ADVERTISEMENT

ಸಂಶೋಧನೆ ನಡೆಸಲು ಪ್ರವೇಶಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

ಕ್ರಾಫರ್ಡ್ ಭವನದ ಮುಭಾಂಗ ಸಂಶೋಧನಾ ಆಕಾಂಕ್ಷಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 3:14 IST
Last Updated 20 ಜುಲೈ 2025, 3:14 IST
ಮೈಸೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮಾಡಲು ಪ್ರವೇಶಾತಿಗೆ ಅವಕಾಶ ನೀಡುವಂತೆ ಆಗ್ರಹಿಸಿ ಕ್ರಾಫರ್ಡ್ ಭವನದ ಮುಂಭಾಗ ಸಂಶೋಧನಾ ವಿದ್ಯಾರ್ಥಿಗಳು ಶನಿವಾರ ಪ್ರತಿಭಟಿಸಿದರು
ಮೈಸೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮಾಡಲು ಪ್ರವೇಶಾತಿಗೆ ಅವಕಾಶ ನೀಡುವಂತೆ ಆಗ್ರಹಿಸಿ ಕ್ರಾಫರ್ಡ್ ಭವನದ ಮುಂಭಾಗ ಸಂಶೋಧನಾ ವಿದ್ಯಾರ್ಥಿಗಳು ಶನಿವಾರ ಪ್ರತಿಭಟಿಸಿದರು   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮಾಡಲು ಪ್ರವೇಶಾತಿಗೆ ಅವಕಾಶ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ನೀಡಲು ವಿದ್ಯಾರ್ಥಿಗಳು ಕ್ರಾಫರ್ಡ್‌ ಭವನದಿಂದ ಶನಿವಾರ ಸಂಜೆ ಮುಖ್ಯಮಂತ್ರಿ ಅವರ ಮನೆಗೆ ಪ್ರತಿಭಟನಾ ಮೆರವಣಿಗೆ ಹೊರಟರು. ಅವರನ್ನು ಪೊಲೀಸರು ಗೇಟ್‌ ಬಳಿ ತಡೆದರು.

ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ವಿದ್ಯಾರ್ಥಿಗಳು ಪೊಲೀಸರ ಮಾತಿಗೆ ಒಪ್ಪದಿದ್ದಾಗ, ಮೆರವಣಿಗೆ ಮೊಟಕುಗೊಳಿಸಲು ತಿಳಿಸಿ ಮುಖಂಡರನ್ನಷ್ಟೇ ಭೇಟಿ ಮಾಡಲು ಕರೆದೊಯ್ದರು. ‘ಕಾರ್ಯದೊತ್ತಡದಿಂದ ಮುಖ್ಯಮಂತ್ರಿಗಳ ಭೇಟಿಯನ್ನು ಭಾನುವಾರಕ್ಕೆ ಮುಂದೂಡಲಾಗಿದೆ’ ಎಂದು ಪ್ರತಿಭಟನಾಕರಾರು ತಿಳಿಸಿದರು.

‘ಮೈಸೂರು ವಿವಿಯು ನಡೆಸುವ ಪಿ.ಎಚ್‌ಡಿ ಪ್ರವೇಶಾತಿ ಪರೀಕ್ಷೆಯಲ್ಲಿ ಮತ್ತು ಜೆಆರ್‌ಎಫ್, ಎನ್‌ಇಟಿ, ಕೆ-ಸೆಟ್ ಪರೀಕ್ಷೆಗಳಲ್ಲಿ ಉತೀರ್ಣಗೊಂಡು ಗರಿಷ್ಠ ಅಂಕ ಹೊಂದಿ ಸಂಶೋಧನೆ ಕಾರ್ಯ ಕೈಗೊಳ್ಳಲು ಅರ್ಹತೆ ಪಡೆದಿರುವ ಸಂಶೋಧನಾ ಆಕಾಂಕ್ಷಿಗಳಿಗೆ ಸಂಶೋಧನೆ ನಡೆಸಲು ಪ್ರವೇಶಾತಿ ಕಲ್ಪಿಸುವಂತೆ ಹತ್ತಾರು ಬಾರಿ ಕುಲಪತಿ ಹಾಗೂ ಪರೀಕ್ಷಾಂಗ ಕುಲಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ನಮ್ಮ ಮನವಿಗೆ ವಿಶ್ವವಿದ್ಯಾಲಯದಿಂದ ಸ್ಪಂದಿಸಿಲ್ಲ’ ಎಂದು ದೂರಿದರು.

ADVERTISEMENT

‘ಮೇ ತಿಂಗಳಲ್ಲಿ ಇದೇ ವಿಚಾರವಾಗಿ ನಾಲ್ಕು ದಿನ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದೆವು. ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಮೇ 23ರಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದಿದ್ದೆವು. ಉನ್ನತ ಶಿಕ್ಷಣ ಸಚಿವರ ಗಮನಕ್ಕೂ ತರಲಾಗಿತ್ತು. ಆದರೆ, ಅವರ ಮೌಖಿಕ ಆದೇಶದ ಬಳಿಕವೂ ವಿಶ್ವವಿದ್ಯಾಲಯ ನ್ಯಾಯ ದೊರಕಿಸಿ ಕೊಟ್ಟಿಲ್ಲ’ ಎಂದು ಆರೋಪಿಸಿದರು.

‘ಪಿ.ಎಚ್‌ಡಿ ಸಂಶೋಧನೆಗೆ ಅರ್ಹತೆಯುಳ್ಳ ಪರಿಶಿಷ್ಟ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಾದ ನಮಗೆ ಪಿ.ಎಚ್‌ಡಿ ಪ್ರವೇಶಾತಿ ಕಲ್ಪಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಅತಂತ್ರ ಸ್ಥಿತಿಯಲ್ಲಿರುವ ನಮಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಆಗ್ರಹಿಸಿದರು.

ವಿದ್ಯಾರ್ಥಿ ಮುಖಂಡರಾದ ರವಿಕುಮಾರ್, ನವೀನ್, ರೋಜಾ, ಮೌನದೊರೆ, ತರುಣ್, ಪ್ರಸನ್ನ, ನವೀನ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.