ADVERTISEMENT

ಮನವಿ ಕೊಡಲು ಹೋದವರ ಬಂಧನ; ಬಿಡುಗಡೆಗೆ ಆಗ್ರಹ

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ರಕ್ಷಣೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 16:32 IST
Last Updated 17 ಆಗಸ್ಟ್ 2020, 16:32 IST
ಬೆಂಗಳೂರಿನಲ್ಲಿ ಬಂಧಕ್ಕೆ ಒಳಗಾಗಿರುವ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಸೋಮವಾರ ಮೈಸೂರಿನ ಜಿಲ್ಲಾ ಪಂಚಾಯಿತಿ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬೆಂಗಳೂರಿನಲ್ಲಿ ಬಂಧಕ್ಕೆ ಒಳಗಾಗಿರುವ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಸೋಮವಾರ ಮೈಸೂರಿನ ಜಿಲ್ಲಾ ಪಂಚಾಯಿತಿ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮೈಸೂರು: ಬೆಂಗಳೂರಿನಲ್ಲಿ ಸೋಮವಾರ ಸಚಿವ ಸುರೇಶ್‌ಕುಮಾರ್ ಅವರ ಮನೆಗೆ ಪರಸ್ಪರ ಅಂತರ ಕಾಯ್ದುಕೊಂಡು ಮನವಿ ಪತ್ರ ನೀಡಲು ತೆರಳಿದ್ದ ಹಲವು ಮಂದಿ ಹೋರಾಟಗಾರರನ್ನು ಬಂಧಿಸಿರುವುದು ಅಸಾಂವಿಧಾನಿಕ ಕ್ರಮ ಎಂದು ಸಿಐಟಿಯುನ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಖಂಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಮುಂಭಾಗ ಸೇರಿದ ಕಾರ್ಯಕರ್ತರು ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.‌

ಅಕ್ಷರ ದಾಸೋಹ ನೌಕರರು 5 ತಿಂಗಳುಗಳಿಂದಲೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಅನೇಕ ಮನವಿ ಪತ್ರಗಳನ್ನು ನೀಡಿದ್ದಾರೆ. ಆದರೆ, ಅವುಗಳನ್ನು ಸರ್ಕಾರ ಕಸದ ಬುಟ್ಟಿಗೆ ಎಸೆದಿದೆ. ಉಪವಾಸ ಸತ್ಯಾಗ್ರಹ, ಧರಣಿ ಮೊದಲಾದ ಹೋರಾಟಗಳನ್ನೂ ಮಾಡಿದ್ದಾರೆ. ಸರ್ಕಾರ ಇವುಗಳನ್ನು ನಿರ್ಲಕ್ಷಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಈಗ ಸಚಿವರ ಮನೆಗೆ ಹೋಗಿ ಮನವಿ ಪತ್ರ ಕೊಡಲು ಹೊರಟಿದ್ದವರನ್ನೆಲ್ಲ ಬಂಧಿಸಿರುವುದನ್ನು ನೋಡಿದರೆ ನಾವು ಪ್ರಜಾಪ್ರಭುತ್ವದಲ್ಲಿದ್ದೇವೆಯೇ ಎಂಬ ಅನುಮಾನ ಬರುತ್ತದೆ. ಸರ್ಕಾರ ಕೂಡಲೇ ಬಂಧಿತರಾದವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಹಾಗೂ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಅವರು ಆಗ್ರಹಿಸಿದರು.

ಸಂಘಟನೆಯ ಅಧ್ಯಕ್ಷರಾದ ಕೆ.ಮಂಜುಳಾ, ಕಾರ್ಯದರ್ಶಿ ಸಾವಿತ್ರಿ, ಹೋರಾಟಗಾರರಾದ ಕೆ.ಬಸವರಾಜು, ಮೀನಾ, ಪುಟ್ಟಮಲ್ಲಯ್ಯ, ನೇತ್ರಾವತಿ, ಜಿ.ಜಯರಾಂ, ಎಸ್.ಮಂಗಳಾ ಇದ್ದರು.

ಶಾಸಕರ ರಕ್ಷಣೆಗೆ ಆಗ್ರಹ: ಬೆಂಗಳೂರಿನಲ್ಲಿ ಈಚೆಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸದ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಕರ್ನಾಟಕ ಪ್ರದೇಶ ಬೋವಿ ಕ್ಷೇಮಾಭ್ಯುದಯ ಸೇವಾ ಸಂಘದ ಕಾರ್ಯಕರ್ತರು ಶಾಸಕರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.‌

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಂದ ಅವರು ಈ ಸಂಬಂಧ ಮನವಿ ಪತ್ರ ನೀಡಿದರು.

‌ಮನೆಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಸರ್ಕಾರ ಕೂಡಲೇ ಪತ್ತೆ ಹಚ್ಚಬೇಕು. ಅವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.