ADVERTISEMENT

ಮೈಸೂರು: ಸಿಂಧುವಳ್ಳಿಯ ಗುಡಿಕಟ್ಟೆಗೆ ಜೀವಕಳೆ

ಹೂಳು ಹಾಗೂ ಕುರುಚಲು ಗಿಡಗಳಿಂದ ತುಂಬಿದ್ದ 1.3 ಎಕರೆ ವಿಸ್ತೀರ್ಣದ ಕಟ್ಟೆ

ಮೋಹನ್ ಕುಮಾರ ಸಿ.
Published 17 ಜೂನ್ 2025, 6:08 IST
Last Updated 17 ಜೂನ್ 2025, 6:08 IST
ಮೈಸೂರು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ಗುಡಿಕಟ್ಟೆ –ಪ್ರಜಾವಾಣಿ ಚಿತ್ರ: ಅನೂಪ್ ರಾಘ .ಟಿ.
ಮೈಸೂರು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ಗುಡಿಕಟ್ಟೆ –ಪ್ರಜಾವಾಣಿ ಚಿತ್ರ: ಅನೂಪ್ ರಾಘ .ಟಿ.   

ಮೈಸೂರು: ತಾಲ್ಲೂಕು ಮಳೆಯಾಶ್ರಿತ ಪ್ರದೇಶವಾಗಿದ್ದು, ಬಿದ್ದ ಮಳೆ ನೀರು ಪೋಲಾಗದಂತೆ ಕೆರೆ– ಕಟ್ಟೆಗಳ ಜಾಲವನ್ನೇ ನಿರ್ಮಿಸಲಾಗಿತ್ತು. ದೊಡ್ಡ ಕೆರೆಗಳಲ್ಲದೇ ಕುಂಟೆ– ಕಟ್ಟೆಗಳು ನೀರನ್ನು ಇಂಗಿಸುತ್ತಿದ್ದವು. 

ದೊಡ್ಡ ಕೆರೆಗಳೇ ಒತ್ತುವರಿಯಿಂದ ನಲುಗಿರುವಾಗ ಪುಟ್ಟ ಕುಂಟೆ– ಕಟ್ಟೆಗಳನ್ನು ಉಳಿಸುವುದು ಸವಾಲು. ಜಿಲ್ಲೆಯ ನೂರಾರು ಕಟ್ಟೆಗಳು ನಗರೀಕರಣದಿಂದ ಕಣ್ಮರೆಯಾಗಿರುವಾಗ, ಜಯಪುರ ಹೋಬಳಿ ಸಿಂಧುವಳ್ಳಿ ಗ್ರಾಮದ ಗುಡಿ ಕಟ್ಟೆ ಮೂಲಸ್ವರೂಪಕ್ಕೆ ಮರಳಿದ್ದು, ಬೇಸಿಗೆಯಲ್ಲೂ ಅಂತರ್ಜಲ ಇಲ್ಲಿ ಉಕ್ಕಿ ಹರಿಯುತ್ತದೆ. 

ಕಟ್ಟೆಯು ಸರ್ವೆ ಸಂಖ್ಯೆ 179ರಲ್ಲಿದ್ದು, ಒಟ್ಟು ವಿಸ್ತೀರ್ಣ 1.3 ಎಕರೆಯಾಗಿದೆ. ಕಟ್ಟೆಯ ಬದುಗಳೆಲ್ಲ ಹಳ್ಳಕ್ಕೆ ಜರುಗಿದ್ದವು. ಆಳವೂ ಕಡಿಮೆಯಾಗಿತ್ತು. ಐದು ವರ್ಷದ ಹಿಂದೆ ‘ಏಷ್ಯನ್ ಪೇಂಟ್ಸ್‌’ನ ಸಿಎಸ್‌ಆರ್‌ ನಿಧಿಯಲ್ಲಿ ಅಭಿವೃದ್ಧಿ ಕಂಡಿದ್ದು, ಜೀವಕಳೆ ಪಡೆದಿದೆ. 

