ADVERTISEMENT

ಮೈಸೂರು | ಯೋಜನೆಗಳಲ್ಲಿ ಜನರ ಸಹಭಾಗಿತ್ವ ಅಗತ್ಯ: ಡಿ.ಆರ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:52 IST
Last Updated 20 ನವೆಂಬರ್ 2025, 4:52 IST
ಸಭೆಯಲ್ಲಿ ಕರ್ನಾಟಕ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿದರು
ಸಭೆಯಲ್ಲಿ ಕರ್ನಾಟಕ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿದರು   

ಮೈಸೂರು: ‘ಸರ್ಕಾರ ಯೋಜನೆಗಳನ್ನು ರೂಪಿಸುವಾಗ ಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯ’ ಎಂದು ಕರ್ನಾಟಕ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರಿಗಳು ಕಾನೂನು ಬದ್ಧವಾಗಿ ಕೆಲಸ ನಿರ್ವಹಿಸಿದರೆ ಅಭಿವೃದ್ಧಿ ಬಹಳ ಸುಲಭವಾಗಿ ನಡೆಯುತ್ತದೆ ಎಂದರು.

‘ಜನರ ಬೇಡಿಕೆ ಬಹಳಷ್ಟು ಇರುತ್ತದೆ. ಜನರಿಂದ ಮಾಹಿತಿ ಪಡೆದು ಯೋಜನೆ ರೂಪಿಸುವುದು ಕಷ್ಟಕರ. ಆದ್ದರಿಂದ ಯೋಜನೆ ರೂಪಿಸುವಾಗ ಯಾವ ವಿಷಯಕ್ಕೆ ಆದ್ಯತೆ ನೀಡಬೇಕು, ಯಾವ ಫಲಾನುಭವಿಗೆ ಆದ್ಯತೆ ನೀಡಬೇಕು ಎಂಬುದನ್ನು ತಿಳಿಸಲಾಗುವುದು’ ಎಂದರು.

ADVERTISEMENT

‘ಜನರ ಪಾಲ್ಗೊಳ್ಳುವಿಕೆಯಿಂದ ಜನೋಪಯೋಗಿ ಕೆಲಸ ಮಾಡಬಹುದು ಎಂಬ ಆಶಯದೊಂದಿಗೆ ಸಭೆಗಳನ್ನು ನಡೆಸುತ್ತಿದ್ದು, ಜಿಲ್ಲಾ ಯೋಜನಾ ವಿವರಗಳನ್ನು ಆಯವ್ಯಯಕ್ಕೂ ಮುನ್ನ ಮುಖ್ಯಮಂತ್ರಿಗಳಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

‘ಗ್ರಾಮ ಮಟ್ಟದಲ್ಲಿ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುತ್ತಿದ್ದಾರಾದರೂ ನಗರ ಪ್ರದೇಶದಲ್ಲಿ ಜನರ ಪಾಲ್ಗೊಳ್ಳುವಿಕೆ ಕಾಣುತ್ತಿಲ್ಲ. ಆದರಿಂದ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಡಿಸೆಂಬರ್ 6 ರೊಳಗೆ 100 ಮತಗಳಿಗೆ ಇಬ್ಬರನ್ನು ಆಯ್ಕೆ ಮಾಡಿ ನೆರೆಹೊರೆಯವರ ಗುಂಪು ರಚಿಸಿ, ವಾರ್ಡ್‌ ಸಭೆಗಳನ್ನು ನಡೆಸಬೇಕು’ ಎಂದು ಸೂಚಿಸಿದರು.

ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಮಾತನಾಡಿ ‘ಜಿಲ್ಲೆಯ ಪ್ರಗತಿಪರ ಯೋಜನೆಗಳನ್ನು ರೂಪಿಸುವ ಸಲುವಾಗಿ ಈಗಾಗಲೇ ತರಬೇತಿಗಳನ್ನು ನೀಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಹಂತದಲ್ಲಿ ಯೋಜನೆ ರೂಪಿಸುವುದು ಬಾಕಿ ಇದ್ದು, ಶೀಘ್ರವಾಗಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕುಮಾರ, ಮೈಸೂರು ಜಿ.ಪಂ. ಸಿಇಒ ಯುಕೇಶ್ ಕುಮಾರ್, ಚಾಮರಾಜನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಜಿಲ್ಲೆಗಳ ಯೋಜನೆಯ ವಿವರಗಳನ್ನು ವಿವರಿಸಿದರು.

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ವಿಭಾಗದ ವಿವಿಧ ಜಿಲ್ಲೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.