ADVERTISEMENT

ಮೈಸೂರು | ಪಿಯು ಕಾಲೇಜುಗಳ ಪ್ರವೇಶಾತಿ: ಹಣ ಹೊಂದಿಸಲು ಪರದಾಟ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 8:17 IST
Last Updated 14 ಫೆಬ್ರುವರಿ 2025, 8:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮೈಸೂರು: ಶಾಲೆಯ ಪ್ರವೇಶ ಶುಲ್ಕ ಕಟ್ಟಲು ಸಾಲ ಮಾಡಲಾಗಿತ್ತು. ಎಸ್‌ಎಸ್‌ಎಲ್‌ಸಿ ಮಹತ್ವ ಎಂಬ ಕಾರಣಕ್ಕೆ ಟ್ಯೂಶನ್‌ ಕೂಡ ಕಳುಹಿಸುತ್ತಿದ್ದೇನೆ. ಇನ್ನೂ ಪರೀಕ್ಷೆನೇ ಆರಂಭವಾಗಿಲ್ಲ, ಆಗಲೇ ಪಿಯುಗೆ ಸೇರಿಸಬೇಕು ಎಂದರೆ ಹಣ ಎಲ್ಲಿಂದ ಹೊಂದಿಸುವುದು?

– ಇದು ಕುವೆಂಪುನಗರದ ವೆಂಕಟೇಶ್‌ ಅವರ ಅಳಲು. ಇಂಥ ಹಲವು ಸಮಸ್ಯೆಗಳ ನಡುವೆಯೇ ಪೋಷಕರು ಪಿಯು ಕಾಲೇಜಿಗೆ ತಮ್ಮ ಮಕ್ಕಳ ದಾಖಲಾತಿ ಮಾಡುತ್ತಿದ್ದಾರೆ. ಉತ್ತಮ ಶಿಕ್ಷಣ ನೀಡುವುದಕ್ಕೆ ಇದು ಅನಿವಾರ್ಯ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ನೀಟ್‌ ಟ್ಯೂಶನ್‌ ಜೊತೆಗೆ ಪಿಯು ಶಿಕ್ಷಣ– ವರ್ಷಕ್ಕೆ ₹2.80 ಲಕ್ಷ, ಸಿಇಟಿ ಜೊತೆಗೆ ಪಿಯು ಶಿಕ್ಷಣ– ವರ್ಷಕ್ಕೆ ₹1.50 ಲಕ್ಷ, ಇದು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ನಿಗದಿಪಡಿಸಿರುವ ಪ್ರಥಮ ಪಿಯು ಪ್ರವೇಶಾತಿ ದರ. ‘ಮಗನಿಗೆ ವೈದ್ಯಕೀಯ ಶಿಕ್ಷಣ ಪಡೆಯುವ ಉದ್ದೇಶವಿದೆ. ಈ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ನೀಟ್‌ನಲ್ಲಿ ರ್‍ಯಾಂಕ್‌ ಬಂದಿದ್ದಾರೆ, ಉತ್ತಮ ಶಿಕ್ಷಣ ನೀಡುತ್ತಾರೆ. ಕಂತುಗಳಲ್ಲಿ ಹಣ ಕಟ್ಟಲು ಅವಕಾಶವಿದೆ. ಹಾಗಾಗಿ ಮುಂಗಡ ಹಣವಾಗಿ ₹50 ಸಾವಿರ ನೀಡಿ ಪ್ರವೇಶಾತಿ ಮಾಡಿಸಿದ್ದೇನೆ’ ಎಂದು ಪೋಷಕರೊಬ್ಬರು ಅವಲತ್ತುಕೊಂಡರು.

