ADVERTISEMENT

ನಾಮಫಲಕಕ್ಕೆ ಅಪಮಾನ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 17:12 IST
Last Updated 5 ಜುಲೈ 2019, 17:12 IST

ಸರಗೂರು: ತಾಲ್ಲೂಕಿನ ಸಾಗರೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕಕ್ಕೆ ದುಷ್ಕರ್ಮಿಗಳು ಗುರುವಾರ ತಡರಾತ್ರಿ ಅಪಮಾನ ಎಸಗಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆಯೇ ಒಂದೆಡೆ ಜಮಾಯಿಸಿದ ದಲಿತ ಮುಖಂಡರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಕಿಡಿಗೇಡಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ದಲಿತ ಮುಖಂಡ ಎಸ್.ಎಲ್.ರಾಜಣ್ಣ ಮಾತನಾಡಿ ‘ಅಪಮಾನ ಎಸಗಿದ್ದು ನೋವಿನ ಸಂಗತಿ. ಸಾಗರೆ ಗ್ರಾಮದಲ್ಲಿ ಹಲ ವರ್ಷಗಳಿಂದಲೂ ಜಾತಿ ನಿಂದನೆ ನಡೆದಿದೆ. ಗ್ರಾಮದ ದೇವಸ್ಥಾನಗಳ ಪ್ರವೇಶವನ್ನು ದಲಿತರಿಗೆ ನಿರಾಕರಿಸಲಾಗಿದೆ. ಕ್ಷೌರಿಕ ಅಂಗಡಿ, ಟೀ ಅಂಗಡಿಗಳಿಗೂ ಪ್ರವೇಶ ನೀಡುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಜಾತಿಯತೆ ತುಂಬಿದೆ. ಇದನ್ನು ಕೂಡಲೇ ಹೋಗಲಾಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಾಲ್ಲೂಕು ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಸೋಗಹಳ್ಳಿ ಶಿವಣ್ಣ ಮಾತನಾಡಿ ‘ಗ್ರಾಮದಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ. ಸರ್ಕಾರಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ; ಪರಿಶಿಷ್ಟರಿಗೆ ಕುಡಿಯುವ ನೀರಿಗೆ ಅವಕಾಶ ನೀಡುತ್ತಿಲ್ಲ’ ಎಂದು ದೂರಿದರು.

ಶಾಸಕ ಅನಿಲ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ‘ಸಮಾಜ ತಲೆ ತಗ್ಗಿಸುವಂಥ ಕೃತ್ಯ ನಡೆದಿದೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ತಹಶೀಲ್ದಾರ್ ಮಂಜುನಾಥ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಡಿವೈಎಸ್‌ಪಿ ಭಾಸ್ಕರ್ ವಾರದೊಳಗೆ ಕಿಡಿಗೇಡಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಆದಿ ಕರ್ನಾಟಕ ಮಹಾಸಭಾದ ಮಾಜಿ ಅಧ್ಯಕ್ಷ ಮುದ್ದಮಲ್ಲಯ್ಯ, ಚೌಡಹಳ್ಳಿ ಜವರಯ್ಯ, ಜೀವಿಕ ಬಸವರಾಜು, ಸಾಗರೆ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್, ಗ್ರಾಮಸ್ಥರಾದ ಜೋಗಯ್ಯ, ವೆಂಕಟಾಚಲುವಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೀರನಾಯಕ, ಸರಗೂರು ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಶಿವನಂಜು, ಸರಗೂರು ಮಾಜಿ ಅಧ್ಯಕ್ಷ ಶಿವಣ್ಣ, ಇದಿಯಪ್ಪ, ಪುರಸಭೆ ಸದಸ್ಯ ನರಸಿಂಹಮೂರ್ತಿ, ಎಚ್.ಸಿ.ಮಂಜುನಾಥ್, ದಲಿತ ಸಮಾಜದ ಮುಖಂಡರಾದ ಹೈರಿಗೆ ಶಿವರಾಜು, ಎಂ.ಡಿ.ಮಂಚಯ್ಯ, ಶಿವಣ್ಣ, ಕೋಟೆ ಮಹದೇವಸ್ವಾಮಿ, ಜೈ ಭೀಮ ಸೇನೆಯ ಪದಾಧಿಕಾರಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.