ADVERTISEMENT

ನಿರಾಶ್ರಿತರಿಗೆ ಪುನರ್‌ವಸತಿ; ಹಸಿದವರಿಗೆ ಊಟ

ಮೈಸೂರಿನಲ್ಲಿ ಖಾಸಗಿ ಕ್ಲಿನಿಕ್–ಆಸ್ಪತ್ರೆ ಮುಚ್ಚಿದ್ದಾಗ 20 ಸಾವಿರ ಜನರಿಗೆ ಚಿಕಿತ್ಸೆ: ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ

ಡಿ.ಬಿ, ನಾಗರಾಜ
Published 2 ಜುಲೈ 2020, 1:55 IST
Last Updated 2 ಜುಲೈ 2020, 1:55 IST
ಗುರುದತ್ತ ಹೆಗಡೆ
ಗುರುದತ್ತ ಹೆಗಡೆ   

ಮೈಸೂರು: ‘ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವುದು ಇಂದಿಗೂ ಸವಾಲಾಗಿದೆ. ಆರಂಭದ ದಿನಗಳಲ್ಲಿನ ಸೋಂಕನ್ನು ನಿಯಂತ್ರಿಸಿದ್ದ ಮೈಸೂರಿನಲ್ಲಿ ಇದೀಗ ಕೋವಿಡ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಂಟೈನ್‌ಮೆಂಟ್‌ ಜೋನ್‌ಗಳ ಸಂಖ್ಯೆಯೂ ಏರುಮುಖಿಯಾಗುತ್ತಿದೆ.’

‘ಹೊಸ ಸವಾಲು ಎದುರಿಸಲು ಮೈಸೂರು ಮಹಾನಗರ ಪಾಲಿಕೆ ಆಡಳಿತವೂ ಸಜ್ಜಾಗಿದೆ. ಮೂರು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಸಿಬ್ಬಂದಿ ಅಹೋರಾತ್ರಿ ತಂಡವಾಗಿ ಶ್ರಮಿಸುತ್ತಿದೆ’ ಎನ್ನುತ್ತಾರೆ ಕೊರೊನಾ ವಾರಿಯರ್‌ ಸಹ ಆಗಿರುವ ಪಾಲಿಕೆಯ ಆಯುಕ್ತ ಗುರುದತ್ತ ಹೆಗಡೆ.

‘ಸೋಂಕು ಪಸರಿಸುವಿಕೆಯ ಆರಂಭದ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದವು. ಮೈಸೂರಿನ ಜನರು ಅನಾರೋಗ್ಯಕ್ಕೀಡಾದರೆ ಚಿಕಿತ್ಸೆಯೇ ಎಲ್ಲಿಯೂ ದೊರೆಯದಾಗಿತ್ತು. ಈ ಸಂದರ್ಭ ಪಾಲಿಕೆ ಆಡಳಿತ ವಿವಿಧ ಸಂಘಟನೆಗಳು, ಆಸ್ಪತ್ರೆಗಳು, ಸಂಘ–ಸಂಸ್ಥೆಗಳ ಸಹಕಾರದಿಂದ ಕ್ಲಿನಿಕ್ ಆನ್‌ ವ್ಹೀಲ್ಸ್‌ ಆರಂಭಿಸಿತು.’

ADVERTISEMENT

‘ಜನರಿದ್ದಲ್ಲಿಗೆ ಹೋಗಿ ತಪಾಸಣೆ ನಡೆಸಿತು. ಚಿಕಿತ್ಸೆ ಕೊಟ್ಟಿತು. ನಿತ್ಯವೂ 10–12 ತಂಡಗಳು ನಗರದಲ್ಲಿ ಸಂಚರಿಸಿದವು. ಅಂದಾಜು 20 ಸಾವಿರ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಲಾಕ್‌ಡೌನ್‌ ಸಮಯದಲ್ಲಿ ಮೈಸೂರಿಗರ ಅನಾರೋಗ್ಯದ ಸಂಕಷ್ಟಕ್ಕೆ ಸ್ಪಂದಿಸಿದ್ದು ಸ್ಮರಣಾರ್ಹ ಸೇವೆ’ ಎಂದು ಗುರುದತ್ತ ಹೆಗಡೆ ತಮ್ಮ ಅನುಭವವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

