ADVERTISEMENT

ಮೈಸೂರು | ರಸ್ತೆಗಾಗಿ ರಾಜಕಾಲುವೆ ಮುಚ್ಚಿದರು!

ಮೋಹನ್ ಕುಮಾರ ಸಿ.
Published 23 ನವೆಂಬರ್ 2023, 5:48 IST
Last Updated 23 ನವೆಂಬರ್ 2023, 5:48 IST
ಪೂರ್ಣಯ್ಯ ನಾಲೆಯನ್ನು ಕಟ್ಟಡ ತ್ಯಾಜ್ಯದಿಂದ ಮುಚ್ಚಲಾಗಿದೆ. ಪಕ್ಕದಲ್ಲಿಯೇ ರಸ್ತೆಯೂ ಇದೆ
ಪೂರ್ಣಯ್ಯ ನಾಲೆಯನ್ನು ಕಟ್ಟಡ ತ್ಯಾಜ್ಯದಿಂದ ಮುಚ್ಚಲಾಗಿದೆ. ಪಕ್ಕದಲ್ಲಿಯೇ ರಸ್ತೆಯೂ ಇದೆ   

ಮೈಸೂರು: ಬೋಗಾದಿಯ ರೈಲ್ವೆ ಹಾಗೂ ಎಸ್‌ಬಿಎಂ ಬಡಾವಣೆ ಮಧ್ಯದಲ್ಲಿ ಹಾದುಹೋಗಿರುವ ರಸ್ತೆಗಾಗಿ ಪೂರ್ಣಯ್ಯ ನಾಲೆ (ರಾಜಕಾಲುವೆ) ಮುಚ್ಚಿ ಅದರ ಅಸ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆದಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ವ್ಯಾಪ್ತಿಯ ಈ ಬಡಾವಣೆಗಳಲ್ಲಿ ಅಭಿವೃದ್ಧಿ ಕೆಲಸ ವಾರದಿಂದಲೂ ನಡೆಯುತ್ತಿದೆ. ಮೊದಲೇ ಸುರಿಯಲಾಗಿದ್ದ ಕಟ್ಟಡ ತ್ಯಾಜ್ಯವನ್ನು ಬಳಸಿ ನಾಲೆಯನ್ನು ಮುಚ್ಚಲಾಗಿದೆ. ಇದಕ್ಕೆ ಪರಿಸರ ಪ್ರಿಯರು ಹಾಗೂ ಬಡಾವಣೆ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ.

ಪಾರಂಪರಿಕ ನಗರಿಯ ಹಸಿರುಕ್ಕಿಸುವ ‘ಜಲನಿಧಿ’ಯಾಗಿರುವ ಕುಕ್ಕರಹಳ್ಳಿ ಕೆರೆಗೆ ನೀರು ಪೂರೈಸಲು ಪೂರ್ಣಯ್ಯ ನಾಲೆ ಶತಮಾನದಿಂದಲೂ ಅಸ್ತಿತ್ವದಲ್ಲಿತ್ತು. 20 ಕಿ.ಮೀ ಉದ್ದದ ನಾಲೆ ಇದೀಗ ಕೆಲವೇ ಕಿ.ಮೀ.ಗೆ ಸೀಮಿತವಾಗಿದೆ. ಬಹುತೇಕ ಭಾಗವು ಒತ್ತುವರಿಯಾಗಿದ್ದು, ಅದನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತವು ಕಳೆದ 3 ದಶಕಗಳಿಂದಲೂ ಇಚ್ಛಾಶಕ್ತಿಯನ್ನು ಪ್ರದರ್ಶಿಸಿಲ್ಲ ಎನ್ನುವುದು ಪ್ರಜ್ಞಾವಂತರ ದೂರಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಯ ಪ್ರತಿನಿಧಿಗೆ ನಾಲೆಯನ್ನು ಮುಚ್ಚುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು.

ADVERTISEMENT

ಕಾಲುವೆ ಮಾಯ

‘ಬಡಾವಣೆಗಳ ಮಧ್ಯದಲ್ಲಿರುವ ಪೂರ್ಣಯ್ಯ ನಾಲೆ ಒತ್ತುವರಿಯನ್ನು ಹೋರಾಟದ ಪರಿಣಾಮ 2017ರಲ್ಲಿ ತೆರವಿಗೆ ಕ್ರಮ ವಹಿಸಲಾಗಿತ್ತು. ಆದರೆ, ಕಟ್ಟಡ ತ್ಯಾಜ್ಯ ಸುರಿಯುವುದು ಮುಂದುವರಿದಿತ್ತು. ವಾರದ ಹಿಂದಷ್ಟೇ ನಾಲೆಯ ಅಳಿದುಳಿದ ಭಾಗವನ್ನು ಮುಚ್ಚಿ ರಸ್ತೆ ಮಾಡಲಾಗಿದೆ’ ಎಂದು ರೈಲ್ವೆ ಬಡಾವಣೆ ನಿವಾಸಿ ಜ್ಞಾನಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಲೆಯ ಒತ್ತುವರಿಯನ್ನು ಹಿಂದೆ ಬೇರೆಯವರು ಮಾಡುತ್ತಿದ್ದರು. ಇದೀಗ ಮುಡಾದವರೇ ರಸ್ತೆಗಾಗಿ ಕಾಲುವೆ ಮುಚ್ಚಿದ್ದಾರೆ.
ಹರೀಶ್‌, ರೈಲ್ವೆ ಬಡಾವಣೆ ನಿವಾಸಿ

