ADVERTISEMENT

ಮೈಸೂರು | ರಂಗಾಯಣದವರನ್ನೇ ನೇಮಿಸದಿರುವುದಕ್ಕೆ ಅಪಸ್ವರ!

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 4:59 IST
Last Updated 13 ಆಗಸ್ಟ್ 2024, 4:59 IST

ಮೈಸೂರು: ಇಲ್ಲಿನ ರಂಗಾಯಣದ ನಿರ್ದೇಶಕರಾಗಿ ಸತೀಶ್ ತಿಪಟೂರು ಅವರನ್ನು ನೇಮಿಸಿರುವ ಸರ್ಕಾರದ ಕ್ರಮದ ವಿರುದ್ಧ ಅಪಸ್ವರ ಕೇಳಿಬಂದಿದೆ. ‘ಇಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಕಲಾವಿದರನ್ನೇ ನೇಮಿಸಿದ್ದರೆ ಸೂಕ್ತವಾಗುತ್ತಿತ್ತು’ ಎಂಬ ಚರ್ಚೆ ಸಾಂಸ್ಕೃತಿಕ ವಲಯದಲ್ಲಿ ನಡೆಯುತ್ತಿದೆ.

ವರ್ಷದಿಂದಲೂ ತೆರವಾಗಿದ್ದ ಸ್ಥಾನಕ್ಕೆ ನೇಮಕಗೊಳ್ಳಲು ತೀವ್ರ ಪೈಪೋಟಿ ನಡೆದಿತ್ತು. ಹಲವು ಮಂದಿ ಆಕಾಂಕ್ಷಿಗಳು  ಪ್ರಯತ್ನ ಮಾಡಿದ್ದರು. ‘ರಂಗ ಸಮಾಜ’ದ ಸಭೆಯಲ್ಲಿ ಚರ್ಚಿಸಿದ ನಂತರ, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ತಿಪಟೂರಿನ ‘ಭೂಮಿ ಬಳಗ’ದ ತಿಪಟೂರು ಸತೀಶ್ ಹಾಗೂ ರಂಗಾಯಣದ ನಿವೃತ್ತ ಕಲಾವಿದ ಕೃಷ್ಣಪ್ರಸಾದ್‌ ಅವರನ್ನು ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಇವರಲ್ಲಿ ಸತೀಶ್ ಅವರಿಗೆ ಅವಕಾಶವನ್ನು ಸರ್ಕಾರ ನೀಡಿದೆ.

ಸರ್ಕಾರದ ನಿರ್ಧಾರದ ಬಗ್ಗೆ ಇಲ್ಲಿನ ಪ್ರಗತಿಪರರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ADVERTISEMENT

‘ರಂಗಾಯಣಕ್ಕೆ ಜೀವ ತುಂಬುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಾಗಿದೆ. ಇದಕ್ಕಾಗಿ ಇಲ್ಲಿನ ಹಿನ್ನೆಲೆಯನ್ನು ತಿಳಿದಿರುವವರನ್ನೇ ಆಯ್ಕೆ ಮಾಡಬೇಕಿತ್ತು. ರಂಗಭೂಮಿಯಲ್ಲಿ ಕೆಲವೇ ವರ್ಷಗಳ ಅನುಭವ ಇರುವ ಹಾಗೂ ಹೊರಗಿನವರನ್ನು ನೇಮಿಸಿರುವುದು ಎಷ್ಟರ ಮಟ್ಟಿಗೆ ಸರಿ? ಈ ರಂಗಾಯಣದಲ್ಲಿ ಕಾರ್ಯನಿರ್ವಹಿಸಿದ ಕಲಾವಿದರ‍್ಯಾರೂ ಯೋಗ್ಯರಿರಲಿಲ್ಲವೇ?’ ಎಂಬ ಪ್ರಶ್ನೆಗಳು ಪ್ರಗತಿಪರ ಚಿಂತಕರ ವಲಯದಲ್ಲಿ ಕೇಳಿಬರುತ್ತಿವೆ.

ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗುತ್ತಿದೆ. ‘ಗೋ ಬ್ಯಾಕ್ ಚಳವಳಿ’ ನಡೆಸುವುದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.