ADVERTISEMENT

ಶಾಲೆ ಉಳಿವಿಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ: ವಿಧಾನಪರಿಷತ್‌ ಸದಸ್ಯ ಡಾ.ತಿಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:44 IST
Last Updated 10 ಫೆಬ್ರುವರಿ 2026, 5:44 IST
ಹುಣಸೂರು ನಗರದಲ್ಲಿನ 140 ವರ್ಷಗಳ ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಜನಪ್ರತಿನಿಧಿಗಳಾದ ಡಾ.ತಿಮ್ಮಯ್ಯ, ಎಚ್.ಪಿ.ಮಂಜುನಾಥ್‌ ಅವರನ್ನು ಗೌರವಿಸಲಾಯಿತು
ಹುಣಸೂರು ನಗರದಲ್ಲಿನ 140 ವರ್ಷಗಳ ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಜನಪ್ರತಿನಿಧಿಗಳಾದ ಡಾ.ತಿಮ್ಮಯ್ಯ, ಎಚ್.ಪಿ.ಮಂಜುನಾಥ್‌ ಅವರನ್ನು ಗೌರವಿಸಲಾಯಿತು   

ಹುಣಸೂರು: ‘ಸರ್ಕಾರಿ ಶಾಲೆ ಉಳಿಸಿ ಬೆಳೆಸುವಲ್ಲಿ ಜನಪ್ರತಿನಿಧಿ ಜೊತೆಗೆ ಸಾರ್ವಜನಿಕರು ಕೈ ಜೋಡಿಸುವುದರಿಂದ ಆರ್ಥಿಕ ಅಸಮರ್ಥರನ್ನು ಸಮಾಜಮುಖಿಯಾಗಿಸಲು ಸಾಧ್ಯ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ತಿಮ್ಮಯ್ಯ ಹೇಳಿದರು.

ನಗರದ 140 ವರ್ಷ ಇತಿಹಾಸ ಹೊಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳು ಸಮಾಜ ಕಟ್ಟುವಲ್ಲಿ ತಮ್ಮದೇ ಕೊಡುಗೆ ನೀಡಿದೆ. ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳಿಲ್ಲದಿದ್ದಾಗ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಮಕ್ಕಳ ದಾಖಲೆಗೆ ಸಾಲು ನಿಲ್ಲುವ ಚಿತ್ರಣವಿತ್ತು. ಇತ್ತೀಚಿನ ದಿನದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಪರ್ಧೆಯಿಂದಾಗಿ ಸರ್ಕಾರಿ ಶಾಲೆಗಳು ಮುನ್ನಲೆಗೆ ಬರಲು ಕಷ್ಟಪಡುವಂತಾಗಿದೆ. ಸರ್ಕಾರ ಈಗಲೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಮಕ್ಕಳ ಕಲಿಕೆಗೆ ಅಗತ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ಎಲ್ಲವೂ ನೀಡಿದೆ ಎಂದರು.

ADVERTISEMENT

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವು ತುರ್ತಾಗಿ ಆಗಬೇಕಿದ್ದು, ಬಡವರ ಆಶಾಕಿರಣವಾದ ಶಾಲೆ ಉಳಿಸಿ ಬೆಳೆಸುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ತಾಲ್ಲೂಕಿನ ಅಭಿವೃದ್ಧಿ ಕೇವಲ ಸವಲತ್ತುಗಳನ್ನು ಕಲ್ಪಿಸುವುದಕ್ಕೆ ಸೀಮಿತಗೊಳಿಸದೆ ಅಭಿವೃದ್ಧಿ ಶೈಕ್ಷಣಿಕವಾಗಿಯೂ ಆಗಬೇಕಾಗಿದೆ. ಆ ದೃಷ್ಟಿಯಿಂದ ಪ್ರತಿಯೊಬ್ಬರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಕಾವ್ಯಾ ರಾಣಿ ಮಾತನಾಡಿದರು. ತಹಶೀಲ್ದಾರ್‌ ಮಂಜುನಾಥ್‌, ವಿ.ಪಿ.ಸಾಯಿನಾಥ್‌, ನಿಂಗರಾಜ್‌ ಮಲ್ಲಾಡಿ, ರಾಘು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶುಭಾ, ಉಪಾಧ್ಯಕ್ಷ ರಫಿಕ್‌ ಆಹಮ್ಮದ್‌, ಮುಖ್ಯಶಿಕ್ಷಕ ಮಾಧುಪ್ರಸಾದ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.