ADVERTISEMENT

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿ ಪ್ರತಿಭಟನೆಗೆ ಕಾಂಗ್ರೆಸ್‌ ಬೆಂಬಲ

ಕಾಯ್ದೆ ಜಾರಿಯಲ್ಲಿ ಭ್ರಷ್ಟಾಚಾರದ ಸಂಚು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 11:00 IST
Last Updated 28 ಸೆಪ್ಟೆಂಬರ್ 2020, 11:00 IST
ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣೆ ತಿದ್ದುಪಡಿ, ವಿದ್ಯುತ್ ಕಾಯ್ದೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಮೈಸೂರು ನಗರದಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮೈಸೂರು ನಗರ ಘಟಕದ ಕಾಂಗ್ರೆಸ್‌ ಮುಖಂಡರು ಜತೆಗೂಡಿದರು
ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣೆ ತಿದ್ದುಪಡಿ, ವಿದ್ಯುತ್ ಕಾಯ್ದೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಮೈಸೂರು ನಗರದಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮೈಸೂರು ನಗರ ಘಟಕದ ಕಾಂಗ್ರೆಸ್‌ ಮುಖಂಡರು ಜತೆಗೂಡಿದರು   

ಮೈಸೂರು: ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣೆ ತಿದ್ದುಪಡಿ, ವಿದ್ಯುತ್ ಕಾಯ್ದೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಮೈಸೂರು ನಗರದಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಕಾಂಗ್ರೆಸ್‌ ಬೆಂಬಲ ಸೂಚಿಸಿತು.

ನಗರದ ಪುರಭವನದ ಬಳಿಯ ಅಂಬೇಡ್ಕರ್‌ ಪುತ್ಥಳಿಯ ಬಳಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್, ‘ರೈತರ ಅನ್ನಕ್ಕೆ ಮಣ್ಣು ಹಾಕುತ್ತಿರುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ವಿರೋಧದ ಮಧ್ಯೆಯೂ ಈ ಕಾಯ್ದೆಗಳನ್ನು ಜಾರಿಗೊಳಿಸಲು ಹೊರಟಿರುವುದನ್ನು ಕಂಡರೆ ಇದರ ಹಿಂದೆ ಭ್ರಷ್ಟಾಚಾರದ ಸಂಚು ಇದೆ ಎಂಬ ಅನುಮಾನ ಬರುತ್ತಿದೆ ಎಂದರು.

ಬೆಂಗಳೂರು ನಗರದ ಸುತ್ತಮುತ್ತ ಸಾವಿರಾರು ಎಕರೆ ಬೆಲೆ ಬಾಳುವ ಆಸ್ತಿ ದೊಡ್ಡ ಉದ್ಯಮಿಗಳ ಹೆಸರಿನಲ್ಲಿದೆ. ಅದನ್ನು ಈ ಕಾಯ್ದೆ ಬಳಸಿ ದುರುಪಯೋಗ ಮಾಡಿಕೊಳ್ಳುವ ಹುನ್ನಾರವನ್ನು ಸರ್ಕಾರ ಹೊಂದಿದೆ. ರೈತರಿಂದ ಉದ್ಯಮಿಗಳು ಸಾವಿರಾರು ಎಕರೆ ಜಮೀನು ಖರೀದಿಸಿ ಬಂಡವಾಳವನ್ನು ಭೂಮಿಯ ಮೇಲೆ ಹಾಕಲು ನೆರವಾಗುವ ತಂತ್ರ ಇದರಲ್ಲಿದೆ ಎಂದು ದೂರಿದರು.

ADVERTISEMENT

ಕಾಯ್ದೆ ಜಾರಿಯಾದರೆ ಉಳುವವನಿಂದ ಭೂಮಿ ಕಸಿದು ಉದ್ಯಮಿಗಳು ಕೃಷಿ ಭೂಮಿಯನ್ನು ಬಂಜರು ಮಾಡಿ ರೈತರು, ಅವರ ಕುಟುಂಬದವರನ್ನು ಬೀದಿಗೆ ತಂದಂತಾಗುತ್ತದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದರಿಂದ ರೈತರ ಸ್ವತಂತ್ರ ಕಸಿದು ಬಹುರಾಷ್ಟ್ರೀಯ ಕಂಪೆನಿಗಳು, ಮಾಲ್‌ಗಳು ನೇರವಾಗಿ ಕೃಷಿಭೂಮಿಗೆ ಪ್ರವೇಶಿಸಿ ಮಾರುಕಟ್ಟೆ, ಕಿರಾಣಿ ಅಂಗಡಿ ನಡೆಸುವವರ ಬದುಕು ಕಿತ್ತುಕೊಳ್ಳುತ್ತವೆ. ಇದರಿಂದ ಸಣ್ಣ, ಮಧ್ಯಮ ವರ್ಗದ ಜನರ ಬದುಕಿಗೆ ತೊಂದರೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ತಂದಿದ್ದ ರೈತಪರ ಕಾನೂನು, ಕಾಯ್ದೆಗಳನ್ನು ಬದಿಗೊತ್ತಿ ಕಂಪೆನಿಗಳ ಪರವಾದ ಕಾನೂನನ್ನು ಜಾರಿಗೊಳಿಸುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಶಿವರಾಮು, ಚಂದ್ರಶೇಖರ್, ರಾಜು, ಅರವಿಂದ ಶರ್ಮಾ, ಭಾನುಮೋಹನ್, ಲೋಕೇಶ್ ಮಾದಪುರ, ಓಂಕಾರ್ ರವಿ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.