ಕೋಚಿಂಗ್‌ ಕೇಂದ್ರಗಳ ಹಾವಳಿ: ‘ಸಮಗ್ರ ಶಿಕ್ಷಣ ನೀಡುತ್ತೇವೆ. ಪಿಯು ಜೊತೆಗೆ ನೀಟ್‌, ಜೆಇಇ ತರಬೇತಿ ನೀಡುತ್ತೇವೆ. ಕೋಚಿಂಗ್‌ ಕೇಂದ್ರಗಳೂ ನಮ್ಮೊಂದಿಗೆ ಟೈ–ಅಪ್‌ ಮಾಡಿಕೊಂಡಿದ್ದೇವೆ ಎನ್ನುವ ಕಾಲೇಜುಗಳು ಈ ರೀತಿ ಮುಂಗಡ ಪ್ರವೇಶಾತಿಯ ಹಠಕ್ಕೆ ಒಳಗಾಗಿವೆ. ಕೆಲವೆಡೆ ಕೋಚಿಂಗ್‌ ಕೇಂದ್ರಗಳೇ ಕಾಲೇಜು ನಡೆಸುತ್ತಿದ್ದು, 2 ವರ್ಷಗಳ ಪಿಯು ಶಿಕ್ಷಣ ಅವಧಿಯಲ್ಲಿ ಶೈಕ್ಷಣಿಕ ವರ್ಷ ಎಂಬ ಮಾನದಂಡವೇ ಇಲ್ಲವಾಗಿಸಿವೆ. ಅತ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬರುತ್ತಿರುವಾಗಲೇ ಇತ್ತ ಪಿಯು ತರಗತಿ ಆರಂಭಿಸುತ್ತಿವೆ. ಕೆಲ ಪೋಷಕರೂ ಇದನ್ನು ಉತ್ತಮ ಬೆಳವಣಿಗೆ ಎಂದು ಪರಿಗಣಿಸುತ್ತಿದ್ದಾರೆ.

ಆರ್ಥಿಕ ಒತ್ತಡಕ್ಕೂ ಸೈ: ‘ಮಕ್ಕಳು ವೈದ್ಯರೇ ಆಗಬೇಕು, ಎಂಜಿನಿಯರೇ ಆಗಬೇಕು ಎಂಬ ಹಠಕ್ಕೆ ಬೀಳುವ ಪೋಷಕರು. ಮಕ್ಕಳ ಸಾಮರ್ಥ್ಯ ಅರಿಯದೇ ವಿಜ್ಞಾನ ವಿಷಯವನ್ನೇ ಕೊಡಿಸಲು ಓಡಾಡುತ್ತಾರೆ. ಯಾವ ಕಾಲೇಜು ಉತ್ತಮ ಎಂದು ನೆರೆ ಹೊರೆಯವರು, ಜಾಹೀರಾತುಗಳಿಂದ ತಿಳಿದುಕೊಳ್ಳುವ ಅವರು ಸ್ವತಃ ಕಾಲೇಜಿಗೆ ತೆರಳಿ ಪ್ರವೇಶಕ್ಕೆ ಬೇಡಿಕೆ ಸಲ್ಲಿಸುತ್ತಾರೆ. ಆರ್ಥಿಕ ಹೊರೆಯನ್ನೂ ಸಹಿಸುತ್ತಾರೆ. ಇದರಿಂದ ಫಲಿತಾಂಶ ಬರಲಿ ಎಂದು ಕಾದಿರುವ ಪೋಷಕರೂ ಒತ್ತಡಕ್ಕೆ ಸಿಲುಕುತ್ತಾರೆ.

