ADVERTISEMENT

ರಾಮನ ದುರುಪಯೋಗ ನಡೆಯುತ್ತಿದೆ– ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 15:26 IST
Last Updated 16 ಸೆಪ್ಟೆಂಬರ್ 2019, 15:26 IST
 ಗ್ರಾಮ ಸೇವಾ ಸಂಘವು ಶ್ರೀರಂಗ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ‘ರಾಮಾಯಣ ಒಂದು ಪುನರಾವಲೋಕನ‘ ಉಪನ್ಯಾಸ ಮತ್ತು ಸಂವಾದದಲ್ಲಿ ರಂಗಕರ್ಮಿ ಪ್ರಸನ್ನ ಮಾತನಾಡಿದರು.
ಗ್ರಾಮ ಸೇವಾ ಸಂಘವು ಶ್ರೀರಂಗ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ‘ರಾಮಾಯಣ ಒಂದು ಪುನರಾವಲೋಕನ‘ ಉಪನ್ಯಾಸ ಮತ್ತು ಸಂವಾದದಲ್ಲಿ ರಂಗಕರ್ಮಿ ಪ್ರಸನ್ನ ಮಾತನಾಡಿದರು.   

ಮೈಸೂರು: ರಾಮನ ದುರುಪ‍ಯೋಗ 1991ರಿಂದಲೂ ನಡೆಯುತ್ತಿದೆ ಎಂದು ರಂಗಕರ್ಮಿ ಪ್ರಸನ್ನ ತಿಳಿಸಿದರು.

ಗ್ರಾಮ ಸೇವಾ ಸಂಘವು ಇಲ್ಲಿನ ಶ್ರೀರಂಗ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ‘ರಾಮಾಯಣ ಒಂದು ಪುನರಾವಲೋಕನ‘ ಉಪನ್ಯಾಸ ಮತ್ತು ಸಂವಾದದಲ್ಲಿ ಅವರು ಮಾತನಾಡಿದರು.‌

‘ದೇಶದಲ್ಲಿ ಪುರಾತನವಾದ ರಾಮಮಂದಿರಗಳು ಇಲ್ಲ. ಜನಪದರು ರಾಮಾಯಣವನ್ನು ಓದುವ ಮೂಲಕ ರಾಮನನ್ನು ಪೂಜಿಸಿದರು. ರಾಮ ಎಂದರೆ ಒಂದು ಮಿತಿ ಇರುವ ವ್ಯಕ್ತಿ. ಈತ ಪ್ರಕೃತಿ ಜತೆ ನಡೆಸುವ ಸಹಬಾಳ್ವೆಯ ಬದುಕೇ ರಾಮಾಯಣ. ಆದರೆ, ಇಂತಹ ಸಹಬಾಳ್ವೆಯನ್ನು ಒಡೆಯುವ ಪ್ರತ್ಯೇಕತೆಯ ಪ್ರಯತ್ನವೇ ನಾನು ಮೂಲ ರಾಮಾಯಣ ಬರೆಯಲು ಕಾರಣ’ ಎಂದು ಅವರು ಹೇಳಿದರು.

ADVERTISEMENT

ಪ್ರತ್ಯೇಕತೆ ಇಂದು ಭಾಷೆಗಳಿಗೆ ತಟ್ಟಿದೆ. ಒಂದೇ ಭಾಷೆಯನ್ನು ರಾಷ್ಟ್ರಭಾಷೆ ಎಂದು ಕರೆದು ಪ್ರತ್ಯೇಕತೆಯ ಬೀಜ ಬಿತ್ತಲಾಗುತ್ತಿದೆ. ಇದರಿಂದ ಯಾರಿಗೂ ಲಾಭವಾಗುವುದಿಲ್ಲ. ಇಂಗ್ಲಿಷನ್ನು ತಡೆಯಲು ಹಿಂದಿಗೂ ಸಾಧ್ಯವಿಲ್ಲ. ಏಕಭಾಷೆ ಎನ್ನುವುದು ಏನಾದರೂ ಇದ್ದರೆ ಅದು ಇಂಗ್ಲಿಷ್ ಮಾತ್ರ. ಈಗಾಗಲೇ ಇದು ಹಳ್ಳಿ ಹಳ್ಳಿಗಳನ್ನೂ ತಲುಪಿದೆ ಎಂದು ವಿಶ್ಲೇಷಿಸಿದರು.

