ADVERTISEMENT

ಚುನಾವಣೆಗೆ ಪಟ್ಟು; ಕಲಾಪದ ಸಮಯ ಬಲಿ

3 ತಿಂಗಳಾದರೂ ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಆಯ್ಕೆ ಮಾಡದಿರುವುದಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 13:15 IST
Last Updated 8 ಡಿಸೆಂಬರ್ 2022, 13:15 IST
ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಪಡಿಸುವಂತೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಗುರುವಾರ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಸದಸ್ಯರು ಮೇಯರ್ ಶಿವಕುಮಾರ್ ಪೀಠದ ಬಳಿ ಬಂದು ಪ್ರತಿಭಟಿಸಿದರು/ ಪ್ರಜಾವಾಣಿ ಚಿತ್ರ
ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಪಡಿಸುವಂತೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಗುರುವಾರ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಸದಸ್ಯರು ಮೇಯರ್ ಶಿವಕುಮಾರ್ ಪೀಠದ ಬಳಿ ಬಂದು ಪ್ರತಿಭಟಿಸಿದರು/ ಪ್ರಜಾವಾಣಿ ಚಿತ್ರ   

ಮೈಸೂರು: ಮೇಯರ್‌–ಉಪ ಮೇಯರ್‌ ಚುನಾವಣೆ ಮುಗಿದು 3 ತಿಂಗಳು ಕಳೆದರೂ 4 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸದಿರುವ ಕ್ರಮಕ್ಕೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದಿನಾಂಕ ನಿಗದಿಪಡಿಸುವಂತೆ ಪಟ್ಟು ಹಿಡಿದರು. ಈ ಚರ್ಚೆಯಲ್ಲೇ ಕಲಾಪದ ಬಹುತೇಕ ಸಮಯ ಬಲಿಯಾಯಿತು.

ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಕೌನ್ಸಿಲ್‌ ಸಭೆಯ ಆರಂಭದಲ್ಲಿ ಜೆಡಿಎಸ್‌ ಸದಸ್ಯ ಕೆ.ವಿ.ಶ್ರೀಧರ್ ವಿಷಯ ಪ್ರಸ್ತಾಪಿಸಿ ಚರ್ಚೆಗೆ ನಾಂದಿ ಹಾಡಿದರು.

‘ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಯನ್ನು ನಡೆಸಿಲ್ಲವೇಕೆ? ಪ್ರಜಾಪ್ರಭುತ್ವ, ಸಂವಿಧಾನದ ವಿರುದ್ಧವಾಗಿ ನೀವು ನಡೆದುಕೊಳ್ಳುತ್ತಿದ್ದೀರಿ. ತಾವೊಬ್ಬರೇ ಆಡಳಿತ ನಡೆಸಬೇಕು ಎನ್ನುವ ಆಲೋಚನೆ ಇದೆಯೇ? ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡದೇ ಸಭೆ ನಡೆಸಬೇಡಿ’ ಎಂದು ಪಟ್ಟು ಹಿಡಿದರು.

ADVERTISEMENT

ದನಿಗೂಡಿಸಿದ ವಿರೋಧಪಕ್ಷದ ನಾಯಕ ಅಯೂಬ್‌ ಖಾನ್, ‘ಆಡಳಿತದಲ್ಲಿ ನೀವು ಹಿಡಿತ ಹೊಂದಿದ್ದಿರೋ ಅಥವಾ ಬೇರೆ ಯಾರಾದರೂ ನಡೆಸುತ್ತಿದ್ದಾರೆಯೋ? ಹಗ್ಗ ಯಾರ ಕೈಲಿದೆ. ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಯನ್ನು ನಡೆಸದಿರುವುದಕ್ಕೆ ಕಾರಣವೇನು? ಯಾವ ಒತ್ತಡವಿದೆ ನಿಮಗೆ?’ ಎಂದು ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆ:

