ADVERTISEMENT

ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ? ಕೂಸು ಹುಟ್ಟುವ ಮೊದಲೇ ಕುಲಾವಿ ಬೇಡ ಎಂದ ಆಶೋಕ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 11:08 IST
Last Updated 27 ಫೆಬ್ರುವರಿ 2026, 11:08 IST
<div class="paragraphs"><p>ಆರ್. ಆಶೋಕ</p></div>

ಆರ್. ಆಶೋಕ

   

ಮೈಸೂರು: ‘ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ನಮ್ಮಲ್ಲಿ ಯಾವ ತೀರ್ಮಾನವೂ ಆಗಿಲ್ಲ. ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸುವುದು ಸರಿಯಲ್ಲ. ಮೊದಲು ಒಟ್ಟಾಗಿ ಸೇರಿ ಚುನಾವಣೆ ಗೆಲ್ಲಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಇಲ್ಲಿ ಹೇಳಿದರು.

ಎಚ್‌.ಡಿ. ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂಬ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರ ಹೇಳಿಕೆಗೆ ಮೇಲಿನಂತೆ ಅವರು ಪ್ರತಿಕ್ರಿಯಿಸಿದರು.

ADVERTISEMENT

‘ಅವರವರ ಪಕ್ಷದ ವಿಚಾರವನ್ನು ಅವರವರು ಮಾತನಾಡುತ್ತಾರೆ. ಎನ್‌ಡಿಎ ವಿಚಾರದಲ್ಲಿ, ಮುಖ್ಯಮಂತ್ರಿ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷರು ಒಳಗೊಂಡ ಹೈಕಮಾಂಡ್ ತೀರ್ಮಾನಿಸುತ್ತದೆ. ರಾಜ್ಯದ ಮೈತ್ರಿಗಿಂತ ಎನ್‌ಡಿಎ ಒಕ್ಕೂಟದ ನಿರ್ಧಾರ ಬಹಳ ಮುಖ್ಯವಾಗುತ್ತದೆ’ ಎಂದರು.

‘ಬಿಜೆಪಿ ಶಿಸ್ತುಬದ್ಧ ಪಕ್ಷ. ನಮ್ಮಲ್ಲಿ ಮುಖ್ಯಮಂತ್ರಿ ಆಯ್ಕೆ ಹೇಗೆ ನಡೆಯುತ್ತದೆ, ಏನೆಲ್ಲಾ ಅಚ್ಚರಿಯ ಆಯ್ಕೆ ಆಗುತ್ತದೆ ಎಂಬುದು ಎಲ್ಲರೂ ನೋಡಿದ್ದೀರಿ. ಈ ಹಂತದಲ್ಲಿ ಯಾವುದೂ ನೂರಕ್ಕೆ ನೂರರಷ್ಟು ಅಂತಿಮವಾಗಿಲ್ಲ’ ಎಂದು ಹೇಳಿದರು.

‘ಬಿಬಿಎ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ವಿಚಾರದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಸಂಬಂಧಿಸಿದಂತೆ ಇನ್ನೂ ಮಾತುಕತೆ ನಡೆಯುತ್ತಿದೆ. ಇದು ಕೂಡ ಅಂತಿಮವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಿಬಿಎ ಚುನಾವಣೆ ಮೈತ್ರಿ ಸಂಬಂಧ ನಮ್ಮ ಉಸ್ತುವಾರಿ ಜೊತೆ ಮಾತನಾಡಿದ್ದೇನೆ. ನಾನು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ ರಾಜ್ಯದ ನಾಯಕರು ಅಭಿ‍ಪ್ರಾಯ ಕೊಟ್ಟಿದ್ದೇವೆ. ಅದೇನೇ ಇದ್ದರೂ, ದೇಶದ ಹಿತದೃಷ್ಟಿಯಿಂದ ಹೈಕಮಾಂಡ್‌ ಮಾಡುವ ನಿರ್ಧಾರಕ್ಕೆ ಬದ್ಧ ಎಂದಿದ್ದೇವೆ’ ಎಂದರು.

‘ಈಗ ದೋಸ್ತಿ ಇದೆ. ಅದು ಮುಂದುವರಿಯುತ್ತದೆ. ಆದರೆ, ಮುಖ್ಯಮಂತ್ರಿ ಸ್ಥಾನದ ಸಂಬಂಧ ಯಾವುದೇ ತೀರ್ಮಾನ ಆಗಿಲ್ಲ. ಈಗಲೇ ಆಗುವುದೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.