT

ನಿಯಂತ್ರಣಕ್ಕೆ ಬಾರದ ತರಕಾರಿ ಬೆಲೆ

ತುಟ್ಟಿಯಾಗೇ ಮುಂದುವರೆದ ತರಕಾರಿ, ಮೊಟ್ಟೆ, ಧಾನ್ಯಗಳು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 10:49 IST
Last Updated 3 ಡಿಸೆಂಬರ್ 2019, 10:49 IST
ಬೀನ್ಸ್
ಬೀನ್ಸ್   

ಮೈಸೂರು: ನಗರದಲ್ಲಿ ಬೆಲೆ ಏರಿಕೆಯು ಚಳಿಗಾಲದಲ್ಲೂ ಗ್ರಾಹಕರಿಗೆ ಚುರುಕು ಮುಟ್ಟಿಸಿದೆ. ಅಗ್ಗವಾದ ವಸ್ತುಗಳೇ ಇಲ್ಲ ಎನ್ನುವಂತಾಗಿದ್ದು, ಸರಿಸುಮಾರು ಬಹುತೇಕ ಎಲ್ಲ ತರಕಾರಿಗಳು, ದವಸಧಾನ್ಯಗಳ ಬೆಲೆಗಳು ಏರುಗತಿಯಲ್ಲೇ ಸಾಗಿವೆ.

ಶುಭ ಸಮಾರಂಭಗಳನ್ನು ಮಾಡುವವರಿಗಂತೂ ಬೆಲೆ ಏರಿಕೆಯ ಬಿಸಿ ಜೋರಾಗಿಯೇ ತಟ್ಟಿದೆ. ಊಟೋಪಚಾರಗಳಿಗೆ ಹೆಚ್ಚಿನ ಹಣ ವ್ಯಯಿಸುವಂತಾಗಿದೆ. ಬಡವರು, ಕೂಲಿಕಾರ್ಮಿಕರು, ಮಧ್ಯಮವರ್ಗದವರ ಪಾಡು ಹೇಳತೀರದಾಗಿದೆ.

‘ಈರುಳ್ಳಿ ಕೆ.ಜಿಗೆ ₹ 120ನ್ನು ದಾಟಿದೆ. ಇದನ್ನು ಸಾಕಾಗುವಷ್ಟು ಪ್ರಮಾಣದಲ್ಲಿ ಅಡುಗೆಗೆ ಹಾಕದಿದ್ದರೆ ರುಚಿಸುವುದಿಲ್ಲ. ನಾವು ಕೇಳಿದಷ್ಟು ಪ್ರಮಾಣದಲ್ಲಿ ಈರುಳ್ಳಿ ತಂದುಕೊಡುತ್ತಿಲ್ಲ. ಕೊನೆಗೆ, ಊಟ ಚೆನ್ನಾಗಿಲ್ಲ ಎಂಬ ಆರೋಪ ನಮ್ಮನ್ನು ಸುತ್ತಿಕೊಳ್ಳುತ್ತಿದೆ’ ಎಂದು ಅಡುಗೆ ಕಂಟ್ರಾಕ್ಟರ್‌ ಮಹದೇವಸ್ವಾಮಿ ಹೇಳುತ್ತಾರೆ.

ADVERTISEMENT

‘ಚಳಿಗಾಲದಲ್ಲಿ ಬೆಲೆ ಏರಿಕೆ ಸಾಮಾನ್ಯ. ಆದರೆ, ಈ ಪರಿಯ ಬೆಲೆ ಏರಿಕೆಯನ್ನು ಹಿಂದೆ ಕಂಡಿರಲಿಲ್ಲ’ ಎಂದು ವ್ಯಾಪಾರಿ ನಂಜುಂಡ ಪ್ರತಿಕ್ರಿಯಿಸುತ್ತಾರೆ.

ಒಂದು ಕಡೆ ಇಬ್ಬನಿ ಮತ್ತೊಂದು ಕಡೆ ಜಿಟಿಜಿಟಿ ಮಳೆ. ಇವುಗಳಿಂದ ತರಕಾರಿಗಳ ಇಳುವರಿ ತೀರಾ ಕಡಿಮೆಯಾಗಿದೆ. ಬೆಲೆ ಏರಿಕೆಯಾಗಿದೆ ಎಂದು ಅನ್ನಿಸಿದರೂ ಅದು ಬೆಳೆಗಾರರನಿಗೆ ಲಾಭ ತರಿಸುತ್ತಿಲ್ಲ.