‘ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಳಿಕ ವಿದ್ಯಾರ್ಥಿಗಳಿಗೆ ಪಿಯು ಪ್ರವೇಶಾತಿಗೆ ಹೆಚ್ಚೆಂದರೆ ಒಂದು ವಾರ ಕಾಲಾವಕಾಶ ದೊರೆಯುತ್ತದೆ. ಈ ಅವಧಿಯಲ್ಲಿ ಉತ್ತಮ ಕಾಲೇಜು ಹುಡುಕುವುದು ಬಹಳಷ್ಟು ಪೋಷಕರಿಗೆ ಅಸಾಧ್ಯ. ಮುಂಚಿತವಾಗಿ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಲು ಪೋಷಕರು ಕಾಲೇಜಿಗೆ ಬರುತ್ತಾರೆ. ಇದನ್ನು ತಡೆಯುವುದು ಸಾಧ್ಯವೇ. ಅದು ಅವರ ಹಕ್ಕು ಕೂಡ ಅಲ್ಲವೇ, ಕಾಲೇಜು ಸಿಬ್ಬಂದಿಗೂ ಸೂಕ್ತ ವಿದ್ಯಾರ್ಥಿಗಳನ್ನು ಪ್ರವೇಶಾತಿ ಮಾಡಿಸುವ ಅನಿವಾರ್ಯತೆ ಇರುತ್ತದೆ’ ಎನ್ನುವುದು ಖಾಸಗಿ ಕಾಲೇಜೊಂದರ ಪ್ರಾಂಶುಪಾಲರ ಅಭಿಪ್ರಾಯ.

‘ಮುಂಗಡ ಪ್ರವೇಶದಿಂದ ಪೋಷಕರು ನಿರಾಳ’

‘ತಮಗೆ ಸೂಕ್ತ ಎನಿಸುವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಮುಂಗಡವಾಗಿ ಪ್ರವೇಶಾತಿ ಮಾಡುವುದರಿಂದ ಕೊನೆ ಕ್ಷಣದಲ್ಲಿ ಕೋರ್ಸ್‌ ಆಯ್ಕೆ, ಕಾಲೇಜುಗಳ ಅಲೆದಾಟ ತಪ್ಪಿಸಿಕೊಳ್ಳಬಹುದು. ಪೋಷಕರು, ಮಕ್ಕಳು ನಿರಾಳರಾಗಬಹುದು’ ಎಂದು ಪ್ರಾಂಶುಪಾಲರೊಬ್ಬರು ತಿಳಿಸುತ್ತಾರೆ.

‘ಸೀಟ್‌ಗಳು ಖಾಲಿಯಾಗುತ್ತಿವೆ, ಮಕ್ಕಳನ್ನು ಬೇಗನೆ ಸೇರಿಸಿ ಎಂದು ಒತ್ತಡ ಹೇರುವುದು, ಅದಕ್ಕಾಗಿ ಬೇರೆ ಮಾರ್ಗಗಳನ್ನು ಅನುಸರಿಸುವುದು ತಪ್ಪಾಗುತ್ತದೆ. ಇಂದು ಕೋಚಿಂಗ್‌ ಕೇಂದ್ರಗಳೇ ಕಾಲೇಜನ್ನು ನಡೆಸುತ್ತಿದ್ದು, ಇಂಥ ಸಮಸ್ಯೆಯನ್ನು ಸೃಷ್ಟಿಸುತ್ತಿವೆ. ವಿವಿಧ ರೀತಿಯ ಪರ್ಸಂಟೇಜ್‌ ಸ್ಲಾಬ್‌ಗಳನ್ನು ಪ್ರಸ್ತಾಪಿಸಿ, ರಿಯಾಯಿತಿ ನೀಡುತ್ತೇವೆ ಎನ್ನುತ್ತಾರೆ. ಇದು ತಪ್ಪು. ನಗರದ ಸಾಂಪ್ರಾದಾಯಿಕ ಮಾದರಿಯ ಕಾಲೇಜುಗಳಲ್ಲಿ ಮುಂಗಡ ಪ್ರವೇಶಾತಿ ನಡೆದರೂ ಇಂಥ ಸಮಸ್ಯೆ ಎದುರಾಗುವುದಿಲ್ಲ. ಫಲಿತಾಂಶದ ಬಳಿಕವೂ ಸೀಟ್‌ಗಳು ಇದ್ದೇ ಇರುತ್ತವೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.