ADVERTISEMENT

ಮೈಸೂರು | ಕೃಷಿ ತಾಂತ್ರಿಕತೆಯ ಅನಾವರಣ

ಜೆ.ಕೆ. ಮೈದಾನದಲ್ಲಿ ಮೂರು ದಿನಗಳ ರೈತ ದಸರಾಕ್ಕೆ ಸಿದ್ಧತೆ

ಆರ್.ಜಿತೇಂದ್ರ
Published 10 ಸೆಪ್ಟೆಂಬರ್ 2025, 4:42 IST
Last Updated 10 ಸೆಪ್ಟೆಂಬರ್ 2025, 4:42 IST
ಕಳೆದ ಬಾರಿಯ ರೈತ ದಸರಾ ಪ್ರದರ್ಶನದಲ್ಲಿ ಗಮನ ಸೆಳೆದ ಗಿರ್‌ ತಳಿಯ ಹೋರಿ
ಕಳೆದ ಬಾರಿಯ ರೈತ ದಸರಾ ಪ್ರದರ್ಶನದಲ್ಲಿ ಗಮನ ಸೆಳೆದ ಗಿರ್‌ ತಳಿಯ ಹೋರಿ   

ಮೈಸೂರು: ಸಮಗ್ರ ಕೃಷಿ ಹಾಗೂ ಯಾಂತ್ರಿಕತೆಯ ಉತ್ತೇಜನ, ಕೃಷಿ ಕಾರ್ಮಿಕರ ಕೊರತೆಗೆ ಪರಿಹಾರದ ಬಗ್ಗೆ ಬೆಳಕು ಚೆಲ್ಲುವ ಆಶಯದೊಂದಿಗೆ ಈ ಬಾರಿ ರೈತ ದಸರಾ ಆಯೋಜನೆಗೆ ಸಿದ್ಧತೆ ನಡೆದಿದೆ.

ಪ್ರತಿ ವರ್ಷ ದಸರಾ ಮಹೋತ್ಸವದ ಸಂದರ್ಭದಲ್ಲೇ ರೈತ ದಸರಾ ಆಯೋಜನೆಯ ಮೂಲಕ ಅನ್ನದಾತರನ್ನೂ ಸಾಂಸ್ಕೃತಿಕ ಹಬ್ಬಕ್ಕೆ ಆಹ್ವಾನಿಸುವ ಪರಿಪಾಠ ಬೆಳೆದುಬಂದಿದೆ. ಅಂತೆಯೇ ಈ ವರ್ಷ ಸೆ. 26ರಿಂದ 28ರವರೆಗೆ ರೈತ ದಸರಾ ನಡೆಯಲಿದೆ. ಜೆ.ಕೆ. ಮೈದಾನದಲ್ಲಿ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ರೈತ ದಸರಾ ಉಪ ಸಮಿತಿಯು ಯೋಜನೆ ರೂಪಿಸಿದೆ.

ಏನೇನು ಇರಲಿವೆ?: ಕೃಷಿ ಯಾಂತ್ರಿಕತೆ ಹಾಗೂ ವೈಜ್ಞಾನಿಕ ಪದ್ಧತಿಗಳ ಪರಿಚಯ, ಉಪ ಕಸುಬುಗಳ ಉತ್ತೇಜನದ ಆಶಯದೊಂದಿಗೆ ನಡೆಯುವ ವಸ್ತುಪ್ರದರ್ಶನವು ರೈತ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಬಾರಿಯೂ ವಸ್ತು ಪ್ರದರ್ಶನದಲ್ಲಿ ಸುಧಾರಿತ, ಹೈಟೆಕ್ ಯಂತ್ರೋಪಕರಣಗಳ ಪರಿಚಯ ಇರಲಿದೆ.