‘ಮುಡಾದಿಂದ ಬಡವರಿಗೆ ನೀಡಿರುವ ಮನೆಯಲ್ಲಿ 20 ವರ್ಷದಿಂದ ಲಿಂಗರಾಜಕಟ್ಟೆಯಲ್ಲಿದ್ದೇವೆ. ಇಲ್ಲಿಗೆ ಬಂದಾಗ ಕಾಡಿನ ಪ್ರದೇಶವಾಗಿತ್ತು. ನಾಲೆಯಲ್ಲಿ ನೀರು ಹರಿಯುತ್ತಿತ್ತು. ನಮ್ಮ ಮನೆ ಹಾಗೂ ಇತರ ಕೆಲಸಗಳಿಗೆ ನೀರನ್ನು ಇಲ್ಲಿಂದಲೇ ತರುತ್ತಿದ್ದೆವು. ಇದೀಗ ನಾಲೆಯನ್ನೇ ಮುಚ್ಚಿ ರಸ್ತೆ ಮಾಡಿದ್ದಾರೆ’ ಎಂದು ಅಲ್ಲಿನ ನಿವಾಸಿ ಸಿದ್ದಮ್ಮ ಹೇಳಿದರು.

‘ನಾಲೆಯ ಕಾಲುದಾರಿಯಲ್ಲೇ ಟಿ.ಕೆ.ಬಡಾವಣೆಯ ಮಾರುತಿ ಟೆಂಟ್‌ ಸಮೀಪದ ಪಡಿತರ ಅಕ್ಕಿ ತರಲು ಹೋಗುತ್ತಿದ್ದೆವು. ಹತ್ತು ವರ್ಷದಿಂದೀಚೆಗೆ ಬಡಾವಣೆಗಳು ನಿರ್ಮಾಣವಾದವು. ಕಟ್ಟಡದ ಇಟ್ಟಿಗೆ, ಕಸ, ಮಣ್ಣು ಸುರಿಯುತ್ತಿದ್ದರು. ನಾವು ಇಲ್ಲಿ ಬಂದಾಗ ಕಾಡು ರಸ್ತೆಯಾಗಿತ್ತು. ಮೊದಲು ಚರಂಡಿ ನಿರ್ಮಿಸಿದರು. ಇದೀಗ ಅದರ ಪಕ್ಕ ರಸ್ತೆಯನ್ನು ಮಾಡಿದ್ದಾರೆ’ ಎಂದರು. 

ಕೊನೆಯ ಅವಕಾಶ

‘ಕೆರೆ ಹಾಗೂ ನಾಲೆಯ ರಕ್ಷಣೆಗೆ 1994ರಿಂದಲೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತಿದ್ದು, ರಕ್ಷಣೆಯ ಭರವಸೆಯನ್ನು ನೀಡುತ್ತಿದೆ. ಆದರೆ, ಯಾವುದೇ ಕ್ರಮ ವಹಿಸುತ್ತಿಲ್ಲ. ಅದರಿಂದ ಒತ್ತುವರಿ ಮುಂದುವರಿದಿದೆ. ಕುಕ್ಕರಹಳ್ಳಿ ಕೆರೆಯ ರಕ್ಷಣೆಗೆ ಇರುವ ಕೊನೆಯ ಅವಕಾಶವಿದು’ ಎಂದು ಪರಿಸರ ತಜ್ಞ ಯು.ಎನ್‌.ರವಿಕುಮಾರ್‌ ಪ್ರತಿಕ್ರಿಯಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಹಾಗೂ ಮುಡಾ ಆಯುಕ್ತರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

‘ರಕ್ಷಣೆಗೆ ಮತ್ತೆ ಮನವಿ’

‘ಪ್ರತಿ ಜಿಲ್ಲಾಧಿಕಾರಿ ಬಂದಾಗಲೂ ನಾಲೆ ರಕ್ಷಣೆಗೆ ಅರ್ಜಿ ಸಲ್ಲಿಸಲಾಗುತ್ತದೆ. ಜಿಲ್ಲಾಧಿಕಾರಿ ಸಮೀಕ್ಷಾ ವರದಿ ತಯಾರಿಸಲು ಸಮಿತಿ ರಚಿಸುತ್ತಾರೆ. ನಿರ್ಧಾರ ಕೈಗೊಳ್ಳುವ ಮೊದಲೇ ಆ ಸ್ಥಾನದಿಂದ ತೆರವಾಗಿರುತ್ತಾರೆ. 3 ದಿನದ ಹಿಂದಷ್ಟೇ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ’ ಎಂದು ಪರಿಸರ ತಜ್ಞ ಯು.ಎನ್‌.ರವಿಕುಮಾರ್‌ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಕುಕ್ಕರಹಳ್ಳಿ ಕೆರೆಗೆ ನೀರು ಪೂರೈಸುವ ಪೂರ್ಣಯ್ಯ ನಾಲೆಯನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ. ನಾಗರಿಕರು ನಾಲೆಯ ರಕ್ಷಣೆಗೆ 3 ದಶಕದಿಂದ ಹೋರಾಟ ನಡೆಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮವನ್ನು ಇದುವರೆಗೂ ತೆಗೆದುಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಇದೀಗ 20 ಕಿ.ಮೀಯಿಂದ 2.5 ಕಿ.ಮೀಗೆ ಕುಗ್ಗಿರುವ ಪೂರ್ಣಯ್ಯ ನಾಲೆಯ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಕೆರೆಗೆ ಶುದ್ಧ ನೀರು ಪೂರೈಕೆಯಾಗದೇ ಬಾನಾಡಿ ಜಲಚರಗಳಿಗೆ ತೊಂದರೆಯಾಗಲಿದೆ. ಕೆರೆಯ ಅಸ್ತಿತ್ವಕ್ವೇ ಇಲ್ಲವಾಗಲಿದೆ’ ಎಂಬ ಕಳವಳ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.