ಪಿರಿಯಾಪಟ್ಟಣ: ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗ್ಗಡೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ ಭಕ್ತರ ಧಾರ್ಮಿಕ ಭಾವನೆಗೆ ಘಾಸಿಗೊಳಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಡಿ.ದೇವರಾಜ ಅರಸ್ ಭವನದಲ್ಲಿ ಜಮಾಗೊಂಡ ಪ್ರತಿಭಟನಾಕಾರರು ಸಭೆ ನಡೆಸಿ ಪ್ರಮುಖ ರಸ್ತೆಯಲ್ಲಿ ಧಿಕ್ಕಾರ ಕೂಗುತ್ತ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ನಿಸರ್ಗ ಪ್ರಿಯ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿ, ‘ಅನಾಮಿಕ ವ್ಯಕ್ತಿಯು ನೀಡಿದ ದೂರಿನ ಆಧಾರದಲ್ಲಿ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸುತ್ತಿರುವುದನ್ನು ಸ್ವಾಗತಿಸುತ್ತೇವೆ. ಹಾಗೆಯೇ ದೂರುದಾರನನ್ನು, ತಮ್ಮಲ್ಲಿ ದಾಖಲೆಯಿದೆ ಎಂದು ಅಪಪ್ರಚಾರ ಮಾಡುತ್ತಿರುವ ಸಂತೋಷ್ ಶೆಟ್ಟಿ, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಅವರ ಹಿನ್ನೆಲೆ, ಬ್ಯಾಂಕ್ ಖಾತೆ, ಮನೆ ಹಾಗೂ ಕಚೇರಿಗಳನ್ನೂ ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.
ಕೊಡಗು ಜಿಲ್ಲೆ ಧರ್ಮಸ್ಥಳ ಭಕ್ತರ ವೇದಿಕೆ ಸಂಚಾಲಕ ಧನಂಜಯ ಮಾತನಾಡಿ, ‘ಮಂಜುನಾಥ ಸ್ವಾಮಿ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದು, ರಾಜ್ಯ, ಹೊರ ರಾಜ್ಯಗಳಿಂದಲೂ ನಿತ್ಯ 50 ಸಾವಿರದಿಂದ 1 ಲಕ್ಷದವರೆಗೆ ಜನರು ಬಂದು ಹೋಗುತ್ತಾರೆ. ಇಂಥ ದೇವಾಲಯವನ್ನು ಗುರಿಯಾಗಿಸಿ ಸಮಾಜದಲ್ಲಿ ಉದ್ವಿಗ್ನತೆ ಉಂಟು ಮಾಡಲಾಗುತ್ತಿದೆ’ ಎಂದು ದೂರಿದರು.
ವೇದಿಕೆ ತಾಲ್ಲೂಕು ಅಧ್ಯಕ್ಷ ಎ.ಟಿ.ರಂಗಸ್ವಾಮಿ, ಜನ ಜಾಗೃತಿ ಜಿಲ್ಲಾ ಮುಖಂಡ ಷಣ್ಮುಖ ರಾವ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಕುಮಾರ್, ಪುರಸಭೆ ಅಧ್ಯಕ್ಷ ಪ್ರಕಾಶ್ ಸಿಂಗ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಂದ್ರ, ಮೈಮುಲ್ ನಿರ್ದೇಶಕ ಪ್ರಸನ್ನ, ಪುರಸಭೆ ಸದಸ್ಯರಾದ ಮಂಜುಳಾ ರಾಜ್, ಭಾರತಿ, ನಿರಂಜನ್, ಕೃಷ್ಣ, ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕಿ ಲಲಿತಾ, ರೋಟರಿ ರಾಜೇಗೌಡ, ಆವರ್ತಿ ಚಂದ್ರಶೇಖರ, ರೈತ ಸಂಘದ ಪಾಂಡುರಂಗ, ತಾಲ್ಲೂಕು ವ್ಯವಸ್ಥಾಪಕ ರವಿ, ನಳಿನಿ, ಪ್ರೀತಿ ಅರಸ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.