ಮೈಸೂರು: ಕದಂಬ ರಂಗವೇದಿಕೆಯು ವಿಜಯನಗರದ ಕಲಾನಿಕೇತನ ಕಲಾ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ಯು.ಎಸ್.ರಾಮಣ್ಣ ಅವರನ್ನು ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಸನ್ಮಾನಿಸಿದರು.
ಬಳಿಕ ಮಾತನಾಡಿ, ‘ರಾಮಣ್ಣ ಜಾನಪದ ವಸ್ತುಗಳ ಸಂಗ್ರಹಕ್ಕಾಗಿ ಮನೆ ಮನೆ ಅಲೆದಿದ್ದಾರೆ. ತಾವೊಬ್ಬರೇ ಬೆಳೆಯದೇ ಜೊತೆಯಲ್ಲಿ ಇರುವವರನ್ನು ಬೆಳೆಸುವ ಗುಣ ಅವರದ್ದು. ಜಾನಪದ ವಸ್ತುಗಳ ಸಂಗ್ರಹದ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡಿದ್ದಾರೆ’ ಎಂದರು.
‘ರಾಮಣ್ಣ ನಟ, ನಿರ್ದೇಶಕ, ಜಾನಪದ ವಸ್ತ ಸಂಗ್ರಹಾಲಯದ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ. ಕಲಾವಿದನಾಗಿ ಮೂಕ ಪಾತ್ರಗಳಲ್ಲೂ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ತಲುಪಿದ್ದಾರೆ. ಶಿಸ್ತು ಹಾಗೂ ಸಂಘಟನೆಯ ವಿಚಾರದಲ್ಲಿ ಅವರು ಮಾದರಿ ವ್ಯಕ್ತಿಯಾಗಿದ್ದು, ಅನುಸರಣೀಯ’ ಎಂದು ಹೇಳಿದರು.
ಜಾನಪದ ವಿದ್ವಾಂಸ ಡಾ.ಡಿ.ಕೆ.ರಾಜೇಂದ್ರ ಮಾತನಾಡಿ, ‘ಜಾನಪದ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವ ಯು.ಎಸ್.ರಾಮಣ್ಣ ಅವರದ್ದು ಶಿಸ್ತಿನ ಜೀವನ. ಧ್ಯಾನ, ವ್ಯಾಯಾಮ, ನಟನೆ, ನಿಯತ್ತು, ಬಂದಿದ್ದನ್ನು ಒಪ್ಪಿಕೊಳ್ಳುವಿಕೆಯ ಗುಣ ಹೊಂದಿದ್ದಾರೆ. ಕಡಿಮೆ ಮಾತನಾಡಿ, ತನ್ನ ಕೆಲಸದ ಮೂಲಕ ಗುರುತಿಸಿಕೊಂಡಿದ್ದಾರೆ’ ಎಂದರು ಪ್ರಶಂಸಿಸಿದರು.
ಕಲಾನಿಕೇತನ ಕಲಾ ಶಾಲೆಯ ಪ್ರಾಂಶುಪಾಲ ಕೆ.ಸಿ.ಮಹದೇವಶೆಟ್ಟಿ ಮಾತನಾಡಿ, ‘ನಾಟಕಕ್ಕೂ ಚಿತ್ರಕಲೆಗೂ ಪರಸ್ಪರ ಪೂರಕವಾದ ಅವಿನಾಭಾವ ಸಂಬಂಧವಿದೆ. ತೊಗಲು ಗೊಂಬೆ, ಸೂತ್ರದ ಗೊಂಬೆ, ಮುಖವರ್ಣಿಕೆ ಮೊದಲಾದ ಕಡೆ ಅವನ್ನು ಗಮನಿಸಬಹುದು’ ಎಂದರು.
ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.