ಆಸರೆ: ‘ಲಾಕ್‌ಡೌನ್‌ನಿಂದ ಮೈಸೂರು ನಗರದಲ್ಲಿ 600ಕ್ಕೂ ಹೆಚ್ಚು ನಿರಾಶ್ರಿತರು ಕಂಗಾಲಾಗಿದ್ದರು. ತಕ್ಷಣವೇ ನಗರದ ವಿವಿಧೆಡೆ 6 ಶಿಬಿರಗಳನ್ನು ಆರಂಭಿಸಿದ ಪಾಲಿಕೆ, ಎಲ್ಲರನ್ನೂ ಅಲ್ಲಿಗೆ ಸ್ಥಳಾಂತರಿಸಿ, ಅವರಿಗೆ ಊಟ–ವಸತಿಯ ವ್ಯವಸ್ಥೆ ಕಲ್ಪಿಸಿತ್ತು’ ಎಂದು ನೆನಪಿಸಿಕೊಂಡರು.

‘ಶಿಬಿರದಲ್ಲಿ ಆಸರೆ ಪಡೆದ ಎಲ್ಲರನ್ನೂ ಅವರ ಮನೆಗಳಿಗೆ ವಾಪಸ್ ಕಳುಹಿಸಿಕೊಡಲಾಯಿತು. ಇದರ ಜೊತೆಗೆ ಬಿಲ್ಡರ್ಸ್‌ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳ ಜೊತೆ ಚರ್ಚಿಸಿ ಹಲವರಿಗೆ ಉದ್ಯೋಗಾವಕಾಶವನ್ನು ಒದಗಿಸಿಕೊಟ್ಟೆವು. ಇದೀಗ ಬಹುತೇಕರು ಗಾರೆ ಸಹಾಯಕರು, ಪ್ಲಂಬರ್, ಬಣ್ಣ ಬಳಿಯುವ ಕೆಲಸ ಸೇರಿದಂತೆ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾನಸಿಕ ಅಸ್ವಸ್ಥರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಿದೆವು. ಯಾರೊಬ್ಬರನ್ನು ಮತ್ತೆ ರಸ್ತೆಗೆ ಬಿಡದಂತೆ ಕ್ರಮ ತೆಗೆದುಕೊಂಡೆವು’ ಎಂದು ಹೇಳಿದರು.

ಹಸಿದವರಿಗೆ ಅನ್ನ: ‘ಲಾಕ್‌ಡೌನ್‌ನ ಆರಂಭದ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕಿದವರು ಹಲವರು. ಹಸಿದ ಎಲ್ಲರಿಗೂ ಪಾಲಿಕೆ ಆಡಳಿತ ದಾನಿಗಳ ಸಹಕಾರದಿಂದ, ಸ್ವಯಂ ಸೇವಕರ ಸೇವೆಯಿಂದ ಊಟೋಪಚಾರದ ವ್ಯವಸ್ಥೆ ಕಲ್ಪಿಸಿ, ಹಸಿವು ನೀಗಿಸಿತ್ತು’ ಎಂದು ಗುರುದತ್ತ ಹೆಗಡೆ ತಿಳಿಸಿದರು.

