ADVERTISEMENT

ಕಲಿಕಾಮಟ್ಟ ಕುಸಿತಕ್ಕೆ ಕಾರಣ ಅರಿಯಿರಿ

ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿ– ಕೆಡಿಪಿ ಸಭೆಯಲ್ಲಿ ಶಾಸಕ ಅನಿಲ್‌ ಚಿಕ್ಕಮಾದು

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:12 IST
Last Updated 26 ಮೇ 2025, 16:12 IST
ಎಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 20 ಅಂಶಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿದರು
ಎಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 20 ಅಂಶಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿದರು   

ಎಚ್.ಡಿ.ಕೋಟೆ: ‘ಸರ್ಕಾರದಿಂದ ಶಿಕ್ಷಣ ಇಲಾಖೆಗೆ ಸಾಕಷ್ಟು ಅನುದಾನ ನೀಡಿದ್ದೇವೆ. ಶಿಕ್ಷಣದಲ್ಲಿ ಹಿಂದುಳಿಯಲು ಹಾಗೂ ಕಲಿಕಾಮಟ್ಟ ಕಡಿಮೆ ಆಗಲು ಕಾರಣವೇನು ಎಂಬುದು ಅರಿಯಬೇಕು’ ಎಂದು ಶಾಸಕ ಅನಿಲ್‌ ಚಿಕ್ಕಮಾದು ಸೂಚಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 20 ಅಂಶಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕು ಜಿಲ್ಲೆಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿದೆ. ಇದಕ್ಕೆ ಕಾರಣವೇನು ಎಂದು ಶಿಕ್ಷಣ ಸಂಯೋಜಕ ಕೃಷ್ಣಯ್ಯನ ಅವರನ್ನು ಪ್ರಶ್ನಿಸಿದರು.

ADVERTISEMENT

ಶಾಲಾ ಹಂತದಲ್ಲಿಯೇ ಬೇಕರಿ ಸೇರಿದಂತೆ ಇತರೆ ಕೆಲಸಗಳಿಗೆ ಮಕ್ಕಳು ಹೋಗುತ್ತಿದ್ದರೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ದುಡಿಯುತ್ತಿರುವ ಮಕ್ಕಳನ್ನು ಗುರುತಿಸಬೇಕು. ಸೂಕ್ತ ನೆರವು ನೀಡಿ ಪೋಷಕರೊಂದಿಗೆ ಮಾತನಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ತಾಲ್ಲೂಕು ಶಿಕ್ಷಣ ಸಂಯೋಜಕ ಕೃಷ್ಣಯ್ಯ ಮಾತನಾಡಿ, ‘ತಾಲ್ಲೂಕಿನಲ್ಲಿ ಶೇ 57ರಷ್ಟು ಫ‌ಲಿತಾಂಶ ಬಂದಿದೆ‌. ಹಲವಾರು ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಆದರೂ ಫಲಿತಾಂಶ ಕಳಪೆಯಾಗಿದೆ. 3161 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಅದರಲ್ಲಿ 1817 ಮಕ್ಕಳು ಉತ್ತೀರ್ಣರಾಗಿದ್ದಾರೆ. ಇನ್ನೂ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ಇದ್ದು, ಉತ್ತಮ ಫಲಿತಾಂಶ ಬರಲಿದೆ’ ಎಂದು ತಿಳಿಸಿದರು.

ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳು ನಿರಂತರವಾಗಿ ಗೈರುಹಾಜರಿಯಿಂದ ಫಲಿತಾಂಶ ಕಡಿಮೆ ಬರಲು ಕಾರಣವಾಗಿದೆ ಎಂದರು.

ಸರಗೂರು ತಹಶೀಲ್ದಾರ್ ಮೋಹನ್ ಕುಮಾರಿ ಮಾತನಾಡಿ, ‘ಸುಭಾಷ್ ಪವರ್ ಸ್ಟೇಷನ್ ಮಾಲಿಕರು ವಿವಿಧ ಬ್ಯಾಂಕುಗಳಿಂದ ನೂರಾರು ಕೋಟಿ ಸಾಲ ಪಡೆದಿದ್ದಾರೆ. ಈ ಬಗ್ಗೆ ವರದಿ ನೀಡಲು 15 ದಿನಗಳ ಹಿಂದೆ ನೋಟಿಸ್ ಜಾರಿ ಮಾಡಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದು ಶಾಸಕರ ಗಮನಕ್ಕೆ ತಂದರು. ‌

‘ಕಬಿನಿ ಸುಭಾಷ್ ಪವರ್ ಸ್ಟೇಷನ್‌ನವರು ಸರ್ಕಾರಕ್ಕೆ ವಂಚನೆ ಮಾಡಿರುವ ಆರೋಪ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಹಾಗಾಗಿ ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕಡತ ಪರಿಶೀಲನೆ ಮಾಡಬೇಕು. ತಪ್ಪು ಮಾಡಿದವರ ಮೇಲೆ ಶಿಸ್ತು ಕ್ರಮ ಮತ್ತು ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು’ ಎಂದು ಶಾಸಕರು ತಿಳಿಸಿದರು.‌

ಕಬಿನಿ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಗಣೇಶ್ ಪ್ರತಿಕ್ರಿಯಿಸಿ, ‘ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಗೂ ಮುನ್ನ ಶಾಸಕರು, ಕಳೆದ ತ್ರೈಮಾಸಿಕ ವರದಿಯ ಅನುಪಾಲನೆ ವರದಿಯನ್ನು 9 ಇಲಾಖೆಗಳು ಮಾತ್ರ ನೀಡಿವೆ. ಉಳಿದ ಇಲಾಖೆಯವರು ಯಾಕೆ ವರದಿ ನೀಡಿಲ್ಲ ಎಂದು ಪ್ರಶ್ನಿಸಿದರು.

ತಹಶೀಲ್ದಾರ್‌ಗಳಾದ ಶ್ರೀನಿವಾಸ್, ಮೋಹನ್ ಕುಮಾರಿ, ಇಒಗಳಾದ ಧರಣೀಶ್, ಪ್ರೇಮ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ವಸಂತಕುಮಾರ್, ಕೆಡಿಪಿ ಸದಸ್ಯರಾದ ಚಲುವರಾಜು, ಚಾಮರಾಜು, ಅನಿತಾ, ರಾಮಚಾರಿ, ಉಪಕಾರಿ, ಎಂ.ಗಿರೀಶ್, ಪುರಸಭಾ ಮುಖ್ಯಾಧಿಕಾರಿ ಪಿ.ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.