ADVERTISEMENT

ಬೆಳೆಗಳಿಗೆ ಗುಟುಕು ಜೀವ ನೀಡಿದ ವರುಣ

ಕೆಲವೆಡೆ ಮರಗಳು ಧರೆಗೆ, ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 9 ಮೇ 2019, 9:11 IST
Last Updated 9 ಮೇ 2019, 9:11 IST
ಮಳೆ ನಿಂತು ಹೋದ ಮೇಲೆ...ಮೈಸೂರಿನಲ್ಲಿ ಬುಧವಾರ ಮಳೆ ಸುರಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ರಸ್ತೆಯಲ್ಲಿ ಚಲಿಸಿದ ವಾಹನಗಳು ನಿಂತ ನೀರಿನಲ್ಲಿ ಪ್ರತಿಫಲಿಸಿದವು
ಮಳೆ ನಿಂತು ಹೋದ ಮೇಲೆ...ಮೈಸೂರಿನಲ್ಲಿ ಬುಧವಾರ ಮಳೆ ಸುರಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ರಸ್ತೆಯಲ್ಲಿ ಚಲಿಸಿದ ವಾಹನಗಳು ನಿಂತ ನೀರಿನಲ್ಲಿ ಪ್ರತಿಫಲಿಸಿದವು   

ಮೈಸೂರು: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಯು ಒಣಗುತ್ತಿದ್ದ ಬೆಳೆಗಳಿಗೆ ಗುಟುಕು ಜೀವ ನೀಡಿದೆ. ಕೆಲವೆಡೆ ಹೆಸರು, ಉದ್ದು, ಅಲಸಂದೆ, ಎಳ್ಳು ಮತ್ತು ಜೋಳವನ್ನು ರೈತರು ಬಿತ್ತನೆ ಮಾಡಿದ್ದರು. ಮಳೆ ಇಲ್ಲದೇ ಪರಿತಪಿಸುತ್ತಿದ್ದರು. ಈಗ ಬಿದ್ದಿರುವ ಮಳೆಯು ರೈತರಿಗೆ ಸಮಾಧಾನ ತರಿಸಿದೆ.‌

ತೋಟಗಾರಿಕಾ ಬೆಳೆಗಾರರೂ ಇದರಿಂದ ಸಂತಸಗೊಂಡಿದ್ದಾರೆ. ಹಲವೆಡೆ ಬೀನ್ಸ್, ಟೊಮೆಟೊ, ಹಸಿಮೆಣಸಿನಕಾಯಿಯ ಸಸಿಗಳು ಒಣಗುತ್ತಿದ್ದವು. ಬಿದ್ದಿರುವ ಮಳೆಯಿಂದ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಾಗಬಹುದು ಎಂಬ ನಿರೀಕ್ಷೆ ರೈತರದು.

ಮೈಸೂರು ನಗರದ ಹೊರವಲಯದಲ್ಲಿ ಹೆಚ್ಚಿನ ಮಳೆ ಸುರಿದಿದೆ. ಬೀಸಿದ ಬಿರುಗಾಳಿಗೆ ವಿಜಯನಗರದ 3ನೇ ಹಂತ, ಕೆ.ಡಿ.ವೃತ್ತ, ನಜರ್‌ಬಾದಿನ ಸಂದೇಶ್‌ಪ್ರಿನ್ಸ್‌ ಹೋಟೆಲ್‌ ಸಮೀಪ, ಶಾರದಾದೇವಿನಗರದ ಕೆನರಾಬ್ಯಾಂಕ್ ಹತ್ತಿರ, ಶ್ರೀರಾಂಪುರದ ಅಮೃತ್‌ ಬೇಕರಿ ಸಮೀಪ ಮರಗಳು ಉರುಳಿ ಬಿದ್ದಿವೆ.

ADVERTISEMENT

ಶಾರದಾದೇವಿನಗರದಲ್ಲಿ ಮರವು ಬೈಕ್‌ ಸವಾರರೊಬ್ಬರ ಮೇಲೆ ಉರುಳಿತು. ಕೂದಲೆಳೆಯ ಅಂತರದಲ್ಲಿ ಅವರು ಯಾವುದೇ ಗಾಯಗಳಾಗದೇ ಪಾರಾದರು. ರಾಮಕೃಷ್ಣನಗರದ 1ನೇ ಬ್ಲಾಕಿನ ವಾಸು ಬಡಾವಣೆಯ 9ನೇ ಕ್ರಾಸ್‌ನಲ್ಲಿ ಮರವೊಂದು ಮನೆ ಮತ್ತು ವಿದ್ಯುತ್‌ ತಂತಿಯ ಮೇಲೆ ಉರುಳಿ ಬಿದ್ದು ಆತಂಕ ಸೃಷ್ಟಿಸಿತು. ಮರ ಬಿದ್ದ ಕಡೆಯಲ್ಲೆಲ್ಲ ಪಾಲಿಕೆಯ ಅಭಯ್‌ ರಕ್ಷಣಾ ತಂಡದ ಸದಸ್ಯರು ತೆರಳಿ ತೆರವು ಕಾರ್ಯಾಚರಣೆ ನಡೆಸಿದರು.

ಬೋಗಾದಿ ಬಳಿಯ ರಿಂಗ್‌ರಸ್ತೆಯಲ್ಲಿ ನೀರು ತುಂಬಿ ಹರಿಯಿತು. ಕೆಲವೆಡೆ ಮ್ಯಾನ್‌ಹೋಲ್‌ಗಳಲ್ಲಿ ನೀರು ಉಕ್ಕಿತು. ಇದರಿಂದ ವಾಹನ ಸವಾರರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.