ADVERTISEMENT

ಎಕ್ಸ್‌ಪ್ರೆಸ್‌ವೇ ಟೋಲ್‌ ದರ ದುಬಾರಿ, 17ರಂದು ಪ್ರತಿಭಟನೆ: ಎಚ್‌.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 23:19 IST
Last Updated 14 ಮಾರ್ಚ್ 2023, 23:19 IST
ಎ.ಎಚ್‌.ವಿಶ್ವನಾಥ್‌
ಎ.ಎಚ್‌.ವಿಶ್ವನಾಥ್‌   

ಮೈಸೂರು: ‘ಮೈಸೂರು– ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್‌ ದರ ದುಬಾರಿಯಾಗಿದೆ. ಕಾಮಗಾರಿಯೂ ಅವೈಜ್ಞಾನಿಕವಾಗಿದೆ. ಅಪಘಾತದಲ್ಲಿ 93 ಮಂದಿ ಮೃತಪಟ್ಟಿದ್ದು, ಮಾರ್ಚ್‌ 17ರಂದು ನಗರದ ಮಣಿ‍ಪಾಲ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಯುಪಿಎ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡಾಗ ₹ 3 ಸಾವಿರ ಕೋಟಿ ಇದ್ದ ಯೋಜನಾ ವೆಚ್ಚವು ₹ 9,551 ಕೋಟಿಗೆ ಏರಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಮಗಾರಿ ಪೂರ್ಣಗೊಳ್ಳಲು ₹ 12 ಸಾವಿರ ಕೋಟಿ ಬೇಕು ಎಂದಿದೆ. ಪ್ರಧಾನಿ ಮೋದಿ ಅರ್ಧ ಕಾಮಗಾರಿಯನ್ನಷ್ಟೇ ಉದ್ಘಾಟಿಸಿದ್ದಾರೆ’ ಎಂದು ಟೀಕಿಸಿದರು.

‘ಕಾಮಗಾರಿಯ ಗುತ್ತಿಗೆದಾರ ಕಂಪನಿಯು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಕಡೆಯವರಿಗೆ ಸೇರಿದ್ದು. ನಿತ್ಯ ಸುಮಾರು 1 ಲಕ್ಷ ವಾಹನ ಸಂಚರಿಸುವ ರಸ್ತೆಯಲ್ಲಿ ವಾಹನವೊಂದಕ್ಕೆ ಸರಾಸರಿ ₹ 500ರಂತೆ ಟೋಲ್‌ ವಸೂಲಾದಾರೂ ದಿನಕ್ಕೆ ₹ 5 ಕೋಟಿ, ವರ್ಷಕ್ಕೆ ₹ 1,800 ಕೋಟಿ ಸಂಗ್ರಹವಾಗುತ್ತದೆ. ಯೋಜನೆಯ ಶೇ 60 ರಷ್ಟು ಅಂದರೆ, ₹ 7,300 ಕೋಟಿ ಬಂಡವಾಳ ಹೂಡಿರುವ ಕಂಪನಿಯು 10 ವರ್ಷದಲ್ಲಿ ₹ 18 ಸಾವಿರ ಕೋಟಿ ಸಂಗ್ರಹಿಸುತ್ತದೆ. ಲೂಟಿ ಹೊಡೆಯುವ ಯೋಜನೆಯಿದು’ ಎಂದರು.

ADVERTISEMENT

‘ಟೋಲ್‌ ವಸೂಲಿ, ಗುತ್ತಿಗೆ ಸೇರಿದಂತೆ ಎಲ್ಲವೂ ಗಡ್ಕರಿ ಅವರದ್ದೇ. ಕಾಮಗಾರಿಯಲ್ಲಿ ಸಂಸದ ಪ್ರತಾಪಸಿಂಹಗೆ ಹಣ ಬಂದಿ ಲ್ಲವೇ? ಜಲ್ಲಿ, ಮರಳು ಗುತ್ತಿಗೆಯಲ್ಲಿ ಕಮಿಷನ್‌ ಎಷ್ಟು ಸಿಕ್ಕಿದೆ’ ಎಂದುದರು.

‘ಸರ್ವಿಸ್‌ ರಸ್ತೆ ನಿರ್ಮಾಣವಾಗಿಲ್ಲ. 91 ಪೆಟ್ರೋಲ್‌ ಬಂಕ್‌, 400 ಹೋಟೆಲ್‌ಗಳು ಬಂದ್‌ ಆಗಿವೆ. ಸಣ್ಣ ವ್ಯಾಪಾರಿಗಳು ಅತಂತ್ರರಾಗಿದ್ದಾರೆ. ಚನ್ನಪಟ್ಟಣದ ಗೊಂಬೆ ತಯಾರಕರು ಬೀದಿಗೆ ಬಿದ್ದಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಬರಲು ₹ 600 ಟೋಲ್ ಕಟ್ಟಬೇಕಾದರೆ ಜನ ಸಾಮಾನ್ಯರು ಎಲ್ಲಿಗೆ ಹೋಗಬೇಕು? 1 ಕಿ.ಮೀಗೆ ₹ 1 ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದರು.

ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ ಸಂಸದ ಪ್ರತಾಪಸಿಂಹ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.