ADVERTISEMENT

ಉದಯವಾಯಿತು ರಮಾಗೋವಿಂದ ರಂಗಮಂದಿರ

ನೂರಾರು ರಂಗಾಸಕ್ತರು ಕಾರ್ಯ‌ಕ್ರಮದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 7:23 IST
Last Updated 9 ನವೆಂಬರ್ 2020, 7:23 IST
ಮೈಸೂರಿನ ನೃಪತುಂಗ ಕನ್ನಡ ಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಡಿ.ರಮಾಬಾಯಿ ಚಾರಿಟಬಲ್ ಫೌಂಡೇಷನ್ನಿನ ಎಂ.ಜಗನ್ನಾಥ ಶೆಣೈ ಅವರು ಕನ್ನಡ ವಿಕಾಸ ವಿದ್ಯಾಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್ ಅವರಿಗೆ ದೀಪವನ್ನು ನೀಡುವ ಮೂಲಕ ರಮಾಗೋವಿಂದ ರಂಗಮಂದಿರವನ್ನು ಹಸ್ತಾಂತರಿಸಿದರು
ಮೈಸೂರಿನ ನೃಪತುಂಗ ಕನ್ನಡ ಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಡಿ.ರಮಾಬಾಯಿ ಚಾರಿಟಬಲ್ ಫೌಂಡೇಷನ್ನಿನ ಎಂ.ಜಗನ್ನಾಥ ಶೆಣೈ ಅವರು ಕನ್ನಡ ವಿಕಾಸ ವಿದ್ಯಾಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್ ಅವರಿಗೆ ದೀಪವನ್ನು ನೀಡುವ ಮೂಲಕ ರಮಾಗೋವಿಂದ ರಂಗಮಂದಿರವನ್ನು ಹಸ್ತಾಂತರಿಸಿದರು   

ಮೈಸೂರು: ದೀಪಗಳು ಹೊತ್ತುತ್ತಿದ್ದಂತೆ ನಗರದ ರಂಗಮಂದಿರಗಳ ಸಾಲಿಗೆ ಹೊಸದೊಂದು ರಂಗಮಂದಿರ ಸೇರ್ಪಡೆಗೊಂಡಿತು. ಆ ದೀಪವನ್ನು ಉದ್ಯಮಿ ಎಂ.ಜಗನ್ನಾಥ ಶೆಣೈ ಕನ್ನಡ ವಿಕಾಸ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಾರಿಟಬಲ್ ಸಂಸ್ಥೆಯ ಮುಖ್ಯಸ್ಥ ಪ.ಮಲ್ಲೇಶ್ ಅವರಿಗೆ ನೀಡುವ ಮೂಲಕ ರಂಗಮಂದಿರವನ್ನು ಹಸ್ತಾಂತರಿಸಿದರು.

ನೃಪತುಂಗ ಕನ್ನಡ ಶಾಲೆಯ ಆವರಣದಲ್ಲಿ ಭಾನುವಾರ ಇಳಿಸಂಜೆಯಲ್ಲಿ ನಡೆದ ಡಿ.ರಮಾಬಾಯಿ ಚಾರಿಟಬಲ್ ಫೌಂಡೇಷನ್ ಹಾಗೂ ಎಂ.ಗೋಪಿನಾಥ್ ಶೆಣೈ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ರಮಾಗೋವಿಂದ ರಂಗಮಂದಿರದ ಹಸ್ತಾಂತರ ಕಾರ್ಯಕ್ರಮವು ನೂರಾರು ರಂಗಾಸಕ್ತರನ್ನು ಕೈಬೀಸಿ ಕರೆಯಿತು.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ರಂಗಕರ್ಮಿಗಳಾದ ರಾಜರಾಂ, ಮೈಸೂರು ರಮಾನಂದ್, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಬಿ.ಶಿವಪ್ಪ, ಸಾಹಿತಿ ಕಾಳೇಗೌಡ ನಾಗವಾರ, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಹಲವು ಮಂದಿ ಇದಕ್ಕೆ ಸಾಕ್ಷಿಯಾದರು.

ADVERTISEMENT

ಈ ವೇಳೆ ಮಾತನಾಡಿದ ಜಗನ್ನಾಥ ಶೆಣೈ, ‘ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರದ ಮುಂದಿನ ಹೆಜ್ಜೆಯೇ ರಮಾಗೋವಿಂದ ರಂಗಮಂದಿರ. ಮೈಸೂರಿನ 4 ದಿಕ್ಕುಗಳಲ್ಲೂ ರಂಗಮಂದಿರಗಳು ನಿರ್ಮಾಣವಾಗಬೇಕು’ ಎಂದು ಕರೆ ನೀಡಿದರು.

ಪ.ಮಲ್ಲೇಶ್ ಮಾತನಾಡಿ, ‘ಕನ್ನಡ ಭಾಷೆ ಶಾಶ್ವತವಾಗಬೇಕಾದರೆ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇರಬೇಕು. ಅದಕ್ಕಾಗಿಯೇ ಇಂತಹದ್ದೊಂದು ರಂಗಮಂದಿರ ನಿರ್ಮಿಸಲಾಗಿದೆ’ ಎಂದು ಹೇಳಿದರು.

ರಂಗಕರ್ಮಿ ಬಿ.ವಿ.ರಾಜರಾಂ ಮಾತನಾಡಿ, ‘ಬೆಂಗಳೂರಿನ ‘ರಂಗಶಂಕರ’ದಷ್ಟೇ ಸುಸಜ್ಜಿತವಾದ ರಂಗಮಂದಿರ ಇದಾಗಿದೆ. ‘ಮುಖ್ಯಮಂತ್ರಿ’ ನಾಟಕದ ಪ್ರಯೋಗವನ್ನು ಇಲ್ಲಿಯೂ ನೀಡುತ್ತೇನೆ’ ಎಂದರು.

ಬೆಂಗಳೂರಿನ ‘ಸ್ಟೆಮ್ ಡ್ಯಾನ್ಸ್ ಕಂಪ್ನಿ’ ತಂಡದವರಿಂದ ಪಾರಂಪರಿಕ ಮತ್ತು ಸಮಾಕಾಲೀನ ನೃತ್ಯ ಪ್ರದರ್ಶನ ನೋಡುಗರ ಮನಗೆದ್ದಿತು.

ಬಿ.ವಿ.ಕಾರಂತ ಪ್ರತಿಷ್ಠಾನದ ಅಧ್ಯಕ್ಷ ಜಯರಾಮ ಪಾಟೀಲ್, ನಿರೂಪಕಿ ಅರ್ಪಣಾ, ಕನ್ನಡ ವಿಕಾಸ, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಸ.ರ.ಸುದರ್ಶನ್, ಧರ್ಮದರ್ಶಿ ಶೈಲಜಾ, ಸಹ ಕಾರ್ಯದರ್ಶಿ ಶೀಲಾ, ಖಜಾಂಚಿ ನಾ.ನಾಗಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.