ADVERTISEMENT

ಸರಗೂರು: ರೈಲ್ವೆ ಬ್ಯಾರಿಕೇಡ್‌ ಪರಿಶೀಲಿಸಿದ ಸಮಿತಿ

ಯಡಿಯಾಲ ಉಪವಿಭಾಗ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಹಾವಳಿ ತಡೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 4:33 IST
Last Updated 28 ಅಕ್ಟೋಬರ್ 2021, 4:33 IST
ಸರಗೂರು ತಾಲ್ಲೂಕಿನ ಯಡಿಯಾಲ ಉಪವಿಭಾಗದ ಅರಣ್ಯ ಪ್ರದೇಶಕ್ಕೆ ವಿಧಾನಪರಿಷತ್‌ನ ಅರ್ಜಿಗಳ ಸಮಿತಿ ಭೇಟಿ ನೀಡಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಪರಿಶೀಲಿಸಿತು
ಸರಗೂರು ತಾಲ್ಲೂಕಿನ ಯಡಿಯಾಲ ಉಪವಿಭಾಗದ ಅರಣ್ಯ ಪ್ರದೇಶಕ್ಕೆ ವಿಧಾನಪರಿಷತ್‌ನ ಅರ್ಜಿಗಳ ಸಮಿತಿ ಭೇಟಿ ನೀಡಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಪರಿಶೀಲಿಸಿತು   

ಸರಗೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಯಡಿಯಾಲ ಉಪವಿಭಾಗದ ಅರಣ್ಯ ಪ್ರದೇಶಕ್ಕೆ ವಿಧಾನ ಪರಿಷತ್‌ನ ಅರ್ಜಿಗಳ ಸಮಿತಿ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.

ಯಡಿಯಾಲ ಉಪವಿಭಾಗ ಅರಣ್ಯ ಪ್ರದೇಶದ ಮೊಳೆಯೂರು ವಲಯ, ಯಡಿಯಾಲ ವಲಯ ಹಾಗೂ ಓಂಕಾರ ವನ್ಯಜೀವಿ ವಲಯ ಪ್ರದೇಶ ವ್ಯಾಪ್ತಿಯಲ್ಲಿನ ಕಾಡಂಚಿನ ಪ್ರದೇಶಗಳಿಗೆ ಭೇಟಿ ನೀಡಿ, ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಜಮೀನಿಗೆ ಆಗುವ ಅನಾಹುತಗಳನ್ನು ತಡೆಗಟ್ಟಲು ಅರಣ್ಯ ಇಲಾಖೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರೈಲ್ವೆ ಬ್ಯಾರಿಕೇಡ್‌ಗಳನ್ನು ವೀಕ್ಷಿಸಿತು.

‘ಈಗಾಗಲೇ ಅಳವಡಿಸಿರುವ ರೈಲ್ವೆ ಕಂಬಿಗಳ ಅಂತರವನ್ನು ಕಡಿಮೆ ಮಾಡಿ, ಆನೆಗಳು ರೈಲ್ವೆ ಕಂಬಿಗಳ ಮೂಲಕ ಕಾಡಿನಿಂದ ಜಮೀನಿನತ್ತ ನುಸುಳದಂತೆ ನೋಡಿಕೊಳ್ಳಬೇಕು. ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಹಂದಿ, ಜಿಂಕೆಯಂಥ ಪ್ರಾಣಿಗಳ ಹಾವಳಿಯನ್ನೂ ತಡೆಯಲು ರೈಲ್ವೆ ಕಂಬಿ ಕೆಳಗಡೆ ತಂತಿ ಬೇಲಿ ಅಳವಡಿಸಲಾಗುವುದು. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು’ ಎಂದು ವಿಧಾನಪರಿಷತ್‌ನ ಅರ್ಜಿಗಳ ಸಮಿತಿ ಅಧ್ಯಕ್ಷರೂ ಆದ ಉಪಸಭಾಪತಿ ಎಂ.ಕೆ.ಪ್ರಾಣೇಶ್ ತಿಳಿಸಿದರು.

ADVERTISEMENT

ಕಾಡುಪ್ರಾಣಿಗಳ ಹಾವಳಿ ತಡೆಗಟ್ಟ ಬೇಕು ಎಂದು ಒತ್ತಾಯಿಸಿ ನಾಗಣಾಪುರ ಗ್ರಾಮಸ್ಥರು ಎಂ.ಕೆ.ಪ್ರಾಣೇಶ್ ಅವರಿಗೆ ಮನವಿ ಸಲ್ಲಿಸಿದರು.

