ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಕಪಿಲ ನದಿಗೆ 70ಸಾವಿರ ಕ್ಯುಸೆಕ್ ನೀರು ಹರಿಸುತ್ತಿರುವುದರಿಂದಾಗಿ ಮಾದಾಪುರದಿಂದ ಬೆಳತ್ತೂರು, ಚಕ್ಕೂರು, ಅಡಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ
ಪ್ರಜಾವಾಣಿ ಚಿತ್ರ: ರವಿಕುಮಾರ್
ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರವೂ ನಗರದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಜೋರು ಮಳೆ ಮುಂದುವರಿಯಿತು.
ದಿನವಿಡೀ ಮೋಡ ಕವಿದ ವಾತಾವರಣ ಹಾಗೂ ಶೀತ ಗಾಳಿ ಬೀಸುತ್ತಿದ್ದು, ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ.
ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಕಪಿಲ ನದಿಗೆ 70ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಮಾದಾಪುರದಿಂದ ಬೆಳತ್ತೂರು, ಚಕ್ಕೂರು, ಅಡಹಳ್ಳಿ ಸೇರಿದಂತೆ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ಜನರು ಹಾಗೂ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪರ್ಯಾಯ ಮಾರ್ಗವಿದ್ದು, ಜನರು ಬಹಳಷ್ಟು ಸುತ್ತಿಬಳಸಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಸೇತುವೆ ಮೇಲೆ ಜನರು ಸಂಚರಿಸದಂತೆ ತಡೆಯಲು ಬ್ಯಾರಿಕೇಡ್‌ಗಳನ್ನು ಇಡಲಾಗಿದೆ. ಕೆಲವು ಯುವಕರು ಅಪಾಯವನ್ನೂ ಲೆಕ್ಕಿಸದೆ ಸೇತುವೆ ಮೇಲೆ ಸಂಚರಿಸುತ್ತಿದ್ದುದು ಹಾಗೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಬೆಳಿಗ್ಗೆ ಕಂಡುಬಂತು. ನದಿ ಪಾತ್ರದ ಗ್ರಾಮದವರು ನದಿಯತ್ತ ತೆರಳದಂತೆ ಸೂಚನೆ ನೀಡಲಾಗಿದೆ.
ಹಂಪಾಪುರ ಸಮೀಪದ ಹೊಮ್ಮರಗಳ್ಳಿಯಿಂದ ಹುಲ್ಲಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯೂ ಮುಳುಗುವ ಸಾಧ್ಯತೆ ಇದೆ. ಈ ಸೇತುವೆ 2019ರಲ್ಲಿ ಮುಳುಗಡೆಯಾಗಿತ್ತು.
ನಂಜನಗೂಡು ತಾಲ್ಲೂಕಿನ ಮಲ್ಲನಮೂಲೆ ಬಳಿ ಮೈಸೂರು–ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಅಡಿಗಳಷ್ಟು ನೀರು ಹರಿದುಬಂದಿದೆ. ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದೇಬೂರು ಪಂಪ್‌ಹೌಸ್ ಮುಳುಗಡೆಯಾಗಿದ್ದು, ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಶ್ರೀಕಂಠೇಶ್ವರ ದೇವಸ್ಥಾನದ ಎದುರು, ಕಪಿಲ ನದಿಯ ಸ್ನಾನಘಟ್ಟದಲ್ಲಿನ ಪೂಜಾ ಸಾಮಗ್ರಿ ಮಾರಾಟದ ಪೆಟ್ಟಿಗೆ ಅಂಗಡಿಗಳು ಭಾಗಶಃ ಮುಳುಗಿವೆ. ಮುಡಿಕಟ್ಟೆ, ಸಾರ್ವಜನಿಕ ಶೌಚಾಲಯಗಳಿಗೆ ನೀರು ನುಗ್ಗಿದೆ. ಪರಶುರಾಮ ಗುಡಿಯೂ ಭಾಗಶಃ ಮುಳುಗಿದೆ. ಸಮೀಪದ ಹದಿನಾರುಕಾಲು ಮಂಟಪ ಬಹುತೇಕ ಮುಳುಗಡೆಯಾಗಿದೆ. ನದಿ ಪಾತ್ರದಲ್ಲಿರುವ ಐದು ಸ್ಮಶಾನಗಳು ಜಲಾವೃತವಾಗಿವೆ. ಅಲ್ಲಿ ಈಗ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ.
ನಂಜನಗೂಡು ತಾಲ್ಲೂಕಿನ ಸುತ್ತೂರು ಬಳಿ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದೆ.
ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದಲ್ಲಿ ನಿರಂತರ ಮಳೆಯಿಂದ ಮಲ್ಲಿಕಾರ್ಜುನ ಎಂಬುವರ ವಾಸದ ಮನೆ ಗೋಡೆಯು ಗುರುವಾರ ಮುಂಜಾನೆ ಕುಸಿದು ಬಿದ್ದಿದ್ದು, ಪಕ್ಕದಲ್ಲಿ ಕಟ್ಟಿ ಹಾಕಿದ್ದ ಒಂದು ವರ್ಷದ ಕರು ಮೃತಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.