ADVERTISEMENT

ಧರ್ಮದ ಹೆಸರಿನಲ್ಲಿ ರಾಜಕಾರಣ ಸಲ್ಲ: ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 12:53 IST
Last Updated 10 ನವೆಂಬರ್ 2018, 12:53 IST
ಮೈಸೂರಿನ ಕಲಾಮಂದಿರದಲ್ಲಿ ಟಿಪ್ಪು ಜಯಂತಿ ಅಂಗವಾಗಿ ಅಳವಡಿಸಿದ್ದ ಸಿ.ಸಿ.ಟಿ.ವಿ ನಿಯಂತ್ರಣಾ ಘಟಕವನ್ನು ಪೊಲೀಸರು ನಿರ್ವಹಿಸಿದರು
ಮೈಸೂರಿನ ಕಲಾಮಂದಿರದಲ್ಲಿ ಟಿಪ್ಪು ಜಯಂತಿ ಅಂಗವಾಗಿ ಅಳವಡಿಸಿದ್ದ ಸಿ.ಸಿ.ಟಿ.ವಿ ನಿಯಂತ್ರಣಾ ಘಟಕವನ್ನು ಪೊಲೀಸರು ನಿರ್ವಹಿಸಿದರು   

ಮೈಸೂರು: ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿದರೆ ಜನರು ಕ್ಷಮಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿದ್ದು ಸಾಕು. ಇನ್ನುಮುಂದೆ ಅದು ನಡೆಯುವುದಿಲ್ಲ. ಜನರೀಗ ವಿದ್ಯಾವಂತರಾಗಿದ್ದಾರೆ. ಧರ್ಮದ ವಿಚಾರದಲ್ಲಿ ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿಕಟ್ಟಿ ತಾತ್ಕಾಲಿಕವಾಗಿ ಮನಸುಗಳನ್ನು ಕೆಡಿಸಬಹುದು. ಆದರೆ, ಕೋಮುವಾದ, ಜಾತೀಯತೆಯನ್ನು ಬಿತ್ತಿದರೆ ಅದರ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದು ಅವರು ಕಿಡಿಕಾರಿದರು.

ADVERTISEMENT

ಗಾಂಧಿ, ಅಂಬೇಡ್ಕರ್‌, ಜಗಜೀವನರಾಂ, ಕನಕ, ಕೆಂಪೇಗೌಡ ಜಯಂತಿಯ ಆಚರಣೆಯಾಗುತ್ತಿರುವಾಗ ಟಿಪ್ಪು ಜಯಂತಿಗೆ ಏಕೆ ವಿರೋಧ. ಟಿಪ್ಪು ಕನ್ನಡ ಪ್ರೇಮಿಯಾಗಿದ್ದ, ರೈತಪರವಾಗಿದ್ದ ರಾಜ. ಮುಸಲ್ಮಾನರ ಅಭಿವೃದ್ಧಿ ಮಾತ್ರವೇ ಹಿಂದೂಗಳ ಶ್ರೇಯಸ್ಸಿಗೂ ತುಡಿದಿದ್ದರು. ಹೀಗಿರುವಾಗ ಸಕಾರಣವೇ ಇಲ್ಲದೇ ಟಿಪ್ಪುವಿನ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

‘ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಸಮಾನತೆಯೇ ಅಂಬೇಡ್ಕರ್‌ ಅವರ ಸಂವಿಧಾನದ ಆಶಯ. ಅದನ್ನು ಗೌರವಿಸುವ ನಿಟ್ಟಿನಲ್ಲಿ ನಾವು ಬದುಕಿದರೆ ವಿಶ್ವ ಮೆಚ್ಚುವ ರಾಷ್ಟ್ರಕಟ್ಟಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಶಾಸಕ ತನ್ವೀರ್ ಸೇಠ್‌ ಅತಿಥಿಯಾಗಿ ಮಾತನಾಡಿ, ಟಿಪ್ಪು ಅನ್ಯ ಧರ್ಮಕ್ಕೆ ಸೇರಿದ್ದರೆ ಮೈಸೂರಿನ ಪ್ರತಿ ವೃತ್ತಗಳಲ್ಲೂ ಅವರ ಪ್ರತಿಮೆ ನಿರ್ಮಾಣವಾಗುತ್ತಿತ್ತು. ಟಿಪ್ಪುವಿನ ಧರ್ಮವೇ ದೊಡ್ಡದಾಗಿಬಿಟ್ಟಿದೆ. ಗಾಂಧಿಯನ್ನು ಕೊಂದವರು ದೇಶಪ್ರೇಮದ ಬಗ್ಗೆ ಪಾಠ ಹೇಳುವಂತಾಗಿದೆ. ಜಲಿಯನ್ ವಾಲಾಬಾಗ್‌ನಲ್ಲಿ ಮಡಿದವರ ದೇಶಪ್ರೇಮ ಅವರಿಗೆ ಬೇಕಾಗಿಲ್ಲ. ಅಹಿಂಸೆಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯೂ ಅವರಿಗೆ ಬೇಡವಾಗಿದ್ದಾರೆ ಎಂದು ವಿಷಾದದಿಂದ ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜ್ಯೋತಿ, ಮೈಸೂರು ಮಹಾನಗರಪಾಲಿಕೆ ಆಯುಕ್ತ ಕೆ.ಎ‌ಚ್.ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೀಶ್‌, ತಹಶೀಲ್ದಾರ್‌ ರಮೇಶ್‌ ಬಾಬು, ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕಾಂಗ್ರೆಸ್‌ ಮುಖಂಡ ಅಯೂಬ್‌ ಖಾನ್, ಬ್ರಾಹ್ಮಣ ಸಮುದಾಯದ ಮುಖಂಡ ಕೆ.ರಘುರಾಮ್‌, ಧರ್ಮಗುರು ಪ್ರಕಾಶ್‌ ಯೋಗಿ ಭಾಗವಹಿಸಿದ್ದರು.

