
ಮೈಸೂರು: ‘ರಾಮಕೃಷ್ಣ ಆಶ್ರಮವು ಗ್ರಾಮ ಕಲ್ಯಾಣಕ್ಕೆ ಶ್ರಮಿಸಿದೆ. ವಿವೇಕಾನಂದರ ಸಾಮಾಜಿಕ ನ್ಯಾಯ, ತಾರತಮ್ಯವಿಲ್ಲದ, ಎಲ್ಲರನ್ನೂ ಒಂದಾಗಿ ನೋಡಬೇಕೆಂಬ ತತ್ವವನ್ನು ಸೇವಾ ಕಾರ್ಯದ ಮೂಲಕ ಅನುಷ್ಠಾನಗೊಳಿಸಿದೆ’ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯ ಆವರಣದಲ್ಲಿ ನಾಲ್ಕು ದಿನಗಳ ‘ರಾಮಕೃಷ್ಣ ಆಶ್ರಮ: ಶತಮಾನೋತ್ಸವ ಸಂಭ್ರಮ–2025’ ಉದ್ಘಾಟಿಸಿ ಮಾತನಾಡಿದರು.
‘ಸ್ವಾಮಿ ವಿವೇಕಾನಂದರು ರೋಗಿಗಳು, ಬಡವರು, ಅಲಕ್ಷಿತ ಸಮುದಾಯದವರನ್ನು ದೇವೋಭವವೆಂದರು. ಪ್ರತಿ ಜೀವಿಯಲ್ಲೂ ದೇವರನ್ನು ಕಾಣಬೇಕೆಂದು ಸಾರಿದ ‘ದಿವ್ಯತ್ರಯ’ರಾದ ರಾಮಕೃಷ್ಣ ಪರಮಹಂಸ, ಶಾರದಾದೇವಿ ಹಾಗೂ ವಿವೇಕರ ತತ್ವಗಳನ್ನು ಆಶ್ರಮವು ಪಾಲಿಸುತ್ತಿದೆ’ ಎಂದರು.
‘ಸೇವಾಯಜ್ಞವೇ ಆಶ್ರಮದ ಮುಖ್ಯ ಆಶಯವಾಗಿದ್ದು ಶಿಕ್ಷಣವನ್ನು ನೀಡಿದೆ. ಇಲ್ಲಿ ಕಲಿತವರು ನಾಡನ್ನು ಕಟ್ಟಿದ್ದಾರೆ. ಕುವೆಂಪು ಅವರು ಎತ್ತರಕ್ಕೇರುವಲ್ಲಿ ಆಶ್ರಮದ ಪ್ರಭಾವವಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ್ದಲ್ಲದೇ ರಾಷ್ಟ್ರಕವಿಯೂ ಆಗಿದ್ದಾರೆ’ ಎಂದು ಹೇಳಿದರು.
‘ಸಮಾಜಕ್ಕೆ ನೆಮ್ಮದಿಯನ್ನು ಕೊಡದ ಸಂಸ್ಥೆಗಳಿಂದ ಏನೂ ಪ್ರಯೋಜನವಿಲ್ಲ. ಸರ್ವಜನಾಂಗದ ಶಾಂತಿಯ ತೋಟವೆಂದು ಹೇಳಿದ ಕವಿವಾಣಿಯನ್ನು ಆಶ್ರಮವು ಅನುಸರಿಸಿದೆ’ ಎಂದು ಹೇಳಿದ ಅವರು, ‘ಡಿಜಿಟಲ್ ಯುಗದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದು ಸವಾಲಾಗಿದೆ. ಇಂಥ ವೇಳೆ ಯುವ ಸಮುದಾಯದ ಉಜ್ವಲ ವ್ಯಕ್ತಿತ್ವ ನಿರ್ಮಾಣದಲ್ಲಿ ಆಶ್ರಮ ನಿರತವಾಗಿದೆ’ ಎಂದರು.
