ಮೈಸೂರು: ಇಲ್ಲಿನ ಎನ್‌ಟಿಎಂ ಶಾಲೆಯ ಮುಂಭಾಗ ಹಾಗೂ ನಿರಂಜನ ಮಠದ ಆವರಣದಲ್ಲಿ ಬುಧವಾರ ಪ್ರತಿಭಟನೆಗಳು ಮುಂದುವರಿದಿವೆ.
ಮಹಾರಾಣಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಇದರಲ್ಲಿ ಭಾಗಿಯಾದರು.
ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ್, ಪುರುಷೋತ್ತಮ್, ಭಾನುಮೋಹನ್ ಹಾಗೂ ಇತರರು ಇದ್ದರು.
ನಿರಂಜನಮಠದ ಆವರಣದಲ್ಲಿ ಮುಂದುವರಿದ ಪ್ರತಿಭಟನೆ
ನಿರಂಜನ ಮಠದ ಆವರಣದಲ್ಲಿ 6ನೇ ದಿನವಾದ ಬುಧವಾರ ವೀರಶೈವ, ಲಿಂಗಾಯತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಮಹದೇವಪ್ಪ, ‘ಮಠ ಕೆಡವಿ ಸ್ಮಾರಕ ನಿರ್ಮಿಸುವುದು ಸರಿಯಲ್ಲ’ ಎಂದು ಟೀಕಿಸಿದರು. ‘ಲಿಂಗಾಯತ, ವೀರಶೈವರಿಗೆ ಸೇರಿದ 70 ಸಂಘಟನೆಗಳಿದ್ದು, ನಿತ್ಯ ಒಂದೊಂದು ಸಂಸ್ಥೆಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ’ ಎಂದರು.
ಹೋರಾಟಗಾರ ಉಗ್ರನರಸಿಂಹೇಗೌಡ ಮಾತನಾಡಿ, ‘ನಿರಂಜನ ಮಠದ ಆವರಣದಲ್ಲಿ ವಿವೇಕ ಸ್ಮಾರಕ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ದೊರೆತಿರುವುದು 2013ರಲ್ಲಿ. ಆದರೆ, ಇಲ್ಲಿರುವ ಶಿಲಾಫಲಕದಲ್ಲಿ 2012ರಲ್ಲಿ ನವೀಕೃತ ವಿವೇಕ ಸ್ಮಾರಕ ಉದ್ಘಾಟನೆ ಎಂದಿದೆ. ಹಾಗಾದರೆ, ಈ ಮೊದಲೇ ವಿವೇಕ ಸ್ಮಾರಕ ಇತ್ತೆ?’ ಎಂದು ಪ್ರಶ್ನಿಸಿದರು.
ಹೊಸಮಠದ ಚಿದಾನಂದ ಸ್ವಾಮೀಜಿ ಮಠಕ್ಕೆ ಭೇಟಿ ನೀಡಿದ್ದರು. ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಲೋಕೇಶ್, ಮುಖಂಡರಾದ ಗುರುಸ್ವಾಮಿ, ಹಿನಕಲ್ ಬಸವರಾಜ್, ಲಾವಿದ ಶಿವಲಿಂಗಪ್ಪ, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.