ADVERTISEMENT

ಮಾಯದಂಥ ಮಳೆಗೆ ಬಗೆಬಗೆ ಆಚರಣೆ

ಮಳೆಗೆ ಜನರ ಮೊರೆ

ಎನ್.ನವೀನ್ ಕುಮಾರ್
Published 24 ಮೇ 2019, 19:56 IST
Last Updated 24 ಮೇ 2019, 19:56 IST
ಮಳೆಗಾಗಿ ಕತ್ತೆಗಳ ಮದುವೆ –ಸಂಗ್ರಹ ಚಿತ್ರ
ಮಳೆಗಾಗಿ ಕತ್ತೆಗಳ ಮದುವೆ –ಸಂಗ್ರಹ ಚಿತ್ರ   

ಜನಪದರು ಪ್ರಕೃತಿ, ನೆಲ, ನೀರು, ಗಾಳಿ, ಆಕಾಶದ ಜೊತೆ ತಾಯಿ– ಮಗುವಿನ ಸಂಬಂಧ ಇಟ್ಟುಕೊಂಡಿದ್ದಾರೆ. ಹೀಗೆ ಪ್ರಕೃತಿಯ ಜೊತೆಗೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿರುವ ಜನಪದರು, ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆ ಹಿಂದೆ ಯಾವುದೋ ಅಘೋಚರ ಶಕ್ತಿ ಇದೆ ಎಂದೇ ನಂಬಿದ್ದಾರೆ. ಅಘೋಚರ ಶಕ್ತಿ ಈ ಜಗತ್ತನ್ನು ನಡೆಸುತ್ತಿದೆ, ನಮ್ಮನ್ನು ನೋಡಿಕೊಳ್ಳುತ್ತಿದೆ. ಕಾಲಕಾಲಕ್ಕೆ ಬಿಸಿಲು, ಚಳಿ, ಮಳೆಯನ್ನು ನೀಡುತ್ತಿದೆ ಎಂಬ ಭಾವನೆ ಅವರದ್ದು. ಒಂದೊಮ್ಮೆ ಮಳೆ ಬಾರದೇ ಇದ್ದಾಗ ಪ್ರಕೃತಿಗೆ ಸಮಾಧಾನ ಮಾಡುವ, ಪ್ರಕೃತಿಯನ್ನು ಒಲಿಸಿಕೊಳ್ಳಲು ಅನೇಕ ಆಚರಣೆಗಳನ್ನು ಇಟ್ಟುಕೊಂಡಿದ್ದಾರೆ.

ನೆಲಕ್ಕೆ, ಜನಕ್ಕೆ ಸೇತುವೆಯೇ ಜಲ. ಅದನ್ನು ಈ ಭೂಮಿಗೆ ತರಲು ಜನಪದರು ವಿಶಿಷ್ಟ ಆಚರಣೆಗಳಿಗೆ ಮೊರೆ ಹೋಗಿದ್ದಾರೆ. ದೇವರ ಮೊರೆ ಹೋದರೆ ಮಳೆ ಬರುವುದೇ? ಜನರ ನಂಬಿಕೆ ಸುಳ್ಳೆಂದು ಹೇಳಲು ಸಾಧ್ಯವಿಲ್ಲ. ಅವರ ನಂಬಿಕೆಯಿಂದಲೇ ಮಳೆ ಬಂದ ಉದಾಹರಣೆಗಳು ಎಷ್ಟೋ. ಮಳೆರಾಯನನ್ನು ಓಲೈಸಿಕೊಳ್ಳಲು ಪ್ರಯತ್ನಿಸಿದ ಸಂದರ್ಭದಲ್ಲಿ ನಾಲ್ಕು ಮಳೆಹನಿಯಾದರೂ ಬೀಳುತ್ತದೆ. ಅಷ್ಟರ ಮಟ್ಟಿಗೆ ಜನರ ನಂಬಿಕೆ ಗಟ್ಟಿಯಾಗಿದೆ.

ಮೈಸೂರು ಜಿಲ್ಲೆಯಲ್ಲಿ ಇಂತಹ ಅನೇಕ ಆಚರಣೆಗಳಿವೆ. ಕಪ್ಪೆ ಹಾಗೂ ಕತ್ತೆಗಳಿಗೆ ಮದುವೆ ಮಾಡುವುದು, ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವುದು, ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವುದು, ಹರಕೆ ಸೇವೆ ಸಲ್ಲಿಸುವುದು... ಹೀಗೆ ಅನೇಕ ಆಚರಣೆಗಳನ್ನು ಇಂದಿಗೂ ಕಾಣಬಹುದು. ಜಿಲ್ಲೆಯಲ್ಲಿರುವ ಇಂತಹ ಆಚರಣೆಗಳ ಕಡೆಗೆ ಇಣುಕು ನೋಟ ಇಲ್ಲಿದೆ.

