ಮೈಸೂರು: ‘ನಾನು ರಾಜೀನಾಮೆ ನೀಡುವುದರಿಂದ ಮೈಸೂರಿನಲ್ಲಿ ಕೊರೊನಾ ಕಡಿಮೆಯಾಗುವುದಾದರೆ, ಮೈಸೂರಿನ ಜನರಿಗೆ ಒಳ್ಳೆಯದಾಗುವುದಾದರೆ ಅದಕ್ಕೂ ಸಿದ್ಧ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಇಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊರೊನಾ ವಿಚಾರದಲ್ಲಿ ಹಾಗೂ ಮೈಸೂರಿನ ಜನತೆ ದೃಷ್ಟಿಯಿಂದ ನನ್ನ ಆಡಳಿತದಲ್ಲಿ ವೈಫಲ್ಯವೇನಾದರೂ ಇದ್ದರೆ ತಿದ್ದಿಕೊಳ್ಳಲು ಸಿದ್ಧ’ ಎಂದರು.
‘ಐಎಎಸ್‌ಅಧಿಕಾರಿಗಳ ಸಂಘರ್ಷ ಪ್ರಕರಣದಿಂದ ಮನಸ್ಸಿಗೆ ತುಂಬಾ ನೋವುಂಟಾಗಿದೆ. ಏನಾದರೂ ಉತ್ತಮ ಕೆಲಸ ಮಾಡುವ ಉದ್ದೇಶದಿಂದ ಉಸ್ತುವಾರಿ ಸಚಿವನಾಗಿ ಮೈಸೂರಿಗೆ ಬಂದೆ. ನನ್ನ ನೋವೇನು ಎಂಬುದನ್ನು ಮುಖ್ಯಮಂತ್ರಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.
‘ಸಂಘರ್ಷವು ಸೀರಿಯಲ್ ಸ್ಟೋರಿ ಅಲ್ಲ. ಕೋವಿಡ್ ಸಂದರ್ಭದಲ್ಲಿ ಸೀರಿಯಲ್ ಸ್ಟೋರಿ ಮಾಡಲು ಸಾಧ್ಯವಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಯು ಮುಖ್ಯಮಂತ್ರಿಗೆ ವರದಿ ನೀಡುತ್ತಾರೆ. ಮುಖ್ಯಮಂತ್ರಿಗೆ ಕೂಡ ತಮ್ಮದೇ ಆದ ಮೂಲಗಳಿಂದ ಮಾಹಿತಿಪಡೆದುಕೊಂಡಿರುತ್ತಾರೆ.ಅದರ ಆಧಾರದ ಮೇಲೆ ಸೀರಿಯಲ್ ಕೊನೆಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಒಬ್ಬರಿಂದಲೇ ಕೋವಿಡ್ ನಿಯಂತ್ರಣವಾಗುತ್ತಿದೆ ಎಂಬ ಭ್ರಮೆಯಾರಿಗೂ ಬೇಡ. 11 ಕ್ಷೇತ್ರಗಳ ಶಾಸಕರು ಕೂಡ ಭಾಗಿಯಾಗಿದ್ದಾರೆ. ಸಂಸದರು ಸೇರಿದ್ದಾರೆ. ಸಾರ್ವಜನಿಕರು, ಸಂಘ ಸಂಸ್ಥೆಯವರು ಕೈಜೋಡಿಸಿದ್ದಾರೆ. ಎಲ್ಲರಿಗಿಂತ ಹೆಚ್ಚಾಗಿ, ವಿಶೇಷವಾಗಿ ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರ ಪಾತ್ರ ದೊಡ್ಡದು’ ಎಂದು ತಿಳಿಸಿದರು.
ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ‘ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರು ಮೊದಲು ತಮ್ಮ ಜವಾಬ್ದಾರಿ ಏನೆಂಬುದನ್ನು ಅರಿತುಕೊಳ್ಳಲಿ. ಮುಖ್ಯಮಂತ್ರಿ ಜೊತೆಗಿನ ವಿಡಿಯೊ ಸಂವಾದದಲ್ಲಿ ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರಗಳಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.
‘ನನ್ನ ವಿರುದ್ಧ ಮಾತನಾಡುವುದರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಪಟ್ಟ ಗಟ್ಟಿಯಾಗುವುದಿದ್ದರೆ ಅಥವಾ ಪದನ್ನೋತಿ ಲಭಿಸುವುದಾದರೆ ಒಳ್ಳೆಯದಾಗಲಿ’ ಎಂದು ಶುಭ ಕೋರಿದರು.
‘ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡಲು ಸಾಧ್ಯವಿಲ್ಲ. ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಮನೆಮನೆ ಸಮೀಕ್ಷೆ ಕಾರ್ಯ ಶೇ 98ರಷ್ಟು ಮುಗಿದಿದೆ. ವೈದ್ಯರ ನಡೆ ಹಳ್ಳಿ ಕಡೆ ಯೋಜನೆಗೂಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.