ADVERTISEMENT

ಮೈಸೂರು: ‘ನನ್ನ ತಪ್ಪಿನಿಂದಲೇ ಪೀಡಿತನಾದೆ; ನೀವೂ ಆ ತಪ್ಪು ಮಾಡಬೇಡಿ’

ಡಿ.ಬಿ, ನಾಗರಾಜ
Published 29 ಜುಲೈ 2020, 15:41 IST
Last Updated 29 ಜುಲೈ 2020, 15:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ನಾನು ಕೋವಿಡ್–19 ಪೀಡಿತನಾಗಿದ್ದು ನನ್ನ ತಪ್ಪಿನಿಂದಲೇ. ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳು ಕೆಮ್ಮುತ್ತಿದ್ದಳು. ಮೊಬೈಲ್‌ನಲ್ಲಿ ಮಾತನಾಡುತ್ತಲೇ ಆಕೆಯನ್ನು ರೇಗಿಸಿದೆ. ಕೊರೊನಾ... ಕೊರೊನಾ... ಎಂದೆ.

ಇದರಿಂದ ಸಿಟ್ಟಾದ ಆಕೆ ನೇರವಾಗಿ ನನ್ನ ಬಳಿಗೆ ಬಂದು ಕೆಮ್ಮಿದಳು. ನನಗೆ ಬಂದಿದ್ದರೆ, ನಿಮಗೂ ಬರಲಿ ಅಂದಳು. ಮೊಬೈಲ್‌ನಲ್ಲಿ ಮಾತನಾಡಲಿಕ್ಕಾಗಿಯೇ ಮುಖಕ್ಕೆ ಹಾಕಿಕೊಂಡಿದ್ದ ಮುಖಗವಸನ್ನು ಕುತ್ತಿಗೆಗೆ ಇಳಿಸಿಕೊಂಡಿದ್ದೆ. ಇದೇ ಪರಿಸರದಲ್ಲಿ ಉಸಿರಾಡಿದ್ದೆ ಎನ್ನುತ್ತಾರೆ ಉದ್ಯಮಿ ಎಸ್‌.ಚಂದ್ರಶೇಖರ್.

ಎರಡ್ಮೂರು ದಿನ ಕಳೆಯೋದರೊಳಗಾಗಿ ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಂಡವು. ಮಳೆಗಾಲ. ನನಗೆಲ್ಲಿ ಕೋವಿಡ್ ಎಂದುಕೊಂಡು ನಿರ್ಲಕ್ಷ್ಯಿತನಾದೆ. ಸ್ಥಳೀಯ ವೈದ್ಯರ ಬಳಿಗೆ ತೆರಳಿ ಔಷಧಿ ತೆಗೆದುಕೊಂಡೆ. ಜ್ವರ ಬಿಟ್ಟವು. ಮೈ–ಕೈ ನೋವಿತ್ತು. ತಲೆನೋವು ಜೊತೆಯಾಗಿತ್ತು ಎಂದರು.

ADVERTISEMENT

ಎರಡ್ಮೂರು ದಿನದ ನಂತರ ಮತ್ತೆ ಜ್ವರ ಬಂತು. ಅದೇ ವೈದ್ಯರಲ್ಲಿಗೆ ಹೋದೆ. ಡಾಕ್ಟರ್ ಔಷಧಿ ಬದಲಿಸಿದರು. ಕೆಮ್ಮು, ಮೈ–ಕೈ ನೋವು ಕಡಿಮೆಯಾಗಲಿಲ್ಲ. ವೈದ್ಯರನ್ನೇ ಬದಲಿಸಿದೆ. ಅವರು ಮೊದಲು ಕೋವಿಡ್–19 ಪರೀಕ್ಷೆಗೆ ಶಿಫಾರಸು ಮಾಡಿದರು. ಗಂಟಲು ದ್ರವವನ್ನು ಪರೀಕ್ಷೆಗೆ ಕೊಟ್ಟೆ ಎಂದು ಹೇಳಿದರು.

ಸಮಸ್ಯೆಯೊಂದರ ಪರಿಹಾರಕ್ಕಾಗಿ ಆರು ಗೆಳೆಯರು ಸೇರಿದ್ದ ಜಾಗಕ್ಕೆ ಇದರ ನಂತರವೂ ಸಹ, ನಿರ್ಲಕ್ಷ್ಯದಿಂದಲೇ ನಾನು ಅಲ್ಲಿಗೋಗಿದ್ದೆ. ಮಾತುಕತೆಯ ನಡುವೆ ಕೆಲವರು ಧೂಮಪಾನ ಮಾಡಿದರು. ನನಗೆ ಸಿಗರೇಟ್ ಹೊಗೆ ಆಗದಿದ್ದರಿಂದ ಸಹಜವಾಗಿಯೇ ಕೆಮ್ಮಿದೆ. ನಾನು ಸೇರಿದಂತೆ ಅಲ್ಲಿದ್ದ ಏಳು ಮಂದಿಯಲ್ಲಿ ಐವರು ಮಾಸ್ಕ್ ಹಾಕಿರಲಿಲ್ಲ. ಇಬ್ಬರಷ್ಟೇ ಮಾಸ್ಕ್ ಧರಿಸಿದ್ದರು ಎಂದು ತಿಳಿಸಿದ್ದರು.