ADVERTISEMENT

ಈಚಿನ ದಿನಗಳಲ್ಲಿ ಕೃಷಿ ಕಾರ್ಯಕ್ಕೆ ಕಾರ್ಮಿಕರ ಕೊರತೆ ಎದುರಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಕೃಷಿಯಲ್ಲಿ ಯಂತ್ರಗಳ ಬಳಕೆಯನ್ನು ಹೆಚ್ಚಿಸಲು ಪೂರಕವಾಗಿ ಪ್ರದರ್ಶನದಲ್ಲಿ ವಿವಿಧ ಮಾದರಿ ಯಂತ್ರಗಳನ್ನು ಇಡಲಾಗುತ್ತಿದೆ. ಉಳುಮೆಯಿಂದ ಹಿಡಿದು ಕೊಯ್ಲಿನವರೆಗೆ ಬಳಸುವ ಯಂತ್ರಗಳ ಬೆಲೆ–ಬಳಕೆ ವಿಧಾನ ಹಾಗೂ ಪ್ರಯೋಜನಗಳ ಕುರಿತು ಮಾಹಿತಿ ಸಿಗಲಿದೆ. ಕಬ್ಬು ನಾಟಿ–ಕೊಯ್ಲು ಯಂತ್ರ, ಭತ್ತ–ರಾಗಿ ಸೇರಿದಂತೆ ವಿವಿಧ ಕೃಷಿ ಬೆಳೆಗಳ ಕೊಯ್ಲು, ಒಕ್ಕಣೆ ಯಂತ್ರಗಳು ಇರಲಿವೆ.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಸೇರಿದಂತೆ ಕೃಷಿ ಸಂಬಂಧಿತ ಇಲಾಖೆಗಳಿಂದ ದೊರೆಯುವ ಸವಲತ್ತುಗಳು, ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳ ಈಚಿನ ಸಂಶೋಧನೆಗಳ ಕುರಿತು ರೈತರಿಗೆ ಮಾಹಿತಿ ಸಿಗಲಿದೆ. ಹೈನುಗಾರಿಕೆ, ಮೀನು, ಕುರಿ, ಕೋಳಿ ಸಾಕಾಣಿಕೆ ಜೊತೆಗೆ ಮುತ್ತು ಬೆಳೆಯುವಂತಹ ಅಪರೂಪದ ಉಪಕಸುಬುಗಳ ಅರಿವು ಸಿಗಲಿದೆ. ವಿಶೇಷವಾಗಿ ಮೀನು ಸಾಕಣೆ ಬಗ್ಗೆ ಪ್ರತ್ಯೇಕ ಪ್ರದರ್ಶನ ಇರಲಿದೆ.

ಏನೇನು ಕಾರ್ಯಕ್ರಮ: ಮೊದಲ ದಿನವಾದ ಸೆ. 26ರಂದು ಉದ್ಘಾಟನೆಗೂ ಮುನ್ನ ಅರಮನೆ ಹೊರ ಆವರಣದಿಂದ ಜೆ.ಕೆ. ಮೈದಾನದವರೆಗೆ ರೈತ ಮೆರವಣಿಗೆ ನಡೆಯಲಿದೆ. ಯಂತ್ರೋಪಕರಣಗಳ ಜೊತೆಗೆ ಅಪರೂಪದ, ದೇಶಿ ತಳಿಯ ಜಾನುವಾರುಗಳು, ಕುರಿ–ಮೇಕೆಗಳೂ ಹೆಜ್ಜೆ ಹಾಕಲಿವೆ. ಜೊತೆಗೆ ಕಲಾ ತಂಡಗಳೂ ಸಾಥ್‌ ನೀಡಲಿವೆ.

ಸೆ. 27ರಂದು ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ನಡೆಯದೆ. ಶ್ವಾನಪ್ರಿಯರಿಗಾಗಿ ಈ ಬಾರಿಯೂ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿದೆ. ಸೆ.28 ರಂದು ಈ ಪ್ರದರ್ಶನ ಇರಲಿದೆ. ಇದರೊಟ್ಟಿಗೆ ಮಾದರಿ ಕೃಷಿಕರಿಗೆ ಸನ್ಮಾನ, ಅವರಿಂದ ವಿಚಾರ ವಿನಿಮಯ, ತಜ್ಞರಿಂದ ಉಪನ್ಯಾಸಗಳೂ ಇರಲಿವೆ. 

ಮೊದಲ ದಿನ ಮೆರವಣಿಗೆ ಸಂಭ್ರಮ ಜಾನುವಾರು–ಶ್ವಾನ ಪ್ರದರ್ಶನ ಆಯೋಜನೆ ಕೃಷಿ ತಾಂತ್ರಿಕತೆಯ ಸಮಗ್ರ ಮಾಹಿತಿ

ಮೂರು ದಿನಗಳ ರೈತ ದಸರಾದಲ್ಲಿ ಕೃಷಿ ಸಂಬಂಧಿ ತಾಂತ್ರಿಕತೆಯ ಪರಿಚಯ ಆಗಲಿದ್ದು ಉಪ ಕಸುಬುಗಳ ಬಗ್ಗೆ ಮಾಹಿತಿ ಸಿಗಲಿದೆ. ರೈತರ ಅನುಕೂಲಕ್ಕಾಗಿ ವಸ್ತು ಪ್ರದರ್ಶನ ಪ್ರಾಣಿಪ್ರಿಯರಿಗಾಗಿ ಜಾನುವಾರು– ಶ್ವಾನ ಪ್ರದರ್ಶನ ಕೂಡ ಇರಲಿದೆ
ಕೆ.ಎಚ್.ರವಿ ಕಾರ್ಯಾಧ್ಯಕ್ಷ ರೈತ ದಸರಾ ಉಪ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.