ADVERTISEMENT

ಕಂಪನಿಯ ಜೊತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ, ಜಿಲ್ಲಾ ‍ಪಂಚಾಯಿತಿ, ನ್ಯಾಷನಲ್ ಆಗ್ರೋ ಫೌಂಡೇಶನ್‌ ಕೂಡ ಅಭಿವೃದ್ಧಿಗೆ ಶ್ರಮಿಸಿವೆ. ಆಗ್ರೋ ಫೌಂಡೇಷನ್‌ ತಾಂತ್ರಿಕ ಮಾರ್ಗದರ್ಶನವನ್ನೂ ನೀಡಿದೆ. 

ಕಟ್ಟೆಯ ತಳ ಸೇರಿದ್ದ ಕಲ್ಲುಗಳನ್ನು ಮತ್ತೆ ತೆಗೆದು ಬದುಗಳನ್ನು ನಿರ್ಮಿಸಲಾಗಿದ್ದು, ಕಾಂಕ್ರೀಟ್‌ ಬಳಸದೇ ಏರಿಯನ್ನು ಬಿಗಿಗೊಳಿಸಲಾಗಿದೆ. ಅಂಚಿನ ಹೂಳನ್ನು ಇಳಿಜಾರು ಹಾಗೂ ಮೆಟ್ಟಿಲು ಸ್ವರೂಪದಲ್ಲಿ ತೆಗೆಯಲಾಗಿದೆ. ಕಟ್ಟೆಯ ಒಡಲಲ್ಲಿ ಬೆಳೆದಿದ್ದ ಬಳ್ಳಾರಿ ಜಾಲಿ ಸೇರಿದಂತೆ ಕುರುಚಲು ಗಿಡಗಳನ್ನು ತೆರವು ಮಾಡಲಾಗಿದೆ.  

‘ಕಟ್ಟೆಯ ನೀರನ್ನು ಮೊದಲು ಕುಡಿಯಲು ಬಳಸಲಾಗುತ್ತಿತ್ತು. ನಲ್ಲಿಯಲ್ಲಿ ನೀರು ಬರುತ್ತಿರುವುದರಿಂದ ಜಾನುವಾರುಗಳಿಗೆ ಮಾತ್ರ ಬಳಸುತ್ತೇವೆ.  ಹೂಳು ತುಂಬಿದ್ದ ಕಟ್ಟೆ ದುರಸ್ತಿ ಮಾಡಲಾಗಿದೆ ಗ್ರಾಮಸ್ಥರೇ ಇದರ ನಿರ್ವಹಣೆ ಮಾಡುತ್ತಿದ್ದೇವೆ’ ಎಂದು ಗ್ರಾಮದ ನಿವಾಸಿ ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

₹ 20 ಲಕ್ಷ ವೆಚ್ಚದಲ್ಲಿ ಪುನರುಜ್ಜೀವನ: ಏಷ್ಯನ್‌ ಪೇಂಟ್ಸ್‌ ಉದ್ಯಮ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿಯಡಿ ಜಿಲ್ಲೆಯಾದ್ಯಂತ ಕೆರೆಗಳನ್ನು ದಶಕದಿಂದ ಅಭಿವೃದ್ಧಿಗೊಳಿಸುತ್ತಿದ್ದು, ಗುಡಿ ಕಟ್ಟೆ ಪುನರುಜ್ಜೀವನಕ್ಕೆ ₹ 20.01 ಲಕ್ಷ ಅನುದಾನ ನೀಡಿದೆ. 

ಕಂಪನಿಯು 2018–19ರಲ್ಲಿ ಅನುದಾನ ಬಿಡುಗಡೆ ಮಾಡಿತ್ತು. ‘ನ್ಯಾಷನಲ್ ಆಗ್ರೋ ಫೌಂಡೇಶನ್‌’ ಪುನರುಜ್ಜೀವನ ಕಾಮಗಾರಿಯನ್ನು ಮಾರ್ಚ್‌ 2019ರಲ್ಲಿ ಆರಂಭಿಸಿ, 2020 ಅ.25ರಂದು ಪೂರ್ಣಗೊಳಿಸಿದೆ. ಹೂಳನ್ನು ತೆಗೆದದ್ದರಿಂದ 4,500 ಕ್ಯೂಬಿಕ್ ಮೀಟರ್‌ ನೀರು ಸಂಗ್ರಹ ಆಗುತ್ತಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.