ಈ ಘಟನೆ ನಡೆದ ಒಂದೆರಡು ದಿನದೊಳಗಾಗಿ ನನ್ನ ಪರೀಕ್ಷಾ ವರದಿ ಪಾಸಿಟಿವ್ ಆಗಿತ್ತು. ನಿರೀಕ್ಷೆಯಂತೆ ಮಾಸ್ಕ್ ಧರಿಸದಿದ್ದ ನಾಲ್ವರು ಗೆಳೆಯರ ಕುಟುಂಬಗಳು ಸಹ ಕೋವಿಡ್ ಪೀಡಿತವಾದವು. ಮಾಸ್ಕ್ ಧರಿಸಿದ್ದ ಇಬ್ಬರ ಕುಟುಂಬಕ್ಕೆ ಯಾವೊಂದು ತೊಂದರೆಯಾಗಲಿಲ್ಲ. ನನ್ನಿಂದ ನೇರವಾಗಿ ನಾಲ್ವರಿಗೆ ಕೊರೊನಾ ವೈರಸ್ ಅಂಟಿತು. ಅವರಿಂದ ಅವರ ಕುಟುಂಬಗಳು ಬಾಧಿತವಾದವು ಎಂದು ಹೇಳಿದರು.

ನನ್ನೊಬ್ಬನ ತಪ್ಪಿನಿಂದ ನಾನು ಕೋವಿಡ್ ಬಾಧಿತನಾಗುವ ಜೊತೆ, ಸ್ನೇಹಿತರ ಕುಟುಂಬಕ್ಕೆ ಕಂಟಕವಾದೆ. ಮಾಸ್ಕ್ ಇರೋದು ಕುತ್ತಿಗೆಗೆ ಹಾಕಿಕೊಳ್ಳಲಲ್ಲ. ಸರಿಯಾಗಿ ಮೂಗು, ಬಾಯಿ ಮುಚ್ಚುವಂತೆ ಹಾಕಿಕೊಳ್ಳಬೇಕು. ನಿರ್ಲಕ್ಷ್ಯದ ಪ್ರಮಾದಕ್ಕೆ ಹಲವರು ಕೋವಿಡ್‌ ಪೀಡಿತರಾದೆವು.ಕೋವಿಡ್ ವಿರುದ್ಧ ಹೋರಾಡಿ ಗೆಲ್ಲುವುದು ನಂತರದ ಮಾತು. ಕೊರೊನಾ ವೈರಸ್ ಸೋಂಕು ತಗುಲದಂತೆ ಎಚ್ಚರಿಕೆಯಿಂದ ಇರುವುದು ಮೊದಲ ಆದ್ಯತೆಯಾಗಬೇಕು ಎಂದು ಹೇಳುತ್ತಾರೆ.

ಒಬ್ಬರೇ ಇದ್ದಾಗ ಮಾಸ್ಕ್ ಧರಿಸುವುದು ಅಗತ್ಯವಿರಲ್ಲ. ಆದರೆ ಮತ್ತೊಬ್ಬರು ಇದ್ದಾಗ ಮಾಸ್ಕ್ ಧರಿಸಲೇಬೇಕು. ಪರಸ್ಪರ ಮಾತನಾಡುವಾಗ ಮಾಸ್ಕ್ ಕುತ್ತಿಗೆಯಲ್ಲಿರಬಾರದು, ಮೂಗು–ಬಾಯಿ ಮುಚ್ಚುವಂತೆ ಧರಿಸಬೇಕು. ಆಗಾಗ್ಗೆ ಸ್ಯಾನಿಟೈಸ್ ಮಾಡಿಕೊಳ್ಳಿ. ಹೊರಗೆ ಹೋಗಿ ಬಂದ ಬಳಿಕ ಸ್ನಾನ ಮಾಡುವ ಮೂಲಕ ಕೊರೊನಾ ವೈರಸ್ ಸೋಂಕು ಹರಡುವಿಕೆಯ ಸರಪಳಿಯನ್ನೇ ತುಂಡರಿಸಬಹುದು.

ಕೋವಿಡ್ ಪೀಡಿತರು ಹೆದರಬೇಕಿಲ್ಲ. ಆತ್ಮವಿಶ್ವಾಸವೊಂದಿದ್ದರೇ ಸುಲಭವಾಗಿ ಜಯಿಸಬಹುದು ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.