‘ಯಾವೊಬ್ಬ ದಾನಿಯಿಂದ ಹಣ ಪಡೆಯಲಿಲ್ಲ. 50ಕ್ಕೂ ಹೆಚ್ಚು ದಾನಿಗಳು ಅಗತ್ಯ ವಸ್ತುಗಳನ್ನು ಕೊಟ್ಟರು. ಚಾಮುಂಡಿ ಬೆಟ್ಟದಲ್ಲಿನ ದಾಸೋಹಕ್ಕೆ ಅಕ್ಕಿ ನೀಡುತ್ತಿದ್ದ ವರ್ತಕರ ಸಂಘವೂ ಪಾಲಿಕೆಗೆ ನೀಡಿತ್ತು. ಸಾಕಷ್ಟು ಸಂಘ–ಸಂಸ್ಥೆಗಳು ಸಾಥ್ ನೀಡಿದ್ದವು. ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ಸೇವೆ ಒದಗಿಸಲು ಸಂಕಷ್ಟ ಎದುರಿಸುತ್ತಿದ್ದ ಪಾಲಿಕೆ ಆಡಳಿತದ ನೆರವಿಗೆ 200ಕ್ಕೂ ಹೆಚ್ಚು ಸ್ವಯಂ ಸೇವಕರು ಸಾಥ್ ನೀಡಿದ್ದರು’ ಎಂದು ನೆನಪು ಮಾಡಿಕೊಂಡರು.

ಐದು ತಿಂಗಳಿಂದ ರಜೆ ಪಡೆದಿಲ್ಲ

‘ಕೊರೊನಾ ಸೋಂಕು ಹರಡುವುದು ಆರಂಭಗೊಂಡ ಬಳಿಕ ಖಾಸಗಿ ಜೀವನ ಎಂಬುದೇ ಮರೆತು ಹೋಗಿದೆ. ಐದು ತಿಂಗಳಿನಿಂದ ಒಂದು ರಜೆಯನ್ನೂ ಪಡೆದಿಲ್ಲ’ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.

‘ನಾಯಕ ಸ್ಥಾನದಲ್ಲಿರುವ ನಾನೇ ಸಂಕಷ್ಟದಲ್ಲಿ ರಜೆ ತೆಗೆದುಕೊಂಡು ಕೂತರೇ ಮುಂಚೂಣಿ ವಹಿಸುವವರು ಯಾರು? ಜಿಲ್ಲಾಧಿಕಾರಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ನಮ್ಮ ಎಲ್ಲ ಸಿಬ್ಬಂದಿಗೂ ಒಂದೊಂದು ಹೊಣೆಗಾರಿಕೆಯನ್ನು ವಹಿಸಿ, ಕೊರೊನಾ ಸೋಂಕು ನಿಯಂತ್ರಿಸಲು ಶ್ರಮಿಸಲಾಗುತ್ತಿದೆ’ ಎಂದು ಹೇಳಿದರು.

ಎಲ್ಲರಿಗೂ ಜವಾಬ್ದಾರಿ

‘ಆರಂಭದ ದಿನಗಳಲ್ಲಿ ಎಲ್ಲೆಡೆಯೂ ಖುದ್ದು ಹಾಜರಿರಬೇಕಿತ್ತು. ಕಂಟೈನ್‌ಮೆಂಟ್ ಜೋನ್, ಸೀಲ್‌ಡೌನ್ ಮಾಡುವಾಗ ಉಪಸ್ಥಿತಿ ಇರಲೇಬೇಕಿತ್ತು. ಇದೀಗ ಎಲ್ಲರಿಗೂ ಜವಾಬ್ದಾರಿ ಬಂದಿದೆ. ನಮ್ಮಲ್ಲಿ ವಲಯ ಆಯುಕ್ತರೇ ಕಂಟೈನ್‌ಮೆಂಟ್‌ ಜೋನ್‌ನ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ’ ಎಂದು ಗುರುದತ್ತ ಹೆಗಡೆ ತಿಳಿಸಿದರು.

‘ಪಾಲಿಕೆಯ ಆರೋಗ್ಯ ತಂಡ ಹಗಲಿರುಳು ಸಕ್ರಿಯವಾಗಿದೆ. ಇರುವ 30 ಹೆಲ್ತ್‌ ಇನ್‌ಸ್ಪೆಕ್ಟರ್‌ಗಳ ಕಾರ್ಯಬಾಹುಳ್ಯ ಇದೀಗ ಸಾಕಷ್ಟು ಹೆಚ್ಚಿದೆ. ಕ್ವಾರಂಟೈನ್‌ ನಿಗಾ ವಹಿಸುವ ಜೊತೆಗೆ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಡೆಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.