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮೇಯರ್‌ ಶಿವಕುಮಾರ್, ‘ಆಡಳಿತ ನನ್ನ ಕೈಯಲ್ಲೇ ಇದೆ. ಯಾವ ಒತ್ತಡವೂ ಇಲ್ಲ’ ಎಂದು ಸಮರ್ಥಿಸಿಕೊಂಡರು. ಇದರಿಂದ ಸಮಾಧಾನಗೊಳ್ಳದ ಕಾಂಗ್ರೆಸ್‌ ಸದಸ್ಯರು ಹಾಗೂ ಜೆಡಿಎಸ್‌ನ ಕೆ.ವಿ.ಶ್ರೀಧರ್‌, ಮೇಯರ್‌ ಪೀಠದ ಎದುರು ಪ್ರತಿಭಟನೆ ನಡೆಸಿದರು. ‘ಸ್ಥಳದಲ್ಲೇ ದಿನಾಂಕ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

‘15 ದಿನಗಳೊಳಗೆ ಚುನಾವಣೆ ನಡೆಸುತ್ತೇನೆ. ಸದಸ್ಯರು ಸಭೆ ನಡೆಸಲು ಸಹಕಾರ ಕೊಡಬೇಕು’ ಎಂದು ಕೋರಿದರು. ‘ನಿರ್ದಿಷ್ಟ ದಿನಾಂಕ ನಿಗದಿಪಡಿಸಿದ ನಂತರವಷ್ಟೆ ಸಭೆ ಮುಂದುವರಿಸಬೇಕು’ ಎಂದು ಪ್ರತಿಭಟನಾನಿರತಾಗಿದ್ದ ಅಯೂಬ್ ಖಾನ್, ಆರೀಫ್‌ ಹುಸೇನ್, ಶಾಂತಕುಮಾರಿ, ಶೋಭಾ ಸುನಿಲ್, ಸತ್ಯರಾಜ್, ಪ್ರದೀಪ್ ಚಂದ್ರ, ಜೆ.ಗೋಪಿ, ಸೈಯದ್ ಹಸ್ರತ್, ಕೆ.ವಿ.ಶ್ರೀಧರ್‌ ಪಟ್ಟು ಹಿಡಿದರು. ಆಗ ಮೇಯರ್‌ ಸಭೆಯನ್ನು 15 ನಿಮಿಷಗಳವರೆಗೆ ಮುಂದೂಡಿದರು.

ಪುನರಾರಂಭವಾದಾಗಲೂ:

ಸಭೆ ಪುನರಾರಂಭವಾದಾಗಲೂ ಕಾಂಗ್ರೆಸ್‌ ಸದಸ್ಯರು ಮೇಯರ್‌ ಪೀಠದ ಎದುರು ಪ್ರತಿಭಟನೆ ಮುಂದುವರಿಸಿದರು. ‘ಈಗಲೇ ದಿನಾಂಕ ನಿಗದಿಪಡಿಸಬೇಕು ಎಂದರೆ ಆಗುವುದಿಲ್ಲ’ ಎಂದು ಮೇಯರ್ ತಿಳಿಸಿದರು. ಆದರೆ, ಸದಸ್ಯರು ಪಟ್ಟು ಸಡಿಸಲಿಲ್ಲ. ಆಗ ಮೇಯರ್‌, ಮಧ್ಯಾಹ್ನ 2.15ಕ್ಕೆ ಸಭೆ ಮುಂದೂಡಿದರು.

ಮಧ್ಯಾಹ್ನ 2.25ಕ್ಕೆ ಸಭೆ ಪುನರಾರಂಭವಾದಾಗಲೂ ಕಾಂಗ್ರೆಸ್‌ ಸದಸ್ಯರು ದಿನಾಂಕ ಘೋಷಿಸುವಂತೆ ಕೆಲ ಹೊತ್ತು ಪಟ್ಟು ಹಿಡಿದರು. ಮೇಯರ್‌ ದಿನಾಂಕ ಪ್ರಕಟಿಸಲಿಲ್ಲ. ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಆರೀಫ್ ಹುಸೇನ್, ‘ಮೇಯರ್‌ ಮಾತಿಗೆ ಮನ್ನಣೆ ಕೊಟ್ಟು ಅವರಿಗೆ ಸಮಯ ಕೊಡೋಣ’ ಎಂದು ತಿಳಿಸಿ ಮನವೊಲಿಸಿದರು. ಆಗ ಸದಸ್ಯರು ಪ್ರತಿಭಟನೆ ಕೈಬಿಟ್ಟರು.

