
ಸರಗೂರು: ಪಟ್ಟಣದ ಅಂಚೆ ಕಚೇರಿಯ ಸಿಬ್ಬಂದಿಯೊಬ್ಬರು ಖಾತೆದಾರರ ನಕಲಿ ಸಹಿ ಬಳಸಿ, ಮೂರು ಕೋಟಿಗೂ ಹೆಚ್ಚು ಹಣ ಲಪಟಾಯಿಸಿರುವ ಸಂಬಂಧ ಖಾತೆದಾರರು ದೂರು ನೀಡಿ ಆರು ತಿಂಗಳುಗಳೇ ಕಳೆದರೂ ಠೇವಣಿ ಹಣ ನೀಡಿಲ್ಲ ಎಂದು ಆರೋಪಿಸಿ ಖಾತೆದಾರರು ಸರಗೂರು ಅಂಚೆ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಒಂದನೇ ಮುಖ್ಯ ರಸ್ತೆಯ ಎಸ್‌ಬಿಐ ಬ್ಯಾಂಕ್ ಪಕ್ಕದಲ್ಲಿರುವ ಅಂಚೆ ಕಚೇರಿಗೆ ಮುತ್ತಿಗೆ ಹಾಕಿದ ಖಾತೆದಾರರು, ಅಂಚೆ ಇಲಾಖೆಯವರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಚೇರಿಗೆ ಬೀಗ ಜಡಿಯಲು ಮೂಂದಾದಾಗ, ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನ ಕುಮಾರ್ ಸ್ಥಳಕ್ಕೆ ಆಗಮಿಸಿ ಅಂಚೆ ಕಚೇರಿಗೆ ಬೀಗ ಹಾಕ ಬೇಡಿ ಸಾರ್ವನಿಕರಿಗೆ ತೊಂದರೆ ಆಗುತ್ತದೆ ಎಂದು ಮನವೊಲಿಸಿದರು.
ವಂಚನೆಗೆ ಒಳಗಾದ ಮುಳ್ಳೂರು ಲೋಕೇಶ್, ಎಸ್.ಆರ್.ಮಹೇಶ್, ಎಸ್.ಎನ್.ಮೋಹನಕುಮಾರ್, ಸುಧಾ ಮಾತನಾಡಿ, ನಕಲಿ ಸಹಿ ಬಳಸಿ, ಮೂರು ಕೋಟಿಗೂ ಹೆಚ್ಚು ಹಣವನ್ನು ಲೂಟಿ ಮಾಡಿದ್ದಾರೆ ಎಂದು ದೂರಿದರು. ಪ್ರಕರಣ ಬೆಳಕಿಗೆ ಬಂದು ಹಲವು ತಿಂಗಳುಗಳೇ ಕಳೆದಿವೆ. ಹಣ ಲಪಟಾಯಿಸಿರುವವರ ವಿರುದ್ಧ ದೂರು ನೀಡಿದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದರು. ಆರೋಪಿ ವಿರುದ್ಧ ಅಂಚೆ ಇಲಾಖೆ ಆತನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ವಯೋವೃದ್ಧರು, ನಿವೃತ್ತ ನೌಕರರು, ಮಹಿಳೆಯರು, ಕೂಲಿ ಕಾರ್ಮಿಕರು ತಮ್ಮ ಜೀವನ ನಿರ್ವಹಣೆಗೆ ಠೇವಣಿ ಹಣ ಇಟ್ಟಿದ್ದಾರೆ. ಆದರೆ ಈಗ ಪರದಾಡುವಂತಾಗಿದೆ ಎಂದರು.
ಹಣ ದುರುಪಯೋಗ ಮಾಡಿರುವ ವ್ಯಕ್ತಿ ಮೇಲೆ ಕ್ರಮ ಜರಗಿಸುವಂತೆ ಈಗಾಗಲೆ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಮೈಸೂರಿನಿಂದ ನಮ್ಮ ಅಂಚೆ ಇಲಾಖೆ ಸಿಬ್ಬಂದಿ ಗಳನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿ ಕೆಲಸ ನಿರ್ವಹಿಸಲಾಗುತ್ತಿದೆ. ಗ್ರಾಹಕರಿಗೆ ವಂಚನೆ ಆಗಿರುವ ಹಣ ವಾಪಸ್ ನೀಡುವ ಬಗ್ಗೆ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲರೂ ಸಹಕರಿಸಿ ಎಂದು ಹಿರಿಯ ಅಂಚೆ ಅಧೀಕ್ಷಕ ಜಿ.ಹರೀಶ್ ತಿಳಿಸಿದರು.
ಜಿಲ್ಲಾಧಿಕಾರಿಗೆ ಪ್ರತಿಭಟನೆಯ ಮಾಹಿತಿ ನೀಡಲಾಗುವುದು ಎಂದು ತಹಶೀಲ್ದಾರ್ ಮೋಹನ ಕುಮಾರಿ ತಿಳಿಸಿದರು.
ಪ್ರತಿಭಟನೆಯಲ್ಲಿ ಖಾತೆದಾರರಾದ ಮುಳ್ಳೂರು ಲೋಕೇಶ್, ಎಸ್.ಆರ್ ಮಹೇಶ್, ನಿವೃತ್ತ ಶಿಕ್ಷಕ ಶಾಂಭವಮೂರ್ತಿ, ಮಹದೇವಪ್ಪ, ಪೋಸ್ಟ್ ದಾಸೇಗೌಡ, ನಿತಿನ್, ಬೋಜಣ್ಣ, ಎಸ್.ಆರ್.ಶಾಂತ ವೀರಮೂರ್ತಿ, ಸರಗೂರು ಲೋಕೇಶ್, ಸುಂದರಮ್ಮ, ರಾಜೇಶ್, ಸಿ. ನಾಗರಾಜ್, ಸಿ. ಚೌಡಶೆಟ್ಟಿ, ವೆಂಕಟೇಶ್, ಅನಂತ ಶಯನ, ವೆಂಕಟಾಚಲಶೆಟ್ಟಿ, ಶಿವಲಿಂಗಶೆಟ್ಟಿ, ಗೋವಿಂದಯ್ಯ, ಎಸ್.ಪಿ.ಬೃಂಗೀಶ್, ಸುಧಾ, ಜಯಮ್ಮ, ಸರೋಜಮ್ಮ, ಜಿ.ಬಿ.ಶಶಿಕಲಾ, ಜಗದೀಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.