ADVERTISEMENT

ಉತ್ತರ ಪ್ರದೇಶ ಅತ್ಯಾಚಾರ ಪ್ರಕರಣ: ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಖಂಡನೆ: ವಿವಿಧೆಡೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 3:12 IST
Last Updated 4 ಅಕ್ಟೋಬರ್ 2020, 3:12 IST
ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಿಂದ ಹೊರಟ  ಮೆರವಣಿಗೆ ಮಿನಿ ವಿಧಾನಸೌಧದ ಆವರಣದಲ್ಲಿ ಸಮಾವೇಶಗೊಂಡು ಒಂದು ನಿಮಿಷ ಮೌನಾಚರಣೆ ನಡೆಸಿದರು
ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಿಂದ ಹೊರಟ  ಮೆರವಣಿಗೆ ಮಿನಿ ವಿಧಾನಸೌಧದ ಆವರಣದಲ್ಲಿ ಸಮಾವೇಶಗೊಂಡು ಒಂದು ನಿಮಿಷ ಮೌನಾಚರಣೆ ನಡೆಸಿದರು   

ಎಚ್.ಡಿ.ಕೋಟೆ: ‘ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಇದನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಿಂದ ಹೊರಟ ಮೆರವಣಿಗೆ ಮಿನಿ ವಿಧಾನಸೌಧದ ಆವರಣದಲ್ಲಿ ಸಮಾವೇಶಗೊಂಡು, ಮೃತರ ಆತ್ಮಶಾಂತಿಗೆ ಒಂದು ನಿಮಿಷ ಮೌನಾಚರಣೆ ನಡೆಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಪರಿಸರವಾದಿ ಕ್ಷೀರಸಾಗರ್, ‘ಉತ್ತರಪ್ರದೇಶದ ಎರಡು ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಅಮಾನುಷ ಘಟನೆಯಾಗಿದ್ದು, ದೇಶವೇ ತಲೆ ತಗ್ಗಿಸುವಂತಾಗಿದೆ’ ಎಂದರು.

ADVERTISEMENT

‘ಪರಿಶಿಷ್ಟರು ಮತ್ತು ಶೋಷಿತರ ಮೇಲೆ ದೌರ್ಜನ್ಯ, ಅತ್ಯಾಚಾರ ಮತ್ತುಕೊಲೆ ನಡೆಯುತ್ತಿದ್ದರು ಆಡಳಿತ ನಡೆಸುತ್ತಿರುವ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ. ಉತ್ತರಪ್ರದೇಶ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಹಾಗಾಗಿ ಅಲ್ಲಿನ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಆರ್.ಮಂಜುನಾಥ್ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ದಸಂಸ ಬೆಟ್ಟಯ್ಯ ಕೋಟೆ, ಚಾ.ನಂಜುಂಡಮೂರ್ತಿ, ಭೀಮಹಳ್ಳಿ ಮಹದೇವು, ಭೀಮನಹಳ್ಳಿ ಸೋಮಶ್, ಹೆಗ್ಗನೂರು ನಿಂಗರಾಜು, ಸೋಗಹಳ್ಳಿ ಶಿವಣ್ಣ, ಚೌಡಹಳ್ಳಿ ಜವರಯ್ಯ, ಅಕ್ಬರ್‌, ಮುತ್ತು ಉಯ್ಯಂಬಳ್ಳಿ, ಮಲಾರ ರವೀಂದ್ರ, ಆನಗಟ್ಟಿ ದೇವರಾಜು, ಇಟ್ನ ರಾಜಣ್ಣ, ಮಹದೇವ ನಾಯಕ, ಹೊಮ್ಮರಗಳ್ಳಿ ಸಿದ್ದರಾಜು, ಮಿಲ್ ನಾಗರಾಜು, ನಂಜಪ್ಪ, ಬಿಡಗಲು ಶಿವಣ್ಣ, ಜಿವಿಕ ಬಸವರಾಜು, ಸತ್ತರ್ ಪಾಷ, ಪ್ರಸಾದ್, ಕೇಶವ ಇದ್ದರು.

ಯುವಕರಿಂದ ಮನವಿ

ತಲಕಾಡು: ಉತ್ತರ ಪ್ರದೇಶದಲ್ಲಿ ಯುವತಿಯ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ವಿವಿಧ ಜನಾಂಗದ ಯುವಕರು ಪಟ್ಟಣದ ಮುಖ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಆನಂದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಮಹಿಳೆಯರ ಎಸ್ಸಿ, ಎಸ್ಟಿ ಸಮುದಾಯಗಳ ಬಗ್ಗೆ ತಾಳಿರುವ ಧೋರಣೆ ವಿರುದ್ಧ ಕಿಡಿಕಾರಿದರು.

ಡಿಎಸ್ಎಸ್ ವಿದ್ಯಾರ್ಥಿ ಸಂಚಾಲಕ ಮನೋಜ್ ಕುಮಾರ್ ಮಾತನಾಡಿ, ‘ಉತ್ತರ ಪ್ರದೇಶ, ಕೇಂದ್ರ ಸರ್ಕಾರಗಳು ಸಂತ್ರಸ್ತೆ ಕುಟುಂಬದ ಜೊತೆ ನಡೆದುಕೊಂಡಿರುವ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ನಿರೀಕ್ಷಕ ಸಿದ್ದರಾಜು ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಡಿಎಸ್ಎಸ್‌ನ ಕುಕ್ಕುರು ರಾಜು, ಮೂಗೂರಿನ ಮಹದೇವಸ್ವಾಮಿ, ತಲಕಾಡಿನ ನಾಯಕ ಸಮುದಾಯದ ವಿಜಯಭಾಸ್ಕರ್, ಹಳೇ ಬೀದಿ ಮಾದೇಶ್, ಸುಂದರ ನಾಯಕ್, ರಂಗಸ್ವಾಮಿ, ಮನೋಜ್, ನವೀನ್, ಮಾದೇಶ್ ಕೈಫ್, ಶ್ರೀನಿವಾಸ್, ಕೇಶವ ಸೇರಿದಂತೆ ಹಲವರು ಭಾಗವಹಿಸಿದ್ದರು.

ಹುಣಸೂರು: ಅತ್ಯಾಚಾರ ಖಂಡಿಸಿ ಧರಣಿ

ಹುಣಸೂರು: ಉತ್ತರಪ್ರದೇಶದ ಹಥರಾಸ್‌ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದಸಂಸ ಕಾರ್ಯಕರ್ತರು ತಹಶೀಲ್ದಾರ್ ಕಚೇರು ಎದುರು ಧರಣಿ ನಡೆಸಿದರು.

ಮುಖಂಡ ರಾಮಕೃಷ್ಣ ಮಾತನಾಡಿ, ‘ದೇಶದಲ್ಲಿ ಪರಿಶಿಷ್ಟ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲವಾಗಿದೆ. ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಇಂದಿಗೂ ಅಸಾಧ್ಯವಾಗಿದ್ದು ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಸುಪ್ರೀಂ ಕೋರ್ಟ್ ಈ ಘಟನೆಯಲ್ಲಿ ಭಾಗಿಯಾದ ಮೇಲ್ಜಾತಿಯ ಆರೋಪಿಗಳಿಗೆ ಸಾಮೂಹಿಕ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದರು.

ಧರಣಿಯಲ್ಲಿ ಬೆಳ್ತೂರು ವೆಂಕಟೇಶ, ಕಲ್ಕುಣಿಕೆ ಬಸವರಾಜು, ರಾಜು, ಸೇರಿದಂತೆ ಸಮುದಾಯದ ನಾಯಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.