ADVERTISEMENT

Republic Day 2026: ಭಾರತೀಯರನ್ನು ಬೆಸೆದ ಗಣರಾಜ್ಯ ದಿನ – ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:57 IST
Last Updated 26 ಜನವರಿ 2026, 7:57 IST
   

ಮೈಸೂರು: ‌ತ್ರಿವರ್ಣ ಧ್ವಜ ಹಿಡಿದು ಬಂದ ಚಿಣ್ಣರು 77ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ದೇಶಪ್ರೇಮದ ಹಾಡುಗಳಿಗೆ ಹೆಜ್ಜೆ ಹಾಕಿದ್ದರಲ್ಲದೇ, ನೋಡುಗರಲ್ಲಿ ಕಿಚ್ಚು ಹೊತ್ತಿಸಿದರು.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ, ಮೈಸೂರು ಅಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಸೋಮವಾರ ಆಯೋಜಿಸಿದ್ದ ಉತ್ಸವದಲ್ಲಿ ಶಾಲಾ ಸಮವಸ್ತ್ರದ ಜೊತೆಗೆ ವಿವಿಧ ವೇಷಧಾರಿಗಳಾಗಿ ಬಂದವರು, ನೃತ್ಯದ ಮೂಲಕ ಭಾರತದ ಐಕ್ಯತೆ ಹಾಗೂ ಸಮಗ್ರತೆಯನ್ನು ಸಾರಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.

ADVERTISEMENT

ನಂತರ ಪಥಸಂಚಲನದಲ್ಲಿ ಸಶಸ್ತ್ರದಳ, ಎನ್‌ಸಿಸಿ, ಭಾರತೀಯ ಸೇವಾದಳ, ಮಹಿಳಾ ಪಡೆ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಅರಮನೆ ಪೊಲೀಸ್‌ ಬ್ಯಾಂಡ್‌ ಸೇರಿದಂತೆ 24 ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, 'ಗಣರಾಜ್ಯ ದಿನವು ಎಲ್ಲ ಭಾರತೀಯರನ್ನು ಭಾವನಾತ್ಮಕ, ಭಾಷಿಕ, ಭೌಗೋಳಿಕ ಹಾಗೂ ಆಡಳಿತಾತ್ಮಕವಾಗಿ ಬೆಸುಗೆ ಹಾಕಿದ ದಿನವಾಗಿದೆ. ಶ್ರೇಷ್ಠ ಸಂವಿಧಾನವನ್ನು ಎಲ್ಲ ಭಾರತೀಯರು ಮನಃಪೂರ್ವಕವಾಗಿ ಅಂತಃಕರಣದಿಂದ ಒಪ್ಪಿ ಸಂತಸಪಟ್ಟ ದಿನವಾಗಿದೆ' ಎಂದರು.

'ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು 1950ರ ಜ.26 ರಿಂದ ಜಾರಿಗೆ ತರಲಾಯಿತು. ಆಂದಿನಿಂದಲೂ ಸಂವಿಧಾನ ದಿನ ಹಾಗೂ ಗಣರಾಜ್ಯೋತ್ಸವ ದಿನವನ್ನಾಗಿ ಸಂಭ್ರಮದಿಂದ ಆಚರಿಸುತ್ತೇವೆ' ಎಂದು ಹೇಳಿದರು.

'ಮಹಾತ್ಮ ಗಾಂಧೀಜಿ, ನೆಹರೂ, ನೇತಾಜಿ ಸೇರಿದಂತೆ ಪ್ರತಿ ಸ್ವಾತಂತ್ರ್ಯ ಹೋರಾಟಗಾರರನ್ನು ನಿತ್ಯ‌ ನೆನೆಯಬೇಕು. ದೇಶದ ಗಡಿ ಕಾಯುತ್ತಿರುವ ಸೈನಿಕರನ್ನು ಸ್ಮರಿಸಬೇಕು. ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ಶ್ರಮಿಸಬೇಕು' ಎಂದರು.

'ರಾಜ್ಯ ಸರ್ಕಾರವು ಭವ್ಯ ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸಲು ಸರ್ಕಾರಿ ಸಭೆ, ಸಮಾರಂಭಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ವಾಚನವನ್ನು ಕಡ್ಡಾಯಗೊಳಿಸಿದೆ. ಸರ್ಕಾರದ ಮೂಲ ಧ್ಯೇಯ ಸಮಾನತೆ ಮತ್ತು ಸಾಮಾಜಿಕ ನ್ಯಾಯವಾಗಿದೆ. ಶೋಷಿತರು ಮತ್ತು ಹಿಂದುಳಿದ ವರ್ಗದವರ ಏಳಿಗೆ, ಮಹಿಳಾ ಸಬಲೀಕರಣಕ್ಕಾಗಿ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ' ಎಂದು ಹೇಳಿದರು.

ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಸಂಸದ ಸುನಿಲ್ ಬೋಸ್, ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಜಿಪಂ ಸಿಇಒ ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಮಲ್ಲಿಕಾರ್ಜುನ ಬಾಲದಿಂಡಿ, ಎಡಿಸಿ ಪಿ.ಶಿವರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.