ADVERTISEMENT

ರಜಾ ದಿನಗಳಂದೂ ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 16:21 IST
Last Updated 22 ಜುಲೈ 2021, 16:21 IST
   

ಮೈಸೂರು: ಕೋವಿಡ್-19 ಹಿನ್ನೆಲೆ ಹಾಗೂ ಸರ್ಕಾರದ ನಿರ್ದೇಶನದಂತೆ ಚಾಮುಂಡೇಶ್ವರಿ ದೇಗುಲ, ಚಾಮುಂಡಿ ಬೆಟ್ಟ, ಉತ್ತನಹಳ್ಳಿಯ ಜ್ವಾಲಾತ್ರಿಪುರ ಸುಂದರಿ ದೇಗುಲಕ್ಕೆ ಆಷಾಢ ಮಾಸದ ಅಮಾವಾಸ್ಯೆ, ಶುಕ್ರವಾರ, ಚಾಮುಂಡಿ ವರ್ಧಂತಿ ಮತ್ತು ಆಷಾಢ ಮಾಸದಲ್ಲಿ ಬರುವ ಎಲ್ಲಾ ಶನಿವಾರ, ಭಾನುವಾರ, ಸಾರ್ವತ್ರಿಕ ರಜಾ ದಿನಗಳಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಆದಾಗ್ಯೂ ಭಕ್ತರು ಈ ದಿನಗಳಂದು ಚಾಮುಂಡಿಬೆಟ್ಟಕ್ಕೆ ಬರುವ ಪ್ರಯತ್ನ ಮಾಡಿ, ಪ್ರವೇಶ ಸಿಗದೆ ವಾಪಸಾಗುವುದು ಸಾಮಾನ್ಯವಾಗಿದ್ದು, ಅನಾನುಕೂಲವಾಗಿದೆ. ಸಾರ್ವಜನಿಕರು ಈ ನಿರ್ಬಂಧಿತ ದಿನಗಳಂದು ಚಾಮುಂಡಿಬೆಟ್ಟಕ್ಕೆ ಬರಬಾರದು ಎಂದು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮನವಿ ಮಾಡಿದ್ದಾರೆ.

ನಿಷೇಧಿತ ಸಮಯದಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದು ಬಂದಿರುವ ರೂಢಿ ಸಂಪ್ರದಾಯದಂತೆ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಅಧಿಕಾರಿಗಳು, ಅರ್ಚಕರು–ಸಿಬ್ಬಂದಿ ಮಾತ್ರ ದೇವಾಲಯದ ಆವರಣದಲ್ಲಿ ನಡೆಸುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ನಿಷೇಧಿತ ಅವಧಿಯಲ್ಲಿ ಮೆಟ್ಟಿಲು ಮಾರ್ಗದಿಂದ ಚಾಮುಂಡಿಬೆಟ್ಟಕ್ಕೆ ಭಕ್ತರು ಮತ್ತು ಸಾರ್ವಜನಿಕರು ಬರುವುದನ್ನು ನಿಷೇಧಿಸಲಾಗಿದೆ. ದೇವಾಲಯದ ವತಿಯಿಂದಾಗಲಿ ಅಥವಾ ದಾನಿಗಳ ವತಿಯಿಂದಾಗಲಿ ದಾಸೋಹ, ಊಟದ ವ್ಯವಸ್ಥೆ ಮಾಡುವುದು ಅಥವಾ ಪ್ರಸಾದ ವಿತರಣೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

ನಿಗದಿತ ಪ್ರವೇಶ ದಿನಗಳಂದು ಪೂರ್ತಿ ದಿನ ಹಾಗೂ ಇತರೆ ದಿನಗಳಂದು ಸಂಜೆ 6 ಗಂಟೆ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು, ಚಾಮುಂಡಿಬೆಟ್ಟದ ಗ್ರಾಮಸ್ಥರ ವಾಹನಗಳು ಮತ್ತು ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ, ಇತರೆ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಚಾಮುಂಡಿ ಬೆಟ್ಟದ ಗ್ರಾಮಸ್ಥರು ವಾಹನ ಬಳಸುವ ಅನಿವಾರ್ಯ ಸಂದರ್ಭದಲ್ಲಿ ವಾಸಸ್ಥಳ ದೃಢೀಕರಣ ಚೀಟಿ ಬಳಸಬಹುದು. ದೇವಾಲಯದ ರೂಢಿ ಸಂಪ್ರದಾಯದಂತೆ ಮಹಾ ಮಂಗಳಾರತಿಯು ಮುಕ್ತಾಯಗೊಂಡ ತಕ್ಷಣ ದೇಗುಲದ ಬಾಗಿಲನ್ನು ಮುಚ್ಚಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.