
ಮೈಸೂರು: ಕರ್ನಾಟಕ ಹಾಗೂ ಗೋವಾ ತಂಡಗಳ ನಡುವೆ ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ರಣಜಿ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಮೊದಲ ದಿನವೇ ಪ್ರೇಕ್ಷಕರ ದಂಡು ಹರಿದು ಬಂದಿತು.
ಬೆಳಿಗ್ಗೆ 9.30ಕ್ಕೆ ಪಂದ್ಯ ಆರಂಭಗೊಂಡಿದ್ದು, ಬಿಸಿಲು ಹೆಚ್ಚಿದಂತೆಲ್ಲ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತ ಹೋಯಿತು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗಂಗೋತ್ರಿ ಗ್ಲೇಡ್ಸ್‌ನ ಕಲ್ಲುಹಾಸುಗಳ ಮೇಲೆ ವಿರಮಿಸುತ್ತ, ನೆಚ್ಚಿನ ಆಟಗಾರರ ಹೆಸರು ಕೂಗುತ್ತ ಹುರಿದುಂಬಿಸಿದರು. ಗೋವಾ ಒಂದೊಂದು ವಿಕೆಟ್ ಪತನವಾದಂತೆಲ್ಲ ಚಪ್ಪಾಳೆ, ಶಿಳ್ಳೆಗಳೂ ಕೇಳಿ ಬರುತ್ತಿದ್ದವು.
ಮನೀಶ್ ಪಾಂಡೆ, ಮಯಂಕ್ ಅಗರವಾಲ್ ಸೇರಿದಂತೆ ಪ್ರತಿ ಆಟಗಾರರನ್ನು ಕಾಣಲು ಪೈಪೋಟಿ ನಡೆಯಿತು. ಕೆಲವರು ಹೊರಗೆ ಬಹಳ ಹೊತ್ತು ಕಾದಿದ್ದು, ಆಟಗಾರರ ಜೊತೆ ಫೋಟೊ ತೆಗೆಸಿಕೊಳ್ಳಲು ಪ್ರಯತ್ನವನ್ನೂ ನಡೆಸಿದರು.
ಗೋವಾದ ಇನ್ನಿಂಗ್ಸ್ ಮುಕ್ತಾಯಕ್ಕೆ ಇನ್ನೆರಡು ವಿಕೆಟ್ ಮಾತ್ರವೇ ಬಾಕಿ ಉಳಿದಿದೆ. ಪ್ರವಾಸಿ ತಂಡದ ಪರ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್ ನಡೆಸಲಿರುವುದು ಇನ್ನೊಂದು ವಿಶೇಷ. ಕರ್ನಾಟಕ ತಂಡವು ಶನಿವಾರ ಬ್ಯಾಟಿಂಗ್‌ಗೆ ಇಳಿಯಲಿದ್ದು, ಆತಿಥೇಯ ತಂಡದ ಆಟ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಇನ್ನಷ್ಟು ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.