ADVERTISEMENT

ಸಾವಿನ ಮನೆಯಲ್ಲಿ ಬಾಗಿನ ಬೇಕೆ: ಸರ್ಕಾರಕ್ಕೆ ರೈತ ಸಂಘ, ಹಸಿರುಸೇನೆ ಪ್ರಶ್ನೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಪ್ಪುಬಾವುಟ ಪ್ರದರ್ಶನಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 9:19 IST
Last Updated 18 ಆಗಸ್ಟ್ 2020, 9:19 IST
   

ಮೈಸೂರು: ಕೊರೊನಾ ಸೋಂಕಿನಿಂದ ನಿತ್ಯ ಹಲವು ಮಂದಿ ಸಾಯುತ್ತಿರುವಾಗ, ಪ್ರವಾಹ ಸಂಕಷ್ಟದಿಂದ ಜನರು ನರಳುತ್ತಿರುವಾಗ, ಜಲಾಶಯಗಳಿಗೆ ಬಾಗಿನ ಅರ್ಪಿಸುವಂತಹ ಕಾರ್ಯಕ್ರಮ ಬೇಕೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪ್ರಶ್ನಿಸಿದರು.

ಇಂತಹ ಸಂಕಷ್ಟದ ಹೊತ್ತಿನಲ್ಲಿ ರೈತ ಕುಲವನ್ನೇ ಒಕ್ಕಲೆಬ್ಬಿಸುವಂತಹ ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಜಾರಿಗೊಳಿಸಲಾಗಿದೆ. ಇದನ್ನೆಲ್ಲ ವಿರೋಧಿಸಿ ಆ. 21ರಂದು ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.‌

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಸ್ವರಾಜ್ ಇಂಡಿಯಾ ಪಕ್ಷ ಹಾಗೂ ಜನಾಂದೋಲನ ಮಹಾಮೈತ್ರಿ ಸಂಘಟನೆಗಳು ಇದರಲ್ಲಿ ಭಾಗಿಯಾಗಲಿವೆ ಎಂದರು.

ADVERTISEMENT

ಬಾಗಿನದಂತಹ ಅದ್ದೂರಿ ಕಾರ್ಯಕ್ರಮದ ಬದಲು ಕಳೆದ ವರ್ಷ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಪರಿಹಾರ ವಿತರಿಸಲಿ. ಕೊರೊನಾ ಸೋಂಕನ್ನು ತಡೆಯಲು ಕಾರ್ಯಕ್ರಮ ರೂಪಿಸಲಿ. ರೈತರಿಗೆ ಮಾರಕವಾಗುವಂತಹ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಲಿ ಎಂದು ಅವರು ಆಗ್ರಹಿಸಿದರು.‌

‘ಕೆಆರ್‌ಎಸ್‌ನಲ್ಲಿ ಬಡಗಲಪುರ ನಾಗೇಂದ್ರ, ಸ್ವರಾಜ್ ಇಂಡಿಯಾ ಪಕ್ಷದ ಚಾಮರಸ ಮಾಲೀಪಾಟೀಲ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಗುರುಪ್ರಸಾದ್ ಕೆರೆಗೋಡು ಹಾಗೂ ಇತರರು ಭಾಗವಹಿಸುವರು. ಕಬಿನಿಯಲ್ಲಿ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್, ರಾಜಶೇಖರ ಕೋಟೆ ಹಾಗೂ ಇತರರು ಪಾಲ್ಗೊಳ್ಳುವರು ಎಂದು ಸ್ವರಾಜ್ ಇಂಡಿಯಾದ ನಗರ ಘಟಕದ ಅಧ್ಯಕ್ಷ ಉಗ್ರನರಸಿಂಹೇಗೌಡ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಸಂಚಾಲಕ ಬೆಟ್ಟಯ್ಯ ಕೋಟೆ, ಮುಖಂಡರಾದ ಲೋಕೇಶ್‌ರಾಜ್ ಅರಸ್, ನಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.