ಮೈಸೂರು: ವರ್ಷದಿಂದಲೂ ತೆರವಾಗಿದ್ದ ಇಲ್ಲಿನ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಮೂವರ ಹೆಸರನ್ನು ರಂಗ ಸಮಾಜವು ಶಿಫಾರಸು ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಬ್ಬರ ಹೆಸರನ್ನು ಅಂತಿಮಗೊಳಿಸಲಿದ್ದಾರೆ.
ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ, ತಿಪಟೂರಿನ ಭೂಮಿ ಬಳಗದ ತಿಪಟೂರು ಸತೀಶ್ ಹಾಗೂ ರಂಗಾಯಣದ ನಿವೃತ್ತ ಕಲಾವಿದ ಕೃಷ್ಣಪ್ರಸಾದ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಈಚೆಗೆ ರಂಗ ಸಮಾಜದ ಸಭೆಯು ನಡೆದಿತ್ತು. ಸದಸ್ಯರಾದ ಶಶಿಧರ ಬಾರಿಘಾಟ್, ರಾಜಪ್ಪ ದಳವಾಯಿ, ನರೇಶ್ ಡಿಂಗ್ರಿ, ಸುರೇಶ್ ಬಾಬು, ಮಹಾಂತೇಶ ಗಜೇಂದ್ರಗಡ ಅವರ ಸಮಿತಿಯು ಮೂವರನ್ನು ಅಂತಿಮಗೊಳಿಸಿದೆ.
‘ಮೈಸೂರಿನ ಜೊತೆಗೆ ಶಿವಮೊಗ್ಗ, ಧಾರವಾಡ, ಕಲಬುರಗಿ, ದಾವಣಗೆರೆ ಹಾಗೂ ಕಾರ್ಕಳದ ರಂಗಾಯಣದ ನಿರ್ದೇಶಕ ಸ್ಥಾನಗಳಿಗೂ ತಲಾ ಮೂವರ ಹೆಸರನ್ನು ಆಯ್ಕೆ ಮಾಡಿದ್ದು, ಎರಡು– ಮೂರು ದಿನದಲ್ಲಿಯೇ 18 ಮಂದಿಯಲ್ಲಿ 6 ನಿರ್ದೇಶಕರ ಹೆಸರು ಘೋಷಣೆಯಾಗಲಿದೆ’ ಎಂದು ರಂಗಸಮಾಜದ ಸದಸ್ಯ ಸುರೇಶ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
‘ರಂಗಸಮಾಜದಲ್ಲಿ ಖಾಲಿಯಿದ್ದ ನಾಮನಿರ್ದೇಶಿತ ಸದಸ್ಯ ಸ್ಥಾನಕ್ಕೆ ರಂಗಕರ್ಮಿ ಶಕೀಲ್ ಅಹಮ್ಮದ್ ಅವರನ್ನು ಸಭೆಯಲ್ಲಿ ಆಯ್ಕೆಮಾಡಲಾಯಿತು’ ಎಂದು ಮಾಹಿತಿ ನೀಡಿದರು.
ಈ ಹಿಂದೆ ನಿರ್ದೇಶಕರಾದ್ದವರು: ಮೈಸೂರು ರಂಗಾಯಣ ಇದುವರೆಗೆ 10 ನಿರ್ದೇಶಕರನ್ನು ಕಂಡಿದೆ.
1989ರಿಂದ 1996ರವರೆಗೆ ಬಿ.ವಿ. ಕಾರಂತರು ಮೊದಲ ನಿರ್ದೇಶಕರಾಗಿದ್ದರು. ನಂತರ ಕ್ರಮವಾಗಿ ಸಿ. ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ, ಬಿ. ಜಯಶ್ರೀ, ಲಿಂಗದೇವರು ಹಳೇಮನೆ, ಬಿ.ವಿ.ರಾಜಾರಾಂ, ಎಚ್. ಜನಾರ್ದನ (ಜನ್ನಿ), ಭಾಗೀರಥಿಬಾಯಿ ಹಾಗೂ ಅಡ್ಡಂಡ ಕಾರ್ಯಪ್ಪ ಕಾರ್ಯನಿರ್ವಹಿಸಿದ್ದರು.
‘ಈ ಬಾರಿ ಯಾರೇ ನಿರ್ದೇಶಕರಾಗಲಿ, ಈಚಿನ ದಿನಗಳಲ್ಲಿ ವಿವಾದಗಳಲ್ಲೇ ಕಳೆದು ಹೋಗಿರುವ ಸಂಸ್ಥೆಗೆ ಪುನಶ್ಚೇತನ, ಸಾಂಸ್ಕೃತಿಕ ಮೆರುಗು ನೀಡಬೇಕು. ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಳ್ಳುವವರು ಸ್ಥಾನಕ್ಕೆ ಬರಬೇಕು’ ಎಂಬುದು ರಂಗಾಸಕ್ತರ ಆಶಯ.
ವರ್ಷದಿಂದಲೂ ಖಾಲಿ..
2023ರ ಮೇ 14ರಿಂದಲೂ ಮೈಸೂರಿನ ರಂಗಾಯಣ ನಿರ್ದೇಶಕ ಸ್ಥಾನ ತೆರವಾಗಿತ್ತು. ಕಾಂಗ್ರೆಸ್ ಸರ್ಕಾರ ರಚನೆಯಾಗುವುದಕ್ಕೂ ಮುಂಚೆಯೇ ಅಡ್ಡಂಡ ಸಿ.ಕಾರ್ಯಪ್ಪ ರಂಗಾಯಣ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಸರ್ಕಾರವೂ ನೇಮಕ ಪ್ರಕ್ರಿಯೆ ನಡೆಸಿರಲಿಲ್ಲ. ಈ ವೇಳೆ ನಿರ್ದೇಶಕ ಸ್ಥಾನಕ್ಕೆ ನೇಮಕಗೊಳಿಸಲು ವರ್ಷದಿಂದಲೂ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ನಡೆದಿತ್ತು. ಯುವಕರಿಗೆ ಆದ್ಯತೆ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಈ ಹಿಂದೆ ನಿರ್ದೇಶಕರಾಗಿದ್ದ ಸಿ. ಬಸವಲಿಂಗಯ್ಯ ಎಚ್. ಜನಾರ್ಧನ (ಜನ್ನಿ) ಹೆಸರುಗಳು ಮತ್ತೊಮ್ಮೆ ಚಾಲ್ತಿಯಲ್ಲಿದ್ದವು. ತಿಪಟೂರಿನ ಭೂಮಿ ಬಳಗದ ಸತೀಶ್ ಧಾರವಾಡದ ಮಹದೇವ ಹಡಪದ ಉಮೇಶ್ ಸಾಲಿಯಾನ ಕೆ.ಪಿ.ಲಕ್ಷ್ಮಣ ಹೆಸರುಗಳು ಪ್ರಸ್ತಾಪಗೊಂಡಿದ್ದವು. ಇದೀಗ ರಂಗ ಸಮಾಜವು ಮೂವರ ಹೆಸರನ್ನು ಅಂತಿಮಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಹೆಸರು ಘೋಷಿಸುವುದಷ್ಟೇ ಬಾಕಿಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.