ಹುಣಸೂರು: ‘ತಾಲ್ಲೂಕಿನ ಜೀವ ನದಿ ಲಕ್ಷ್ಮಣತೀರ್ಥ ಪಾತ್ರದಲ್ಲಿ ರೆಡ್ ಅಲರ್ಟ್ ಪ್ರಕಟಿಸಿ ನದಿ ಅಂಚಿನ ಗ್ರಾಮಸ್ಥರಿಗೆ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಮನವಿ ಮಾಡಲಾಗುತ್ತಿದೆ’ ಎಂದು ತಹಶೀಲ್ದಾರ್ ಎಂ.ಮಂಜುನಾಥ್ ತಿಳಿಸಿದ್ದಾರೆ.
‘ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ನದಿಯಲ್ಲಿ ಒಳಹರಿವು ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಹೀಗಾಗಿ ಕೋಣನಹೊಸಹಳ್ಳಿ, ಅಬ್ಬೂರು, ಬೋಳನಹಳ್ಳಿ, ಸಿಂಡೇನಹಳ್ಳಿ, ನೇಗತ್ತೂರು ಭಾಗದ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಈಗಾಗಲೇ ಈ ಗ್ರಾಮಗಳಲ್ಲಿ ಸುರಕ್ಷಿತ ಪ್ರದೇಶದಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, ಸಕಲ ಸಿದ್ದತೆ ಕೈಗೊಂಡಿದ್ದೇವೆ. ಜಿಲ್ಲಾಧಿಕಾರಿ ಸೂಚನೆ ಮೇಲೆ ಹನಗೋಡು ಹೋಬಳಿಯಲ್ಲಿ ನಾಲ್ಕು ಸ್ಥಳಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ’ ಎಂದರು.
‘ತಾಲ್ಲೂಕಿನಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಈವರೆಗೆ 80 ಮನೆಗಳು ಉರುಳಿದ್ದು ಇವುಗಳಲ್ಲಿ ಭಾಗಷಃ 58 ಹಾನಿಗೊಂಡಿದ್ದು, 22 ಮನೆಗಳು ಸಂಪೂರ್ಣ ಹಾನಿಗೊಂಡಿವೆ. ಈ ಪೈಕಿ ಭಾಗಷಃ ಹಾನಿಗೊಂಡಿರುವ ಮನೆಗಳಿಗೆ ₹ 6,500 ಮತ್ತು ಪೂರ್ಣ ಹಾನಿಗೊಂಡ ಮನೆಗೆ ₹1.20 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
ಬೆಳೆ ಹಾನಿ: ‘ಹನಗೋಡು ಹೋಬಳಿ ಭಾಗದಲ್ಲಿ, 75 ಹೆಕ್ಟೇರ್ ಪ್ರದೇಶದಲ್ಲಿರುವ ದ್ವಿದಳ ಧಾನ್ಯ ಹಲಸಂದೆ, ಹೆಸರು, ಉದ್ದು ಮತ್ತು ವಾಣಿಜ್ಯ ಬೆಳೆ ಮುಸುಕಿನ ಜೋಳ ಮತ್ತು 70 ಹೆಕ್ಟೇರ್ ಪ್ರದೇಶದಲ್ಲಿರುವ ಶುಂಠಿ ಮತ್ತು ತರಕಾರಿ ಬೆಳೆಗೆ ನದಿ ನೀರು ನುಗ್ಗಿ ನಷ್ಟವಾಗಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಅನಿಲ್ ತಿಳಿಸಿದ್ದಾರೆ.
ಹಬ್ಬನಕುಪ್ಪೆ, ಕೋಣನಹೊಸಹಳ್ಳಿ, ಹರಳಹಳ್ಳಿ, ದೊಡ್ಡಹೆಜ್ಜೂರು, ದಾಸನಪುರ, ಕಿರಂಗೂರು, ಬಿಲ್ಲೇನಹೊಸಹಳ್ಳಿ, ಹಿಂಡಗೂಡ್ಲು, ಹೆಗ್ಗಂದೂರು, ವಡ್ಡಂಬಾಳು, ಬೀರನಹಳ್ಳಿ, ಚೆನ್ನಸೋಗೆ ಭಾಗದಲ್ಲಿ ಬೆಳೆದ ಶುಂಠಿ ಬೆಳೆಗೆ ನದಿ ನೀರು ನುಗ್ಗಿದ್ದು, ಕೊಳೆಯುವ ಆತಂಕದಲ್ಲಿ ರೈತರು ಶುಂಠಿ ಕಠಾವು ಮಾಡಿ ನಷ್ಟದ ಪ್ರಮಾಣ ತಗ್ಗಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ತಹಶೀಲ್ದಾರ್ ಭೇಟಿ ಸಮಯದಲ್ಲಿ ಕಸಬಾ ಮತ್ತು ಹನಗೋಡು ಹೋಬಳಿ ರಾಜಸ್ವ ನಿರೀಕ್ಷಣಾಧಿಕಾರಿಗಳಾದ ನಂದೀಶ್, ಪ್ರಶಾಂತ ರಾಜೇ ಅರಸು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.