ADVERTISEMENT

ಕೇಂದ್ರ ಸರ್ಕಾರದಿಂದ ಸುಳ್ಳಿನ ಗ್ಯಾರಂಟಿ: ಪುಷ್ಪಾ ಆರೋಪ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಆರೋಪ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 6:51 IST
Last Updated 17 ಮಾರ್ಚ್ 2024, 6:51 IST
ಪುಷ್ಪಾ ಅಮರನಾಥ್
ಪುಷ್ಪಾ ಅಮರನಾಥ್   

ಮೈಸೂರು: ‘ಕೇಂದ್ರ ಸರ್ಕಾರವು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡುತ್ತಿದೆ’ ಎಂದು ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಎರಡು ಅವಧಿಯಿಂದಲೂ ಅಧಿಕಾರದಲ್ಲಿದ್ದರೂ ಜನರಿಗೆ ಯಾವ ಅನುಕೂಲವನ್ನೂ ಬಿಜೆಪಿ ಸರ್ಕಾರ ಕಲ್ಪಿಸಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯಲಿಲ್ಲ. ಇಂಧನ ಬೆಲೆಯೂ ಏರಿಕೆಯಾಗುತ್ತಲೇ ಹೋಯಿತು’ ಎಂದು ಟೀಕಿಸಿದರು.

‘ಬಿಜೆಪಿಯು ಮೋದಿ ಗ್ಯಾರಂಟಿಗಳ ಹೆಸರಿನಲ್ಲಿ ಮತ ಕೇಳುತ್ತಿದೆ. ಕೇಂದ್ರ ಸರ್ಕಾರ ಕೇವಲ ಸುಳ್ಳಿನ‌ ಗ್ಯಾರಂಟಿ ಕೊಡುತ್ತಿದೆ’ ಎಂದು ದೂರಿದರು.

ADVERTISEMENT

‘ಕರ್ನಾಟಕಕ್ಕೆ ತೆರಿಗೆ ಪಾಲಿನ ಹಂಚಿಕೆ, ಅನುದಾನ ಹಾಗೂ ವಿವಿಧ ಪರಿಹಾರದಲ್ಲೂ ಅನ್ಯಾಯವನ್ನು ಮಾಡಲಾಗಿದೆ. ಪ್ರಧಾನಿ ಮೋದಿ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿವೆ. ನಮ್ಮ‌ ರಾಜ್ಯಕ್ಕೆ ಬರಬೇಕಿದ್ದ ಹಣವನ್ನು ಬೇರೆ ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಜನರು, ಆ ಪಕ್ಷದ ನಾಯಕರ ಭರವಸೆಗಳನ್ನು ನಂಬಬಾರದು’ ಎಂದು ಕೋರಿದರು.

‘ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಪಂಚ ಗ್ಯಾರಂಟಿಗಳನ್ನೂ ಜಾರಿಗೆ ತಂದಿದೆ. ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಇದಕ್ಕೆ ಶಕ್ತಿ ತುಂಬಬೇಕು’ ಎಂದು ಮನವಿ ಮಾಡಿದರು.

‘ಮಹಿಳಾ ಮೀಸಲಾತಿ ಆದಷ್ಟು ಬೇಗ ಜಾರಿಯಾಗಬೇಕು. ಅದು ಜಾರಿಯಾಗಿದ್ದರೆ ನಮ್ಮಂತಹ ಆಕಾಂಕ್ಷಿಗಳಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೇ ಟಿಕೆಟ್ ಸಿಗುತ್ತಿತ್ತು. ಮಹಿಳೆಯರನ್ನು ಕಡೆಗಣಿಸಲಾಗುತ್ತಿತ್ತು. ಈಗಲೂ ನಾನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ’ ಎಂದರು.

‘ಮಹಿಳೆಯರ ಮೇಲಿನ ತಾರತಮ್ಯ ನಿಲ್ಲಬೇಕೆಂದರೆ, ಅವರಿಗೆ ಎಲ್ಲ ಕ್ಷೇತ್ರಗಳಲ್ಲೂ ಶೇ 50ರಷ್ಟು ಮೀಸಲಾತಿ ಜಾರಿಗೆ ಬರಬೇಕು’ ಎಂದು ಹೇಳಿದರು.

‘ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಐಸಿಸಿಯಿಂದ ನೀಡಲಾಗಿರುವ ‘ನಾರಿ ನ್ಯಾಯ’ ಐದು ಗ್ಯಾರಂಟಿ ಕಾರ್ಯಕ್ರಮಗಳು ಮಹಿಳಾ ಸ್ವಾವಲಂಬನೆಗೆ ಮತ್ತು ರಕ್ಷಣೆಗೆ ಒತ್ತು ನೀಡಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘10 ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ಪತ್ರಿಕಾಗೋಷ್ಠಿ ನಡೆಸಲಿಲ್ಲ. ಪ್ರಶ್ನೆಗಳನ್ನು ಎದುರಿಸಲಾಗದೇ ಮನ್ ಕಿ ಬಾತ್‌ನಲ್ಲಿ ಮಾತನಾಡಿದರು. ಚುನಾವಣಾ ಬಾಂಡ್ ಹಗರಣ ಬೆಳಕಿಗೆ ಬಂದಿದ್ದು, ಇಂಥದ್ದಕ್ಕೆ ಯಾರು ಉತ್ತರಿಸಬೇಕು’ ಎಂದು ಕೇಳಿದರು.

ಪಕ್ಷದ ನಾಯಕಿಯರಾದ ಪುಷ್ಪಾಲತಾ ಚಿಕ್ಕಣ್ಣ, ಮೋದಾಮಣಿ, ಪುಷ್ಪವಲ್ಲಿ, ರಾಧಾಮಣಿ, ಸುಜಾತಾರಾವ್, ಲತಾ ಮೋಹನ್, ಸುಶೀಲಾ ಮರೀಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.