ADVERTISEMENT

ರಂಗಾಯಣದ ಬೆನ್ನಿಗೆ ನಿಂತವರು ಚೌಟ

ಬಹುರೂಪಿ ನಾಟಕೋತ್ಸವ ಹಾಗೂ ಹಲವು ನಾಟಕಗಳನ್ನು ಉದ್ಘಾಟಿಸಿದ್ದ ರಂಗಕರ್ಮಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 4:22 IST
Last Updated 20 ಜೂನ್ 2019, 4:22 IST
ರಂಗಕರ್ಮಿ ಮಂಡ್ಯ ರಮೇಶ್ ಅವರು 2002ರಲ್ಲಿ ಮೊದಲ ಬಾರಿಗೆ ಆರಂಭಿಸಿದ ‘ನಟನಾ’ ಸಂಸ್ಥೆಯ ‘ರಜಾ– ಮಜಾ’ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ರಂಗಕರ್ಮಿ ಡಿ.ಕೆ.ಚೌಟ (ಮಧ್ಯದವರು). ನಟರಾದ ಎಂ.ಪಿ.ಶಂಕರ್ ಹಾಗೂ ರಾಜಾನಂದ್ ಚಿತ್ರದಲ್ಲಿ ಇದ್ದಾರೆ.
ರಂಗಕರ್ಮಿ ಮಂಡ್ಯ ರಮೇಶ್ ಅವರು 2002ರಲ್ಲಿ ಮೊದಲ ಬಾರಿಗೆ ಆರಂಭಿಸಿದ ‘ನಟನಾ’ ಸಂಸ್ಥೆಯ ‘ರಜಾ– ಮಜಾ’ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ರಂಗಕರ್ಮಿ ಡಿ.ಕೆ.ಚೌಟ (ಮಧ್ಯದವರು). ನಟರಾದ ಎಂ.ಪಿ.ಶಂಕರ್ ಹಾಗೂ ರಾಜಾನಂದ್ ಚಿತ್ರದಲ್ಲಿ ಇದ್ದಾರೆ.   

ಮೈಸೂರು: ಬೆಂಗಳೂರಿನಲ್ಲಿ ಬುಧವಾರ ನಿಧನರಾದ ಹಿರಿಯ ರಂಗಕರ್ಮಿ, ನಾಟಕಕಾರ ದರ್ಬೆ ಕೃಷ್ಣಾನಂದ ಚೌಟ (82) ಅವರಿಗೂ ಮೈಸೂರಿಗೂ ಅವಿನಾಭಾವದ ನಂಟು. ಇಲ್ಲಿನ ರಂಗಭೂಮಿಯ ಪೋಷಕರಲ್ಲಿ ಇವರದು ಬಹುದೊಡ್ಡ ಹೆಸರು.

ರಂಗಾಯಣದ ಸ್ಥಾಪನೆಯಲ್ಲಿ ಬಿ.ವಿ.ಕಾರಂತರ ಹೆಗಲಿಗೆ ನಿಂತ ಚೌಟ ಅವರು ನಂತರ ಇಲ್ಲಿನ ರಂಗಭೂಮಿಗೆ ಒಂದು ರೀತಿಯ ಪೋಷಕರಾಗಿ ನಿಂತರು. 1997–98ನೇ ಸಾಲಿನಲ್ಲಿ ಇಲ್ಲಿ ಸಿ.ಜಿ.ಕೆ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ‘ಒಥೆಲೊ’ ನಾಟಕವನ್ನು ಇವರೇ ಉದ್ಘಾಟಿಸಿದ್ದರು.

ಪ್ರಸನ್ನ ಅವರು ರಂಗಾಯಣದ ನಿರ್ದೇಶಕರಾಗಿದ್ದಾಗ ‘ಬಹುರೂಪಿ’ ನಾಟಕೋತ್ಸವವನ್ನು ಉದ್ಘಾಟಿಸುವ ಮಹತ್ತರವಾದ ಗೌರವವೂ ಚೌಟ ಅವರದ್ದಾಗಿತ್ತು. ನಂತರ, 2002ರಲ್ಲಿ ರಂಗಕರ್ಮಿ ಮಂಡ್ಯ ರಮೇಶ್ ಅವರು ಮೊದಲ ಬಾರಿಗೆ ಆರಂಭಿಸಿದ ‘ನಟನಾ’ ಸಂಸ್ಥೆಯ ‘ರಜಾ– ಮಜಾ’ ಮಕ್ಕಳ ಬೇಸಿಗೆ ಶಿಬಿರವನ್ನೂ ಇವರು ಉದ್ಘಾಟಿಸಿ ಶುಭ ಹಾರೈಸಿದ್ದರು.

ADVERTISEMENT

ಬಿ.ವಿ.ಕಾರಂತ ಅವರ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ಜೀವನಚರಿತ್ರೆಯ ಪ್ರಕಟಣೆಗೆ ಬಹುದೊಡ್ಡ ಮೊತ್ತದ ದೇಣಿಗೆಯನ್ನು ನೀಡುವ ಮೂಲಕ ಚೌಟ ತಮ್ಮ ಪುಸ್ತಕ ಪ್ರೀತಿ ಮತ್ತು ರಂಗಪ್ರೀತಿಯನ್ನು ತೋರಿದ್ದರು.

ಇವರು ಬೆಂಗಳೂರಿನಲ್ಲಿ ಆರಂಭಿಸಿದ ‘ಚಿತ್ರಸಂತೆ’ಯ ಪರಿಕಲ್ಪನೆಯನ್ನು ನಂತರದ ದಿನಗಳಲ್ಲಿ ಮೈಸೂರು ದಸರಾ ಮಹೋತ್ಸವದಲ್ಲಿ ಅಳವಡಿಸಿಕೊಳ್ಳಲಾಯಿತು. ಇಲ್ಲಿಯೂ ‘ಚಿತ್ರಸಂತೆ’ ನಡೆಸುತ್ತಿರುವುದರ ಹಿಂದೆ ಚೌಟ ಅವರ ಪ್ರಭಾವವನ್ನು ಕಾಣಬಹುದು.

ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅವರು ಪ್ರತಿಕ್ರಿಯಿಸಿ, ‘ಚೌಟ ಅವರು ಕೇವಲ ಮೈಸೂರು, ಬೆಂಗಳೂರು ಅಥವಾ ಕರಾವಳಿಗೆ ಮಾತ್ರ ಸೀಮಿತರಲ್ಲ. ಇಡೀ ಕರ್ನಾಟಕದ ಕನ್ನಡದ ರಂಗಭೂಮಿಯ ಪ್ರಧಾನ ಪೋಷಕರಾಗಿದ್ದರು. ಇವರ ಅಗಲಿಕೆ ರಂಗಭೂಮಿಗೆ ದೊಡ್ಡ ನಷ್ಟ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.