ADVERTISEMENT

ಗುಂಪು ಘರ್ಷಣೆ; ಪರಿಸ್ಥಿತಿ ಉದ್ವಿಗ್ನ

ಸಾಲಿಗ್ರಾಮದಲ್ಲಿ ವಿಕೋಪಕ್ಕೆ ತಿರುಗಿದ ಕ್ಷುಲ್ಲಕ ವಿಚಾರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 8:44 IST
Last Updated 13 ಡಿಸೆಂಬರ್ 2019, 8:44 IST
ಸಾಲಿಗ್ರಾಮ ಪೊಲೀಸ್ ಠಾಣೆಯ ಮುಂಭಾಗ ಗುರುವಾರ ಸ್ಥಳೀಯರು ಪ್ರತಿಭಟಿಸಿದರು
ಸಾಲಿಗ್ರಾಮ ಪೊಲೀಸ್ ಠಾಣೆಯ ಮುಂಭಾಗ ಗುರುವಾರ ಸ್ಥಳೀಯರು ಪ್ರತಿಭಟಿಸಿದರು   

ಸಾಲಿಗ್ರಾಮ: ಪಟ್ಟಣದ ಮಹಾವೀರ ರಸ್ತೆಯಲ್ಲಿ ನಡೆದ ಬೈಕ್‌ ಸವಾರರಿಬ್ಬರ ಜಗಳ ವಿಕೋಪಕ್ಕೆ ತಿರುಗಿದ್ದು, ಗುರುವಾರ ಪರಿಸ್ಥಿತಿ ಉದ್ವಿಗ್ನಗೊಂಡು, ಪೊಲೀಸ್ ಠಾಣೆ ಎದುರು ಒಂದು ಗುಂಪು ಪ್ರತಿಭಟನೆ ನಡೆಸಿದೆ.

ಟ್ಯಾಂಕ್ ವೃತ್ತದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಮಹಾವೀರ ರಸ್ತೆಯಲ್ಲಿವರ್ತಕರು ಅಂಗಡಿ ಮುಚ್ಚಿದರು. ಜಿಲ್ಲಾ ಸಶಸ್ತ್ರ ಪಡೆಯ ಎರಡು ತುಕಡಿಗಳನ್ನು ಹಾಗೂ ಜಿಲ್ಲೆಯ ವಿವಿಧ ಠಾಣೆಗಳಿಂದ ಪೊಲೀಸರನ್ನು ಪಟ್ಟಣಕ್ಕೆ ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.

ಸಿಪಿಐ ಪಿ.ಕೆ.ರಾಜು, ಕೆ.ಆರ್.ನಗರ ಸಬ್‌ಇನ್‌ಸ್ಪೆಕ್ಟರ್‌ಗಳಾದ ಚೇತನ್ ಮತ್ತು ಮಾದಪ್ಪ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ADVERTISEMENT

ಘಟನೆ ವಿವರ:ಸಾಲಿಗ್ರಾಮದ ವಾಸಿ ಶ್ರೀನಿವಾಸ ತನ್ನ ಅತ್ತೆ ರಾಜಮ್ಮನನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಮಹಾವೀರ ರಸ್ತೆಯಲ್ಲಿ ಬುಧವಾರ ರಾತ್ರಿ ಹೋಗುವಾಗ, ಎದುರಿನಿಂದ ಬಂದ ಬೈಕ್‌ ಸವಾರ ಚಂದು ಎಂಬಾತ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಚಂದು ಶ್ರೀನಿವಾಸ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಚಂದು ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲಿಸಲಿಲ್ಲ ಎಂದು ಆರೋಪಿಸಿ ಶ್ರೀನಿವಾಸ ಬೆಂಬಲಿಗರು ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಸಿಪಿಐ ರಾಜು ಭೇಟಿ ನೀಡಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಮತ್ತೊಂದು ಪ್ರಕರಣದಲ್ಲಿ ಅಜಯ್ ಎಂಬುವವರಿಗೆ ಚೇತನ್, ಗೌತಮ್ ಮತ್ತು ಜಲೇಂದ್ರ ಎಂಬುವವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಲಾಗಿದೆ. ಪಟ್ಟಣದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.