ಸಮಿತಿ ಸದಸ್ಯರಾದ ಮರಿತಿಬ್ಬೇಗೌಡ, ತೇಜಸ್ವಿನಿಗೌಡ, ಎನ್.ಅಪ್ಪಾಜಿ ಗೌಡ, ಮೋಹನ್‌ಕುಮಾರ್ ಕೊಂಡಜ್ಜಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ರಾಜ್ಯ ಮುಖ್ಯ ವನ್ಯಜೀವಿ ಪರಿಪಾಲಕ ವಿಜಯ್‌ಕುಮಾರ್ ಗೋಗಿ, ಅರಣ್ಯ ಪ್ರಧಾನ ಕಾರ್ಯದರ್ಶಿ ಸಂಜಯ್ ಬಿಜ್ಜೂರ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಸಿ.ಎಸ್.ನಟೇಶ್, ಆರ್‌ಎಫ್ಒಗಳಾದ ಪುಟ್ಟರಾಜು, ಶಶಿಧರ್, ಸಚಿನ್, ಗೀತಾ ನಾಯಕ್, ಎಸ್.ಡಿ.ಷಣ್ಮುಖ, ನಾಗೇಂದ್ರಪ್ರಸಾದ್,ಸಿಬ್ಬಂದಿ ಎಂ.ಎಸ್.ರವಿಕುಮಾರ್, ಸುನೀಲ್‌ ಕುಮಾರ್ ಪಾಟೀಲ್, ಪರಮೇಶ್ ಹಾಜರಿದ್ದರು.

‘ಪರಿಹಾರ ಬದಲಿಗೆ ನಿಗದಿತ ಬೆಲೆ ಕೊಡಿ’

‘ಕಾಡುಪ್ರಾಣಿಗಳಿಂದ ಬೆಳೆ ನಾಶವಾದರೆ ಪರಿಹಾರ ನೀಡುವುದು ಮುಖ್ಯವಲ್ಲ. ಬದಲಿಗೆ ಬದುಕು ರೂಪಿಸುವ ಕೆಲಸವಾಗಬೇಕು. ಪರಿಹಾರ ಎನ್ನುವ ಬದಲಿಗೆ ನಿಗದಿತ ಬೆಲೆ ಕೊಡಿಸುವ ಸಂಬಂಧ ಸದನದಲ್ಲಿ ಚರ್ಚಿಸುತ್ತೇನೆ’ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ತಿಳಿಸಿದರು.

ತಾಲ್ಲೂಕಿನ ಬಿ.ಮಟಕೆರೆ ಗ್ರಾಮದ ಪ್ರೌಢಶಾಲೆಯಲ್ಲಿ ನಡೆದ ರೈತರಿಂದ ಅಹವಾಲು ಸಲ್ಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಡುಪ್ರಾಣಿಗಳ ದಾಳಿಯಿಂದ ಬೆಳೆ ಹಾನಿಗೆ ನೀಡುತ್ತಿರುವ ಪರಿಹಾರದ ಬಗ್ಗೆ ಸಮಿತಿ ಪರಿಶೀಲನೆ ನಡೆಸುತ್ತಿದೆ. ಆನೆ ಹಾವಳಿ ತಡೆಯಲು ರೈಲ್ವೆ ಬ್ಯಾರಿಕೇಡ್‌ ಅಳವಡಿಸುವ ಕಾರ್ಯ ಶೇ 80ರಷ್ಟು ಮುಗಿದಿದೆ. ಬಾಕಿ ಇರುವ ಕಡೆಗಳಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಲು ಶೀಘ್ರದಲ್ಲೇ ಕ್ರಮ ವಹಿಸಲಾಗುವುದು’ ಎಂದರು.

‌ಗ್ರಾ.ಪಂ ಅಧ್ಯಕ್ಷೆ ರೂಪಾಬಾಯಿ ಮಲ್ಲೇಶ್‌ನಾಯಕ್, ಉಪಾಧ್ಯಕ್ಷ ದೇವದಾಸ್, ಮುಖಂಡರಾದ ಹರಿದಾಸ್, ಹಿಮದ್‌ಕುಮಾರ್, ಭೀಮರಾಜ್, ಗುಣಪಾಲ್, ಅಣ್ಣಯ್ಯಸ್ವಾಮಿ, ಜಿ.ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.