ಈ ನಡುವೆ, ಗದ್ದಲದ ನಡುವೆಯೇ ಮೇಯರ್‌ ಶಿವಕುಮಾರ್‌ ‘5 ಕಾರ್ಯಸೂಚಿಗಳನ್ನು ಒಪ್ಪಲಾಗಿದೆ’ ಎಂದು ಹೇಳಿದ್ದಕ್ಕೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ‘ಇದು ಊರ್ಜಿತವೋ, ಅನೂರ್ಜಿತವೋ, ದಾಖಲಾಗಿದೆಯೋ ಇಲ್ಲವೋ ಎನ್ನುವುದನ್ನು ಕೌನ್ಸಿಲ್ ಕಾರ್ಯದರ್ಶಿ ಮೂಲಕ ಸ್ಪಷ್ಟಪಡಿಸಬೇಕು’ ಎಂದು ಪಟ್ಟು ಹಿಡಿದರು. ಆಗ, ‘ಮತ್ತೊಮ್ಮೆ ಮೊದಲನೇ ಕಾರ್ಯಸೂಚಿಯಿಂದ ಸಭೆ ಆರಂಭಿಸಲಾಗುದು’ ಎಂದು ಮೇಯರ್‌ ಹೇಳಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ‘ಹಾಗಿದ್ದರೆ ಆಗಲೇ ಒಪ್ಪಲಾಗಿದೆ ಎಂದು ಹೇಳಿದ್ದು ಎಷ್ಟು ಸರಿ?’, ನಿಯಮದ ಪ್ರಕಾರ ಸಭೆ ನಡೆಸದೇ ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಆಗ, ಮೇಯರ್‌, ‘ನಿಮ್ಮ ಮನವಿ ಮೇರೆಗೆ ಮೊದಲಿನಿಂದ ನಡೆಸುತ್ತಿದ್ದೆ. ಆದರೆ, ಹಿಂದೆ ಹೇಳಿದ್ದೆಲ್ಲವೂ ಊರ್ಜಿತವಾಗಿದೆ ಮುಂದಿನ ವಿಷಯಕ್ಕೆ ಹೋಗುತ್ತೇನೆ’ ಎಂದರು. ಇದರಿಂದ ಸಿಟ್ಟಾದ ವಿರೋಧಪಕ್ಷದವರು ಮೇಯರ್‌ ಪೀಠದ ಎದುರು ಪ್ರತಿಭಟಿಸಿದರು.

ನಾಚಿಕೆಯಾಗೋಲ್ಲವೇ?

ಮೇಯರ್ ನಡೆ ಸಮರ್ಥಿಸಿ ಮಾತನಾಡುತ್ತಿದ್ದ ಜೆಡಿಎಸ್‌–ಬಿಜೆಪಿ ಸದಸ್ಯರನ್ನು, ‘ಚರ್ಚೆಯಾಗದೆ ವಿಷಯಗಳಿಗೆ ಅನುಮೋದನೆ ನೀಡಲಾಗಿದೆ. ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಅಯೂಬ್‌ ಖಾನ್‌ ಕೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಾದ ಎಸ್‌ಬಿಎಂ ಮಂಜು, ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತು ಮೊದಲಾದವರು ಮೇಯರ್‌ ಪೀಠದ ಎದುರು ಬಂದು, ಕ್ಷಮೆ ಯಾಚಿಸುವಂತೆ ಮಾಡಬೇಕು ಎಂದು ಪಟ್ಟು ಹಿಡಿದರು.

ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಮೇಯರ್ ಹಾಗೂ ಅಯೂಬ್ ಖಾನ್ ನಡುವೆ ಮಾತಿನ ಚಕಮಕಿಯೂ ನಡೆಯಿತು. ಗದ್ದಲ–ಗೊಂದಲ ಉಂಟಾದ್ದರಿಂದ, ಮಧ್ಯಾಹ್ನ 3.15ರ ವೇಳೆಗೆ ಮೇಯರ್‌ ಸಭೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.