ADVERTISEMENT

ಮೈಸೂರು: ನಗರದಲ್ಲಿ ಸರಳ ರಾಮನವಮಿ ಆಚರಣೆ

ರಾಮನ ವೇಷ ಧರಿಸಿ ಮಾಸ್ಕ್ ವಿತರಿಸಿ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 5:19 IST
Last Updated 22 ಏಪ್ರಿಲ್ 2021, 5:19 IST
ಮೈಸೂರಿನಲ್ಲಿ ರಾಮನವಮಿ ಅಂಗವಾಗಿ ಬುಧವಾರ ಮೈಸೂರು ಯುವ ಬಳಗದ ವತಿಯಿಂದ ನಾರಾಯಣ ಶಾಸ್ತ್ರಿಯಲ್ಲಿ ಕಲಾವಿದ ಸುತ್ತೂರಿನ ಹೊಸಕೋಟೆ ಶಿವಮಲ್ಲು ಅವರು ರಾಮನ ವೇಷ ಧರಿಸಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ಹಾಕುವ ಮೂಲಕ ಕೋವಿಡ್ ಕುರಿತು ಜಾಗೃತಿ ಮೂಡಿಸಿದರು
ಮೈಸೂರಿನಲ್ಲಿ ರಾಮನವಮಿ ಅಂಗವಾಗಿ ಬುಧವಾರ ಮೈಸೂರು ಯುವ ಬಳಗದ ವತಿಯಿಂದ ನಾರಾಯಣ ಶಾಸ್ತ್ರಿಯಲ್ಲಿ ಕಲಾವಿದ ಸುತ್ತೂರಿನ ಹೊಸಕೋಟೆ ಶಿವಮಲ್ಲು ಅವರು ರಾಮನ ವೇಷ ಧರಿಸಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ಹಾಕುವ ಮೂಲಕ ಕೋವಿಡ್ ಕುರಿತು ಜಾಗೃತಿ ಮೂಡಿಸಿದರು   

ಮೈಸೂರು: ನಗರದಲ್ಲಿ ಬುಧವಾರ ಸರಳವಾಗಿ ರಾಮನವಮಿಯನ್ನು ಆಚರಿಸಲಾಯಿತು.

ಇಲ್ಲಿನ ಬಹುತೇಕ ಎಲ್ಲ ರಾಮಮಂದಿರಗಳಲ್ಲೂ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರ ವಿಗ್ರಹಗಳನ್ನು ವಿವಿಧ ಬಗೆಯಲ್ಲಿ ಸಿಂಗರಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದ ಪಾನಕ, ಮಜ್ಜಿಗೆ ವಿತರಣೆ ಕಾರ್ಯಕ್ರಮ ಹೆಚ್ಚು ನಡೆಯಲಿಲ್ಲ.

ಇಲ್ಲಿನ ಮೈಸೂರು ಯುವ ಬಳಗದ ವತಿಯಿಂದ ರಾಮನವಮಿ ಅಂಗವಾಗಿ ನಾರಾಯಣ ಶಾಸ್ತ್ರಿ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಪೌರಾಣಿಕ ಕಲಾವಿದರಾದ ಸುತ್ತೂರಿನ ಹೊಸಕೋಟೆ ಶಿವಮಲ್ಲು ಅವರು ರಾಮನ ವೇಷ ಧರಿಸಿ ಮಾಸ್ಕ್ ಹಾಕುವ ಕುರಿತು ಜಾಗೃತಿ ಮೂಡಿಸಿದರು.

ADVERTISEMENT

ತಾವೂ ಸಾರ್ವಜನಿಕರೊಬ್ಬರಿಂದ ಮಾಸ್ಕ್ ಹಾಕಿಸಿಕೊಂಡರಲ್ಲದೇ, ಸಾರ್ವಜನಿಕರಿಗೆ ಸರಿಯಾಗಿ ಮಾಸ್ಕ್ ಹಾಕಬೇಕು ಎಂದು ಹೇಳುತ್ತಿದ್ದುದು ಗಮನ ಸೆಳೆಯಿತು. ಇವರ ಜಾಗೃತಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಇದೇ ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಎಂ.ಎನ್.ನವೀನ್ ಕುಮಾರ್ ಅವರು ಕೋವಿಡ್ ಲಸಿಕೆ ಪಡೆಯಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಮುಖಂಡರಾದ ಲಕ್ಷ್ಮೀದೇವಿ, ರೇಣುಕಾ ರಾಜ್, ಪರಮೇಶ್ ಗೌಡ, ವಿಕ್ರಂ ಅಯ್ಯಂಗಾರ್, ಲೋಹಿತ್, ನವೀನ್, ಪ್ರಮೋದ್ ಗೌಡ, ಕಾಂತಿಲಾಲ್ ಜೈನ್, ಕಿರಣ್, ರವಿ ಇದ್ದರು.

ತ್ಯಾಗರಾಜ ರಸ್ತೆ ಹಾಗೂ ರಾಮಾನುಜ ರಸ್ತೆಯ ಆಂಜನೇಯಸ್ವಾಮಿ ದೇಗುಲ, ಅರಮನೆ ಉತ್ತರ ಬಾಗಿಲಿನ ಶ್ರೀರಾಮ ದೇವಸ್ಥಾನ, ಇರ್ವಿನ್ ರಸ್ತೆಯ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ, ವಿದ್ಯಾರಣ್ಯಪುರಂನ ಚಿನ್ಮಯ ಮಿಷನ್‌, ಕೃಷ್ಣಮೂರ್ತಿಪುರಂನ ಶ್ರೀರಾಮಂದಿರ, ಜಯಲಕ್ಷ್ಮಿಪುರಂನ ಶ್ರೀರಾಮ ಸೇವಾ ಮಂಡಳಿ ಚಾರಿಟಬಲ್ ಟ್ರಸ್ಟ್‌, ರಾಮಕೃಷ್ಣನಗರ ‘ಐ’ ಬ್ಲಾಕ್‌ನ ಗಣಪತಿ ದೇವಸ್ಥಾನ, ಮಾನಂದವಾಡಿ ರಸ್ತೆಯ ಸೀತಾರಾಮ ದೇವಸ್ಥಾನ, ಲಕ್ಷ್ಮಿ ಭಜನಾ ಮಂಡಳಿ, ನಾರಾಯಣಶಾಸ್ತ್ರಿ ರಸ್ತೆಯ ಪ್ರಸನ್ನ ಸೀತಾರಾಮ ಮಂದಿರ ಸೇರಿದಂತೆ ಹಲವೆಡೆ ಅತ್ಯಂತ ಸರಳವಾಗಿ ಪೂಜಾ ಕೈಂಕರ್ಯಗಳು ನಡೆದವು. ಹಲವೆಡೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು. ತೆರೆದಿದ್ದ ಕೆಲವೇ ದೇಗುಲಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.