ಮೈಸೂರು: ‘ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಮೇಲೆ ಜಾರಿ ನಿರ್ದೇಶನಾಲಯವು (ಇ.ಡಿ) ರಾಜಕೀಯ ಮಾಡಿದೆ ಎಂಬುದು ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಾಬೀತಾಗಿದೆ’ ಎಂದು ಚಾಮರಾಜನಗರ ಸಂಸದ ಸುನೀಲ್ ಬೋಸ್ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಇ.ಡಿಯು ರಾಜಕೀಯ ಮಾಡುತ್ತಿದ್ದು, ಇದು ಸರಿಯಲ್ಲ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆ ತನಿಖಾ ಸಂಸ್ಥೆ ಏಕೆ ರಾಜಕೀಯ ದಾಳ ಆಗುತ್ತಿದೆ ಎಂದು ನೇರವಾಗಿ ಪ್ರಶ್ನೆ ಮಾಡಿದೆ. ದೇಶದ ಪ್ರಮುಖ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವ ಸರಿಯಲ್ಲ. ವಿರೋಧಪಕ್ಷಗಳನ್ನು ಹೆದರಿಸಿ ಚುನಾವಣೆ ಮಾಡುತ್ತಿರುವುದು ನಿಜಕ್ಕೂ ಖಂಡನೀಯ. ಸುಪ್ರೀಂ ಕೋರ್ಟ್ ನೀಡಿರುವ ಈ ಎಚ್ಚರಿಕೆಯು, ರಾಜಕೀಯ ಪ್ರೇರಿತವಾಗಿ ವರ್ತಿಸುವ ತನಿಖಾ ಸಂಸ್ಥೆಗಳಿಗೆ ಅಗತ್ಯ ಪಾಠವಾಗಿದೆ’ ಎಂದಿದ್ದಾರೆ.
‘ಪ್ರಜಾಪ್ರಭುತ್ವದ ಸೌಂದರ್ಯವಾದ ಜನಾಭಿಪ್ರಾಯವನ್ನು ಭ್ರಷ್ಟಗೊಳಿಸುವ ಬಿಜೆಪಿಯವರ ಹೀನಾಯ ಪ್ರಯತ್ನಗಳು ಇಲ್ಲಿಗೇ ಕೊನೆಯಾಗಬೇಕು. ಇಲ್ಲವಾದರೆ ಮುಂದೆ ಜನರೇ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.