ಒಂದು ಕಡೆ ಸಗಟು ಬೆಲೆ ಮಂದಗತಿಯಲ್ಲಿ ಏರಿಕೆ ಕಾಣುತ್ತಿದ್ದರೆ ಮತ್ತೊಂದೆಡೆ ಚಿಲ್ಲರೆ ಬೆಲೆಗಳು ಶರವೇಗದಲ್ಲಿ ಹೆಚ್ಚುತ್ತಿವೆ. ಇದರಲ್ಲಿ ದಲ್ಲಾಳಿಗಳು ಅಧಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಬೀನ್ಸ್‌ ಧಾರಣೆ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ರೈತರಿಗೆ ಕೆ.ಜಿಗೆ ₹ 10ರಿಂದ ₹ 18ರವರೆಗೆ ಸಿಗುತ್ತಿದೆ. ಆದರೆ, ಇದು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 30ರಿಂದ ₹ 40ರವರೆಗೂ ಇದೆ. ಎರಡರಿಂದ ಮೂರುಪಟ್ಟು ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ.

ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಈ ವಾರ ಒಂದು ಮೊಟ್ಟೆಗೆ ₹ 4.67 ಇದೆ. ಚಳಿಗಾಲ ಆಗಿರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ. ಧಾನ್ಯಗಳ ಪೈಕಿ ತೊಗರಿಬೇಳೆ ಸಗಟು ಬೆಲೆ ₹ 96, ಉದ್ದಿನಬೇಳೆ ₹ 120, ಹೆಸರುಬೇಳೆ ₹ 92, ಹೆಸರುಕಾಳು ₹ 86 ಇದೆ.

ಬಾಳೆಹಣ್ಣಿಗೆ ಹೆಚ್ಚಿನ ಬೆಲೆ ಇಲ್ಲ

ಯಾವಾಗಲೂ ಏಲಕ್ಕಿ ಬಾಳೆಹಣ್ಣು ನಗರದ ಮಾರುಕಟ್ಟೆಯಲ್ಲಿ ಕನಿಷ್ಠ ಎಂದರೂ ಕೆ.ಜಿಗೆ ₹ 50ರಿಂದ ₹ 60 ಆದರೂ ಇರುತ್ತಿತ್ತು. ಆದರೆ, ಈ ಬಾರಿ ದರ ₹ 40ರ ಆಸುಪಾಸಿನಲ್ಲೇ ಇದೆ. ಬೆಳೆದ ರೈತರಿಗಂತೂ ಸಿಗುತ್ತಿರುವ ದರ ಏನೇನೂ ಸಾಲದಾಗಿದೆ.

‘ಒಂದು ಕೆ.ಜಿಗೆ ಬಾಳೆಹಣ್ಣಿಗೆ ₹ 28 ಸಿಕ್ಕರೆ ಒಂದಿಷ್ಟು ಲಾಭ ಎನ್ನಬಹುದು. ಆದರೆ, ಈಗ ಒಮ್ಮೊಮ್ಮೆ ₹ 20ಕ್ಕಿಂತಲೂ ಕಡಿಮೆ ದರ ಸಿಗುತ್ತಿದೆ. ಇದರಿಂದ ನಷ್ಟವಾಗುತ್ತಿದೆ’ ಎಂದು ನಂಜನಗೂಡಿನ ರೈತರ ಭೋಗನಂಜಪ್ಪ ಹೇಳುತ್ತಾರೆ.

ಮೈಸೂರು ಎಪಿಎಂಸಿ ಧಾರಣೆ ವಿವರ

ಟೊಮೆಟೊ 16,ಬೀನ್ಸ್18,ಕ್ಯಾರೆಟ್42,ಎಲೆಕೋಸು16,ದಪ್ಪಮೆಣಸಿನಕಾಯಿ 30,ಬದನೆ32, ನುಗ್ಗೆಕಾಯಿ 24,ಹಸಿಮೆಣಸಿನಕಾಯಿ 20, ಈರುಳ್ಳಿ 85.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.