ADVERTISEMENT

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಆಕ್ರೋಶ

ಎಸ್‌ಯುಸಿಐ ನೇತೃತ್ವದಲ್ಲಿ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 10:02 IST
Last Updated 12 ಡಿಸೆಂಬರ್ 2019, 10:02 IST
ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಮತ್ತು ಎನ್‌ಆರ್‌ಸಿ ವಿರುದ್ಧ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ರಾಮಸ್ವಾಮಿ ವೃತ್ತದಲ್ಲಿ ‍ಪ್ರತಿಭಟನೆ ನಡೆಸಿ, ಮಸೂದೆಯ ಪ್ರತಿಯನ್ನು ಸುಟ್ಟರು
ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಮತ್ತು ಎನ್‌ಆರ್‌ಸಿ ವಿರುದ್ಧ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ರಾಮಸ್ವಾಮಿ ವೃತ್ತದಲ್ಲಿ ‍ಪ್ರತಿಭಟನೆ ನಡೆಸಿ, ಮಸೂದೆಯ ಪ್ರತಿಯನ್ನು ಸುಟ್ಟರು   

ಮೈಸೂರು: ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಮತ್ತು ಎನ್‌ಆರ್‌ಸಿ ವಿರುದ್ಧ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ರಾಮಸ್ವಾಮಿ ವೃತ್ತದಲ್ಲಿ ‍ಪ್ರತಿಭಟನೆ ನಡೆಸಿದರು.

ಈ ಮಸೂದೆಯು ಬೇರೆ ದೇಶದಿಂದ ಭಾರತಕ್ಕೆ ಬಂದ ಹಿಂದೂ, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿ ಹಾಗೂ ಸಿಖ್ ಸಮುದಾಯಗಳ ಜನರಿಗೆ ಮಾತ್ರ ಪೌರತ್ವ ನೀಡಿ, ಮುಸ್ಲಿಮರನ್ನು ನುಸುಳುಕೋರರು ಎಂದು ಪರಿಗಣಿಸಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.

ನಮ್ಮ ದೇಶದ ಪೌರತ್ವವನ್ನು ಧರ್ಮಾಧಾರಿತವಾಗಿ ವಿಭಾಗಿಸುವುದು ಸಂವಿಧಾನ ವಿರೋಧಿ ಕ್ರಮ. ಈಗಾಗಲೇ ನಿವೃತ್ತ ನ್ಯಾಯಾಧೀಶರು ಸೇರಿದಂತೆ ಹಲವರು ಇದನ್ನು ವಿರೋಧಿಸಿದ್ದಾರೆ ಎಂದು ಹೇಳಿದರು.

ADVERTISEMENT

ಎಲ್ಲ ನಿರಾಶ್ರಿತರ ಬಗ್ಗೆ ಕೇಂದ್ರಕ್ಕೆ ಕಾಳಜಿ ಇರುವುದು ನಿಜವೇ ಆಗಿದ್ದರೆ ಶ್ರೀಲಂಕಾ ಮತ್ತು ಬರ್ಮಾ ದೇಶಗಳ ಪ್ರಸ್ತಾವ ಏಕಿಲ್ಲ ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಪೌರತ್ವ ನೋಂದಣಿಯೂ ಆತಂಕಕಾರಿಯಾಗಿದೆ. 40ರಿಂದ 50 ವರ್ಷಗಳಷ್ಟು ಹಳೆಯದಾದ ಪೌರತ್ವ ದಾಖಲೆಗಳು ಇಲ್ಲದಿರುವವರೆಲ್ಲರೂ ಅಕ್ರಮ ವಲಸಿಗರಾಗುತ್ತಾರೆ. ಆದರೆ, ಬಡವರಿಗೆ, ಭೂಹೀನ ಕೃಷಿ ಕಾರ್ಮಿಕರಿಗೆ, ಆದಿವಾಸಿಗಳಿಗೆ ಈ ಬಗೆಯ ಪೌರತ್ವ ದಾಖಲೆಗಳೇ ಇಲ್ಲ. ಇದರಿಂದ ಎಲ್ಲರಲ್ಲೂ ಅಭದ್ರತೆ ಭಾವನೆ ಸೃಷ್ಟಿಯಾಗಿದೆ ಎಂದು ದೂರಿದರು.

ದೇಶದ ಆರ್ಥಿಕತೆಯ ಕುಸಿತ, ಉದ್ಯೋಗ ನಾಶ, ಬೆಲೆ ಏರಿಕೆಗಳಂತಹ ಸಮಸ್ಯೆಗಳನ್ನು ಪರಿಹರಿಸಲಾಗದ ಕೇಂದ್ರ ಸರ್ಕಾರ ಜನರ ಒಗ್ಗಟ್ಟನ್ನು ಒಡೆದು, ಅವರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರದ ಭಾಗ ಇದು ಎಂದು ಅವರು ಆರೋಪಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಬಿ.ರವಿ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.