‘ದೇವರು ಎನ್ನುವ ಕಾರಣಕ್ಕೆ ನಾವು ಪ್ರತ್ಯೇಕತೆಯನ್ನು ಹಿಡಿದುಕೊಂಡು ಮುಳುಗುತ್ತಿದ್ದೇವೆ. ಒಳಗಿನ ಮತ್ತು ಹೊರಗಿನ ಪ್ರಕೃತಿಗೆ ಹತ್ತಿರವಾಗಿ ಬದುಕದಿದ್ದರೆ ನಾವು ಮೋದಿಯನ್ನು ಗೆಲ್ಲಲು ಸಾಧ್ಯವಿಲ್ಲ. ಮೋದಿ ತಾನು ಮಾಡಿದ ಪಾಪಗಳಿಂದ ಸೋತರೂ ಮತ್ತೊಬ್ಬ ಮೋದಿ ಬರುತ್ತಾನೆ. ನಮಗೆ ಗೆಲುವು ದಕ್ಕುವುದಿಲ್ಲ’ ಎಂದರು ಹೇಳಿದರು.

ರಾಮಾಯಣದಲ್ಲಿ ರಾಮ ದೇವರಲ್ಲ. ರಾಮ ಶಿವನನ್ನು ಪೂಜಿಸುತ್ತಾನೆ. ಶಿವ ಎಂದರೆ ಯೋನಿ ಮತ್ತು ಲಿಂಗದ ಮಿಲನದ ರೂಪಕ. ಇಂತಹ ಪವಿತ್ರ ಮಹಾಕಾವ್ಯ ಹೊಂದಿರುವ ನಾವು ದೇಶದ ಪಾವಿತ್ರ್ಯತೆಯನ್ನು ಪ್ರತ್ಯೇಕತೆಯ ಹೆಸರಿನಲ್ಲಿ ಹಾಳು ಮಾಡುವುದು ಬೇಡ ಎಂದು ಮನವಿ ಮಾಡಿದರು.‌

ರಾಮನ ಹೆಸರು ಹೇಳುವುದಕ್ಕೆ ವಿಚಾರವಾದಿಗಳು ಮುಜುಗರ ಪಡಬಾರದು. ರಾಮನ ಹೆಸರು ಹೇಳುವುದರಿಂದ ಸಮಾಜವಾದವೇನೂ ಹಾಳಾಗುವುದಿಲ್ಲ. ರಾಮನನ್ನು ಪ್ರೀತಿಯಿಂದ ಅರ್ಥಮಾಡಿಕೊಂಡು ಪ್ರತಿಕ್ರಿಯಿಸಬೇಕು. ರಾಮಾಯಣದಷ್ಟು ತಾತ್ವಿಕ ಪ್ರಖರತೆಯ ಮಹಾಕಾವ್ಯ ವಿಶ್ವದಲ್ಲಿ ಮತ್ತೊಂದು ಇಲ್ಲ. ಆರ್‌ಎಸ್‌ಎಸ್‌ ಆದಿಯಾಗಿ ಎಲ್ಲರೂ ಏಕತೆಯ ರೂಪವನ್ನು ಎಲ್ಲ ಧರ್ಮಗ್ರಂಥಗಳಲ್ಲೂ ಕಾಣಬೇಕು ಎಂದು ತಿಳಿಸಿದರು.‌

ಉಡುಪಿಯ ಮಠಗಳಲ್ಲಿ ‘ಮೂಲರಾಮೋ ವಿಜಯತೇ’ ಎಂಬ ಬರಹ ಇದೆ. ಆದರೆ, ಎಲ್ಲ ಮಠಗಳೂ ಕೋಪಿಷ್ಠ ಹನುಮನನ್ನು ಸಂಭ್ರಮಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.