ADVERTISEMENT

ಕಪ್ಪೆಗಳಿಗೆ ಶಾಸ್ತ್ರೋಕ್ತ ಮದುವೆ: ಕೆ.ಆರ್.ನಗರ ತಾಲ್ಲೂಕಿನಲ್ಲಿ ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡುವ ಸಂಪ್ರದಾಯವಿದೆ. ತೀವ್ರ ಬರಗಾಲ ಉಂಟಾದಾಗ ಕಪ್ಪೆಗಳಿಗೆ ಮದುವೆ ಮಾಡುತ್ತಾರೆ. ಬೋರೇಗೌಡನ ಕೊಪ್ಪಲು ಗ್ರಾಮದಲ್ಲಿ ಗಂಡು ಹಾಗೂ ಹೆಣ್ಣು ಕಪ್ಪೆಗಳನ್ನು ಹುಡುಕಿ ತಂದು ಅವುಗಳಿಗೆ ಶಾಸ್ತ್ರಬದ್ಧವಾಗಿ ಮದುವೆ ಮಾಡಿಸುತ್ತಾರೆ. ಇದಕ್ಕಾಗಿ ಮದುವೆ ಮಂಟಪವನ್ನೂ ಕಟ್ಟಿಸುತ್ತಾರೆ. ಮದುವೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಊಟವನ್ನೂ ಹಾಕಿಸುತ್ತಾರೆ. ಮೂರು ದಿನಗಳ ನಂತರ ಬೀಗರ ಔತಣಕೂಟ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಬಾಡೂಟ ಹಾಕುತ್ತಾರೆ. ಇದಕ್ಕಾಗಿ ಗ್ರಾಮಸ್ಥರೇ ಹಣ ನೀಡುತ್ತಾರೆ.

ಮಾರಮ್ಮನಿಗೆ ತಂಬಿಟ್ಟಿನ ಆರತಿ: ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕಪ್ಪೆ, ಕತ್ತೆಗಳಿಗೆ ಮದುವೆ ಮಾಡಿಸುವುದು, ಮಾರಮ್ಮನಿಗೆ ತಂಬಿಟ್ಟಿನ ಆರತಿ ಸೇವೆ ಮಾಡುವ ಸಂಪ್ರದಾಯವಿದೆ. ಮಾರಮ್ಮನ ಮುನಿಸಿನಿಂದಾಗಿ ಮಳೆ ಬರುತ್ತಿಲ್ಲ. ಆಕೆಗೆ ತಂಪು ಮಾಡಬೇಕು ಎಂಬ ಉದ್ದೇಶದಿಂದ ನಗರದಲ್ಲಿರುವ ಪ್ರತಿ ಜನಾಂಗದವರು ಮಾರಮ್ಮನಿಗೆ ತಂಬಿಟ್ಟಿನ ಆರತಿ ಸೇವೆ ಮಾಡುತ್ತಾರೆ. ಆಯಾ ಜನಾಂಗದ ಸದಸ್ಯರು ಒಟ್ಟುಗೂಡಿ ಮೆರವಣಿಗೆ ಮೂಲಕ ತೆರಳಿ ದೇವಿಗೆ ಪೂಜೆ ಸಲ್ಲಿಸುತ್ತಾರೆ.

ಎಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕಿನ ವಿವಿಧೆಡೆ ಕಪ್ಪೆಗಳು ಹಾಗೂ ಕತ್ತೆಗಳಿಗೆ ಮದುವೆ ಮಾಡುತ್ತಾರೆ. ಹೆಣ್ಣು ಹಾಗೂ ಗಂಡು ಕಪ್ಪೆಗಳನ್ನು ಒನಕೆಯ ಎರಡೂ ಬದಿಗೆ ಕಟ್ಟುತ್ತಾರೆ. ಅವುಗಳಿಗೆ ಅರಿಸಿನ, ಕುಂಕುಮ ಹಾಗೂ ಹೂವು ಇಡುತ್ತಾರೆ. ಅವುಗಳನ್ನು ಪ್ರತಿ ಮನೆಗೂ ಕೊಂಡೊಯ್ಯಲಾಗುತ್ತದೆ. ಆ ಮನೆಯವರು ಕಪ್ಪೆಗಳ ಮೇಲೆ ನೀರು ಸುರಿದು ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ಕತ್ತೆಗಳಿಗೂ ಮದುವೆ ಮಾಡುತ್ತಾರೆ.

ಬಸವ ಮೂರ್ತಿ ಮೆರವಣಿಗೆ: ನಂಜನಗೂಡು ತಾಲ್ಲೂಕಿನಲ್ಲಿ ಕಪಿಲಾ ನದಿ ಪಾತ್ರವಿದ್ದು, ನೀರಿಗೆ ಅಂತಹ ತೀವ್ರ ಸಮಸ್ಯೆ ಉಂಟಾಗುವುದಿಲ್ಲ. ಕೆಲವೊಮ್ಮೆ ಬರಗಾಲ ಕಂಡುಬಂದರೆ ಮಣ್ಣಿನಲ್ಲಿ ಬಸವ ಮೂರ್ತಿಯನ್ನು ಮಾಡಿ, ಅದನ್ನು ಪ್ರತಿ ಮನೆಗೂ ಕೊಂಡೊಯ್ಯುತ್ತಾರೆ. ಈ ವೇಳೆ ಮಕ್ಕಳು, ‘ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆ ತೋಟಕೆ ನೀರಿಲ್ಲ’ ಎಂದು ಹಾಡುತ್ತಾರೆ. ಇದರಿಂದ ಮಳೆ ಬರುವ ಸಾಧ್ಯತೆ ಇದೆ ಎಂಬ ನಂಬಿಕೆ ಅವರದ್ದು.

ಹುಣಸೂರು ಭಾಗದಲ್ಲೂ ಕಪ್ಪೆಗಳಿಗೆ ಮದುವೆ ಮಾಡುವ ಸಂಪ್ರದಾಯವಿದೆ. ಬೆಟ್ಟದಪುರ ಭಾಗದಲ್ಲಿ ಹರಸೇವೆ ಚಾಲ್ತಿಯಲ್ಲಿದೆ. ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.