ADVERTISEMENT

26 ವರ್ಷದ ಬಳಿಕ ಪ್ರೊ.ಮುಜಾಫರ್ ಅಸ್ಸಾದಿ ಕೈಸೇರಿದ ರಾಜೀನಾಮೆ ಅಂಗೀಕಾರ ಪತ್ರ!

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 14:30 IST
Last Updated 8 ಜೂನ್ 2023, 14:30 IST
ಪ್ರೊ.ಮುಜಾಫರ್ ಅಸ್ಸಾದಿ
ಪ್ರೊ.ಮುಜಾಫರ್ ಅಸ್ಸಾದಿ   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಹಾಗೂ ಭಾರತೀಯ ಸಮಾಜ ವಿಜ್ಞಾನ ಅಕಾಡೆಮಿ (ಐಎಸ್‌ಎಸ್‌ಎ) ಅಧ್ಯಕ್ಷರೂ ಆಗಿರುವ ಪ್ರೊ.ಮುಜಾಫರ್‌ ಅಸ್ಸಾದಿ ಅವರು ಗೋವಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ರಾಜೀನಾಮೆಯ ಅನುಮೋದನೆ ಪತ್ರ 26 ವರ್ಷಗಳ ಬಳಿಕ ಅವರ ಕೈಸೇರಿದೆ.

ಆ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಮೂರು ವರ್ಷ ಕೆಲಸ ಮಾಡಿದ್ದ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಸಿಕ್ಕಿದ್ದರಿಂದ ರಾಜೀನಾಮೆ ಸಲ್ಲಿಸಿದ್ದರು.

‘ಗೋವಾ ವಿಶ್ವವಿದ್ಯಾಲಯಕ್ಕೆ 1997ರಲ್ಲಿ ರಾಜೀನಾಮೆ ಸಲ್ಲಿಸಿದ್ದೆ. ನಿಮ್ಮ ರಾಜೀನಾಮೆಯನ್ನು ಶಿಕ್ಷಣ ಮಂಡಳಿ ಸಭೆಯಲ್ಲಿ ಅನುಮೋದಿಸಲಾಗಿದೆ. ರಾಜೀನಾಮೆ ಸಲ್ಲಿಸಿದ ದಿನದಿಂದಲೇ ಅನ್ವಯವಾಗಲಿದೆ ಎಂದು ಜೂನ್‌ 5ರಂದು ಪತ್ರ ಬಂದಿದೆ.

ADVERTISEMENT

ವಿಶ್ವವಿದ್ಯಾಲಯಗಳ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದಕ್ಕೆ ಈ ಪ್ರಸಂಗ ಕನ್ನಡಿ ಹಿಡಿದಿದೆ. ನಾನು ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಲು ಯಾವುದೇ ತೊಂದರೆಯಾಗಿರಲಿಲ್ಲ. ಅಲ್ಲಿಗೆ ರಾಜೀನಾಮೆ ಸಲ್ಲಿಸಿದ್ದ ಪತ್ರವನ್ನು ಇಲ್ಲಿಗೆ ನೀಡಿದ್ದೆ’ ಎಂದು ಅಸ್ಸಾದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.