ಜ್ಞಾನ ದೀಕ್ಷೆ ನೀಡಿದರು: ‘ಬೇಲೂರು ಮಠದ ಅಧ್ಯಕ್ಷರಾದ ಗೌತಮಾನಂದ ಸ್ವಾಮೀಜಿ ಅವರನ್ನು ಹುಬ್ಬಳ್ಳಿಗೆ ರೈಲಿನಲ್ಲಿ ಹೋಗುವಾಗ ಭೇಟಿ ಮಾಡಿದ್ದೆ. 15 ನಿಮಿಷದಲ್ಲಿ ಅಧ್ಯಾತ್ಮ, ವೇದಾಂತ ಬಗ್ಗೆ ಹೇಳಿದರು. ಸಂಶಯಗಳನ್ನು ಬಗೆಹರಿಸಿ ಜ್ಞಾನ ದೀಕ್ಷೆ ನೀಡಿದ್ದರು. ಇಂದು ಆಶ್ರಮದ ಅತ್ಯುನ್ನತ ಜವಾಬ್ದಾರಿ ಅವರದ್ದಾಗಿರುವುದು ಕನ್ನಡಿಗರಿಗೆ ಗರ್ವ ತಂದಿದೆ’ ಎಂದು ಪಾಟೀಲ ನುಡಿದರು.
ಬಾರದ ಮುಖ್ಯಮಂತ್ರಿ: ಮೈಸೂರು ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬರಲಿಲ್ಲ. ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಉತ್ಸವವನ್ನು ಮುಖ್ಯಮಂತ್ರಿ ಅವರು ಉದ್ಘಾಟಿಸಬೇಕಿತ್ತು. ಮೆಕ್ಕೆಜೋಳ ಬೆಳೆದ ರೈತರ ಸಮಸ್ಯೆ ಕುರಿತು ಬೆಳಿಗ್ಗೆ ಸಭೆಯಿತ್ತು. ತಡವಾಗಿ ಹೋಗಬಾರದೆಂದು ಸರ್ಕಾರದ ಪರವಾಗಿ ನನ್ನನ್ನು ಕಳುಹಿಸಿದ್ದಾರೆ’ ಎಂದರು.
‘ಆಶ್ರಮದಲ್ಲಿ ಅಸ್ಪೃಶ್ಯರು, ಪೌರಕಾರ್ಮಿಕರ ಮಕ್ಕಳಿಗೂ ಕಡಿಮೆ ದರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ ಎಂಬುದು ಹುಲಿಯ ಹಾಲು ಕುಡಿದಂತೆ. ಸೇವಿಸಿದವರು ಘರ್ಜಿಸಲೇ ಬೇಕು. ಆಶ್ರಮವು ನೂರು ವರ್ಷದಿಂದ ಮಾಡುತ್ತಿರುವ ಸೇವಾ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.
ಆಶ್ರಮ ಹಾಗೂ ಅರಮನೆ ಇರುವ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು. ಪಶ್ಚಿಮ ಬಂಗಾಳದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಗೌತಮಾನಂದ ಮಹಾರಾಜ್, ಊಟಿ ಆಶ್ರಮದ ಅಧ್ಯಕ್ಷ ಸ್ವಾಮಿ ರಾಘವೇಶಾನಂದ, ಸ್ವಾಮಿ ಮುಕ್ತಿದಾನಂದ ಪಾಲ್ಗೊಂಡಿದ್ದರು.
ನಾಲ್ಕು ದಿನಗಳ ಉತ್ಸವ ನೂರಾರು ಭಕ್ತರು ಭಾಗಿ ಆಶ್ರಮದ ಸೇವೆ ಅನಾವರಣ
‘ವಿವೇಕರ ಮೈಸೂರು ಭೇಟಿ ಅನನ್ಯ’
‘ರಾಜ್ಯದ ಬೆಳಗಾವಿ ಮೈಸೂರು ಹಾಗೂ ಬೆಂಗಳೂರಿಗೆ ಸ್ವಾಮಿ ವಿವೇಕಾನಂದರು ಬಂದಿದ್ದರು. 1890ರಲ್ಲಿ ಮೈಸೂರಿನ ನಿರಂಜನ ಮಠದಲ್ಲಿ ತಂಗಿದ್ದರು. ಆ ಭೇಟಿ ಅನನ್ಯ’ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಹೇಳಿದರು. ‘ರಾಜರ ಸಹಾಯಧನದಿಂದ ಷಿಕಾಗೊ ಸಮ್ಮೇಳನಕ್ಕೆ ವಿವೇಕರು ತೆರಳಿದ್ದರು. ಅವರು ತಂಗಿದ್ದ ಪವಿತ್ರ ತಾಣವು ದಶಕದ ಸಾತ್ವಿಕ ಹೋರಾಟದಿಮದ ಆಶ್ರಮಕ್ಕೆ ದಕ್ಕಿದ್ದು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಹೇಳಿದರು. ‘ಧರ್ಮ ಎಂಬುದು ಗೊಡ್ಡು ಆಚರಣೆಯಲ್ಲ. ಸತ್ಯಶೋಧನೆಯಾಗಿದೆ. ಪ್ರತಿಯೊಬ್ಬರ ಆಂತರ್ಯದಲ್ಲಿ ದೈವತ್ವದ ಕಿಡಿಯಿದೆ. ಅದನ್ನು ಧರ್ಮ ಹುಡುಕಿಕೊಡುತ್ತದೆ’ ಎಂದರು.
