ADVERTISEMENT

ಮೈಸೂರು: ಅಹೋರಾತ್ರಿ ಪ್ರತಿಭಟನೆ ವಾಪಸ್

ಪ್ರತಿಭಟನಾ ಸ್ಥಳಕ್ಕೆ ಬಂದು ಮಾತುಕತೆ ನಡೆಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 2:12 IST
Last Updated 11 ಫೆಬ್ರುವರಿ 2021, 2:12 IST
ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರೀನ್ ಬಡ್ಸ್ ಕಾರ್ಯಕರ್ತರು, ಠೇವಣಿದಾರರ ರಕ್ಷಣಾ ಸಮಿತಿ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯ 3ನೇ ದಿನವಾದ ಬುಧವಾರ ಸುಜೀವ್ ಸಂಸ್ಥೆ ವತಿಯಿಂದ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು
ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರೀನ್ ಬಡ್ಸ್ ಕಾರ್ಯಕರ್ತರು, ಠೇವಣಿದಾರರ ರಕ್ಷಣಾ ಸಮಿತಿ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯ 3ನೇ ದಿನವಾದ ಬುಧವಾರ ಸುಜೀವ್ ಸಂಸ್ಥೆ ವತಿಯಿಂದ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು   

ಮೈಸೂರು: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರೀನ್ ಬಡ್ಸ್ ಕಾರ್ಯಕರ್ತರು, ಠೇವಣಿದಾರರ ರಕ್ಷಣಾ ಸಮಿತಿ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಳೆದ 3 ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಪ್ರತಿಭಟನಕಾರರು ಬುಧವಾರ ಹಿಂತೆಗೆದುಕೊಂಡರು.

ಸಂಜೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿಭಟನನಿರತರ ಜತೆ ಮಾತುಕತೆ ನಡೆಸಿದರು.

‘1.80 ಲಕ್ಷಕ್ಕೂ ಹೆಚ್ಚಿನ ಸದಸ್ಯರ ದಾಖಲಾತಿಯ ಡಾಟಾ ಎಂಟ್ರಿ ಪ್ರಕ್ರಿಯೆ ಭರದಿಂದ ಸಾಗಿದೆ. ಕೇವಲ 18 ಸಾವಿರ ಮಂದಿಯ ಡಾಟಾ ಎಂಟ್ರಿ ಮಾತ್ರ ಬಾಕಿ ಉಳಿದಿದೆ. ನಂತರ, ಎಲ್ಲವನ್ನೂ ಪರಿಶೀಲಿಸಿ ಬೈಂಡಿಂಗ್ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದಕ್ಕೆ ಕನಿಷ್ಠ ಒಂದೂವರೆ ತಿಂಗಳಿಗೂ ಅಧಿಕ ಕಾಲಾವಕಾಶ ಬೇಕು. ಸದ್ಯ, ಈ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಇವರ ಮಾತಿಗೆ ಒಪ್ಪಿದ ಪ್ರತಿಭಟನನಿರತರು ತಾತ್ಕಾಲಿಕವಾಗಿ ಧರಣಿಯನ್ನು ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಜನರು

ಇದಕ್ಕೂ ಮುನ್ನ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಪ್ರತಿಭಟನಾ ಸ್ಥಳಕ್ಕೆ ಬಂದು ಸೇರಿದರು.

‘ಬಳ್ಳಾರಿ, ಗದಗ, ಚಾಮರಾಜನಗರ ಜಿಲ್ಲೆಗಳಿಂದ ಠೇವಣಿ ಹಣ ಕಳೆದುಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಸುಮಾರು 400 ಮಂದಿಗೆ ಅಡುಗೆ ಮಾಡಲಾಗಿತ್ತು. ಇದು ಸಾಕಾಗದೇ ಮತ್ತೆ 200 ಮಂದಿಗೆ ಅಡುಗೆ ಮಾಡಿ ಸ್ಥಳದಲ್ಲೇ ನೀಡಲಾಯಿತು‌’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ತಿಳಿಸಿದರು.

ಸುಜೀವ್ ಎನ್‌ಜಿಒದ ಅಧ್ಯಕ್ಷ ರಾಜಾರಾಂ ಅವರು ಕುಡಿಯುವ ನೀರು ಪೂರೈಕೆ ಮಾಡಿದರು. ಅಕ್ಕಿ, ಬೇಳೆ, ತರಕಾರಿಗಳನ್ನು ಪ್ರತಿಭಟನಕಾರರಿಗಾಗಿ ನೀಡಿದರು. ಇವರು ನೀಡಿದ ವಸ್ತುಗಳನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪ್ರತಿಭಟನಾನಿರತರಿಗೆ ಪೂರೈಸಿದರು.

ಫೆ.11ರಂದು ಉಪವಾಸ ಸತ್ಯಾಗ್ರಹ ನಡೆಸಲೂ ಪ್ರತಿಭಟನಕಾರರು ನಿರ್ಧರಿಸಿದ್ದರು. ಫೆ.13ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೈಸೂರಿಗೆ ಬರಲಿರುವುದರಿಂದ ಅಂದು ಅವರ ಗಮನ ಸೆಳೆಯಲು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲೂ ಚಿಂತಿಸಿದ್ದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಬರಡನಪುರ ನಾಗರಾಜ್, ಗ್ರೀಡ್ ಬಡ್ಸ್ ಕಾರ್ಯಕರ್ತರು ಹಾಗೂ ಠೇವಣಿದಾರರ ರಕ್ಷಣಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.