ADVERTISEMENT

ಖಾಸಗೀಕರಣದ ವಿರುದ್ಧ ಪ್ರತಿಭಟನೆ

ವಿಮೆಯನ್ನು ಖಾಸಗಿಯವರಿಗೆ ಒಪ್ಪಿಸದಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 13:42 IST
Last Updated 14 ಸೆಪ್ಟೆಂಬರ್ 2020, 13:42 IST
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಮೈಸೂರಿನ ನೂರೊಂದು ಗಣಪತಿ ದೇಗುಲದ ಸಮೀಪ ಖಾಸಗೀಕರಣದ ವಿರುದ್ಧ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಮೈಸೂರಿನ ನೂರೊಂದು ಗಣಪತಿ ದೇಗುಲದ ಸಮೀಪ ಖಾಸಗೀಕರಣದ ವಿರುದ್ಧ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮೈಸೂರು: ವಿಮಾರಂಗದ ಖಾಸಗೀಕರಣದ ವಿರುದ್ಧ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ನೂರೊಂದು ಗಣಪತಿ ದೇವಸ್ಥಾನದ ಸಮೀಪ ಸೋಮವಾರ ಪ್ರತಿಭಟನೆ ನಡೆಸಿದರು.

ಎಲ್‌ಐಸಿ ಕ್ಲಾಸ್ 1 ಅಧಿಕಾರಿಗಳ ಒಕ್ಕೂಟ, ಅಭಿವೃದ್ಧಿ ಅಧಿಕಾರಿಗಳ ಸಂಘ, ವಿಮಾ ನಿಗಮ ನೌಕರರ ಸಂಘ, ಇನ್ಸ್ಯೂರೆನ್ಸ್ ಕಾರ್ಪೋರೇಷನ್ ಪೆನ್ಷನರ್ಸ್ ಅಸೋಸಿಯೇಷನ್‌ ನೇತೃತ್ವದಲ್ಲಿ ಸೇರಿದ ಪ್ರತಿಭಟನಕಾರರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.‌

ಸರ್ಕಾರ ಈಗ ಎಲ್‌ಐಸಿಯ ಶೇ 25ರಷ್ಟು ಷೇರುಗಳನ್ನು ‘ಇನ್ಷಿಯಲ್ ಪಬ್ಲಿಕ್ ಆಫರ್‌’ (ಐಪಿಒ) ಎಂದು ಷೇರು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದು ನವ ಉದಾರವಾದಿ ಆರ್ಥಿಕ ನೀತಿಗಳ ಭಾಗವಾದ ಖಾಸಗೀಕರಣವೇ ಆಗಿದೆ ಎಂದು ಅವರು ಆರೋಪಿಸಿದರು.

ADVERTISEMENT

‌ಸಾರ್ವಜನಿಕ ಆಸ್ತಿ, ಸಂಪತ್ತುಗಳನ್ನು ದೇಶಿ ಮತ್ತು ವಿದೇಶಿ ಬಂಡವಾಳಗಾರರಿಗೆ ಬೆಳ್ಳಿತಟ್ಟೆಯಲ್ಲಿಟ್ಟುಕೊಡಲು ಸರ್ಕಾರ ಮುಂದಾಗಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅವರು ಕಿಡಿಕಾರಿದರು.

ಪಾರದರ್ಶಕತೆ ತರಲು, ಸಣ್ಣ ಷೇರುದಾರರಿಗೆ ಅನುಕೂಲ ಮಾಡಿಕೊಡುವುದು ಸೇರಿದಂತೆ ಮೊದಲಾದ ಕಾರಣಗಳನ್ನು ಸರ್ಕಾರ ನೀಡುತ್ತಿದೆ. ಇದು ಕೇವಲ ನೆಪಗಳು ಮಾತ್ರವೇ ಆಗಿದೆ. ಕೇಂದ್ರ ಸರ್ಕಾರ ತನ್ನ ವಿತ್ತೀಯ ಕೊರತೆಯನ್ನು ತುಂಬುವುದಕ್ಕಾಗಿಯೇ ಇಂತಹ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಅವರು ಹರಿಹಾಯ್ದರು.

ಸೆ‍ಪ‍್ಟೆಂಬರ್ 1, 1956ರಲ್ಲಿ 245 ಖಾಸಗಿ ಕಂಪನಿಗಳನ್ನು ರಾಷ್ಟ್ರೀಕರಿಸಿ ಭಾರತೀಯ ಜೀವವಿಮಾ ನಿಗಮವನ್ನು ಸ್ಥಾಪಿಸಲಾಯಿತು. ಈಗ ಇದು ₹ 31.96 ಲಕ್ಷ ಕೋಟಿ ಆಸ್ತಿ ಹೊಂದಿದೆ. ಇಂತಹ ಲಾಭದಾಯಕವಾದ ಕಂಪನಿಯನ್ನು ಖಾಸಗಿಯವರಿಗೆ ಒಪ್ಪಿಸುವ ಅನಿವಾರ್ಯತೆಯಾದರೂ ಏನು ಎಂದು ಅವರು ಪ್ರಶ್ನಿಸಿದರು.

ಮುಖಂಡ ಸಿ.ಆರ್.ಕೃಷ್ಣಮೂರ್ತಿ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.