ಟಿಪ್ಪು ಪೀಠ ಸ್ಥಾಪನೆಯಾಗಲಿ

ಮೈಸೂರು ವಿಶ್ವವಿದ್ಯಾಲಯದಲ್ಲಿ ಟಿಪ್ಪು ಅಧ್ಯಯನ ಪೀಠ ಸ್ಥಾಪನೆಯಾಗಲಿ ಎಂದು ಶಾಸಕ ತನ್ವೀರ್ ಸೇಠ್‌ ಮನವಿ ಮಾಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತುಮಕೂರು ವಿಶ್ವವಿದ್ಯಾಲಯದಲ್ಲಿ ಟಿಪ್ಪು ಪೀಠ ಸ್ಥಾಪಿಸುವುದಾಗಿ ಘೋಷಿಸಿದ್ದರು. ಈ ಪೀಠ ಮೈಸೂರು ವಿ.ವಿ.ಯಲ್ಲಿ ಸ್ಥಾಪನೆಯಾಗಲಿ. ಉನ್ನತ ಶಿಕ್ಷಣ ಸಚಿವರು ಈ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಗಿ ಬಂದೋಬಸ್ತ್‌

ಟಿಪ್ಪು ಜಯಂತಿ ಅಂಗವಾಗಿ ಕಲಾಮಂದಿರ ಸೇರಿದಂತೆ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನೀಡಲಾಗಿತ್ತು.

ಕಲಾಮಂದಿರದ ಆವರಣದಲ್ಲೇ 20ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಐವರು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 120 ಪೊಲೀಸ್ ಸಿಬ್ಬಂದಿ, ಪೊಲೀಸ್ ಕಮ್ಯಾಂಡ್‌ ಸೆಂಟರ್‌, ಕಲಾಮಂದಿರದ ಬಾಗಿಲಿಗೆ ಜೋಡಿ ಲೋಹ ಪತ್ತೆ ಸಾಧನಗಳನ್ನು ಅಳವಡಿಸಲಾಗಿತ್ತು.

ಕಲಾಮಂದಿರದ ಒಳಭಾಗದಲ್ಲಿ ನಿರ್ಮಿಸಲಾಗಿದ್ದ ಸಿ.ಸಿ.ಟಿ.ವಿ ನಿಯಂತ್ರಣಾ ಘಟಕದಿಂದಲೇ ಎಲ್ಲ ದಿಕ್ಕುಗಳನ್ನೂ ಏಕಕಾಲದಲ್ಲಿ ವೀಕ್ಷಿಸಲಾಗುತ್ತಿತ್ತು. ಕಲಾಮಂದಿರದ ಪ್ರವೇಶ ದ್ವಾರಗಳು, ಹೆಬ್ಬಾಗಿಲು, ವೇದಿಕೆ ಸೇರಿದಂತೆ ಎಲ್ಲ ಆಯಕಟ್ಟಿನ ಪ್ರದೇಶಗಳ ಮೇಲೆ ನಿಗಾ ಇಡಲಾಗಿತ್ತು.

ನಗರದ ವಿವಿಧ ಭಾಗಗಳಲ್ಲಿ 100ಕ್ಕೂ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಯಾವುದೇ ಅಹಿತರಕರ ಘಟನೆ ನಡೆದರೂ ಪತ್ತೆ ಹಚ್ಚುವ ನಿಟ್ಟಿನಲ್ಲಿ ಈ ಕ್ರಮವನ್ನು ಪೊಲೀಸರು ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.