ಪೌರಕಾರ್ಮಿಕರಿಗೆ ‘ನಾರಾಯಣ ಪೂಜೆ’
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೌರಕಾರ್ಮಿಕರಿಗೆ ‘ನಾರಾಯಣ ಪೂಜೆ’ ನಡೆಯಿತು. ನೆತ್ತಿಯ ಮೇಲೆ ಹೂ ಇರಿಸಿ ಹೊದಿಕೆ ಬಟ್ಟೆ ಹಾಗೂ ಅಗತ್ಯ ವಸ್ತುಗಳ ಕಿಟ್ ನೀಡಿ ಗೌರವಿಸಲಾಯಿತು. ನಂತರ ಮಾತನಾಡಿ ‘ಪೌರಕಾರ್ಮಿಕರು ಸಮಾಜದ ಹೊರಗನ್ನು ಸ್ವಚ್ಛ ಮಾಡುತ್ತ ಒಳಗಿನ ಮನಸ್ಸನ್ನು ತೊಳೆಯುವ ಕೆಲಸವನ್ನು ನೀವೇ ಮಾಡಬೇಕೆಂಬ ನಾರಾಯಣ ತತ್ವವನ್ನು ನಮ್ಮಲ್ಲೆರಿಗೆ ನಿತ್ಯ ಹೇಳುತ್ತಿದ್ದಾರೆ. ಸಮಾಜದಲ್ಲಿನ ಎಲ್ಲರನ್ನೂ ಗೌರವ ಭಾವದಿಂದ ನಾರಾಯಣನಂತೆ ಕಾಣುವುದೇ ಭಗವದ್ ಆರಾಧನೆ’ ಎಂದರು. ಶಾಸಕ ಜಿ.ಟಿ.ದೇವೇಗೌಡ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಕಲ್ಯಾಣ ಕೇಂದ್ರದ ಕಾರ್ಯದರ್ಶಿ ಎಚ್.ಸುದರ್ಶನ್ ಸ್ವಾಮಿ ಅಗರಾನಂದ ಸ್ವಾಮೀಜಿ ಸ್ವಾಮಿ ಅನುಪಮಾನಂದ ಸ್ವಾಮಿ ಬೋಧಸ್ವರೂಪಾನಂದ ಸಾಮಾಜಿಕ ಹೋರಾಟಗಾರ ಅರವಿಂದ ಶರ್ಮಾ ಡಿ.ನಾಗಭೂಷಣ ಪಾಲ್ಗೊಂಡಿದ್ದರು.
‘ಶತಮಾನ ಸೌರಭ’ ಬಿಡುಗಡೆ
ಆಶ್ರಮದ ಶತಮಾನೋತ್ಸವ ಸ್ಮರಣ ಸಂಚಿಕೆ ‘ಶತಮಾನ ಸೌರಭ’ ಹಾಗೂ ‘ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರು’ ‘ಮೈಸೂರು ರಾಮಕೃಷ್ಣ ಆಶ್ರಮ ಇತಿಹಾಸ’ ಕೃತಿಗಳನ್ನು ವೆಂಕಟಾಪುರದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಅಮೂರ್ತಾನಂದ ಬಿಡುಗಡೆ ಮಾಡಿದರು. ನಂತರ ಮಾತನಾಡಿ ‘ಮೈಸೂರಿನ ಆಶ್ರಮವು ದಿವ್ಯತ್ರಯರ ಸಾಹಿತ್ಯವನ್ನು ಗಂಗಾನದಿಯಂತೆ ಎಲ್ಲೆಡೆ ಹರಿಸಿದೆ. ನಗರದ ಬಡಾವಣೆಗಳಿಗೆ ಇವರ ಹೆಸರನ್ನು ಇರಿಸಿರುವುದು ಸ್ಮರಣೀಯವಾಗಿದೆ’ ಎಂದರು. ಸ್ವಾಮಿ ಸತ್ಯಜ್ಞಾನಾನಂದಜಿ ಸ್ವಾಮಿ ಆತ್ಮವಿದಾನಂದಜಿ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಸಿ.ಕಿಶೋರ್‌ಚಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.